ಬಾಗಲಕೋಟೆ: ಮಾರುಕಟ್ಟೆಯಲ್ಲಿ ಗಣೇಶ ಮೂರ್ತಿಗಳ ಮಾರಾಟದ ಭರಾಟೆ ಜೋರಾಗಿದೆ. ನಿಷೇಧದ ಮಧ್ಯೆಯೂ ಪಿಒಪಿ ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.
ಬಾಗಲಕೋಟೆ ನಗರದ ಸಾಂಪ್ರದಾಯಿಕ ಗಣೇಶ ತಯಾರಿಕರು ಮಣ್ಣಿನ ಗಣೇಶನನ್ನೇ ಸಿದ್ಧಪಡಿಸಿದ್ದು, ಭಾರೀ ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ. ಮನೆಯಲ್ಲಿ ಪ್ರತಿಷ್ಠಾಪಿಸುವ ಚಿಕ್ಕ ಗಣೇಶ ಮೂರ್ತಿಗಳು 350 ರೂ. ಗಳಿಂದ ಶುರುವಾಗುತ್ತಿದ್ದು, ಮೂರುವರೆಯಿಂದ ನಾಲ್ಕು ಅಡಿಯ ಮಣ್ಣಿನ ಗಣೇಶ ಮೂರ್ತಿಗಳು 15 ಸಾವಿರ ರೂ.ಗಳವರೆಗೆ ಮಾರಾಟ ಮಾಡಲಾಗುತ್ತಿದೆ ಎಂದು ತಯಾರಿಕ ರವಿ ಪೇಟ್ಕರ್ ಮಾಹಿತಿ ನೀಡಿದರು.
ಗ್ರಾಮೀಣ ಭಾಗದ ಯುವಕ ಮಂಡಳಿಗಳು, ಮನೆಯಲ್ಲಿ ಪ್ರತಿಷ್ಠಾಪಿಸಲು ಸಾರ್ವಜನಿಕರು ಸೋಮವಾರದಿಂದಲೇ ಖರೀದಿಗೆ ಮುಂದಾಗಿದ್ದು, ಹಲವರು ತಮ್ಮ ಆಯ್ಕೆಯ ಗಣೇಶ ಮೂರ್ತಿಯನ್ನು ಮುಂಗಡವಾಗಿ ಕಾಯ್ದಿರಿಸಿದ್ದಾರೆ.
ಗಣೇಶ ವಿಸರ್ಜನೆಯನ್ನು ನಗರದ ಕಾರಿಹಳ್ಳ, ಮಹಾರುದ್ರಪ್ಪನ ಹಳ್ಳ ಹಾಗೂ ಶಿವಾಲಯ ಬಳಿಯ ಕ್ವಾರಿಯಲ್ಲಿ ಮಾಡಲಾಗುತ್ತದೆ. ಬಾಗಲಕೋಟೆ ನಗರದಲ್ಲಿರುವ ಕಾರಿಹಳ್ಳದ ಬಳಿ ಗಣೇಶ ವಿಸರ್ಜನೆಯನ್ನು ಶಹರ ಸಿಪಿಐ ಗುರುನಾಥ ಚವಾಣ ಅವರು ಸಿಬ್ಬಂದಿಯೊಂದಿಗೆ ವೀಕ್ಷಿಸಿದರು.
ಗಣಪ್ಪನಿಗೆ ವಿಚಿತ್ರ ಹೆಸರು: ಸೋಷಿಯಲ್ ಮೀಡಿಯಾ ಪ್ರಭಾವದಿಂದಾಗಿ ಗಣೇಶ ಮಂಡಳಿಗಳು ಜಿದ್ದಿಗೆ ಬಿದ್ದಂತೆ ತಮ್ಮ ಗಣಪ್ಪನಿಗೆ ಹೊಸ, ಹೊಸ ಹೆಸರುಗಳನ್ನು ಇಡುತ್ತಿವೆ. ಒಂದೇ ಪ್ರದೇಶದಲ್ಲಿ ಎರಡು ಮಂಡಳಿಗಳಿದ್ದರೆ ಒಬ್ಬರು ತಮ್ಮ ಮಂಡಳಿ ಗಣೇಶನನ್ನು ರಾಜ ಎಂದು ಕರೆದುಕೊಂಡಿರುವ ಫ್ಲೆಕ್ಸ್ ಅಳವಡಿಸಿದರೆ, ಮತ್ತೊಬ್ಬರು ಮಹಾರಾಜ, ಸಾಮ್ರಾಟ್ ಎಂದೆಲ್ಲ ಇಡುತ್ತಿದ್ದಾರೆ. ಇನ್ನೂ ಕೆಲವು ಕಡೆಗಳಲ್ಲಿ ಮಂಡಳಿಯ ಯುವಕರು ಮತ್ತೊಂದು ಮಂಡಳಿಯನ್ನು ಹಿಯಾಳಿಸುವ ರೀತಿಯಲ್ಲಿ ಚಾಲೆಂಜ್ ಹಾಕುವ ವಿಡಿಯೋಗಳನ್ನು ಮಾಡಿ ಬಿಡುತ್ತಿದ್ದಾರೆ. ಸಾರ್ವಜನಿಕವಾಗಿ ನಡೆಯುವ ಉತ್ಸವಗಳು ಖುಷಿ, ಸಂಭ್ರಮ ಸೃಷ್ಟಿಸಬೇಕು. ಅದನ್ನು ಬಿಟ್ಟು ಹೀಗೆ ಜಿದ್ದಿಗೆ ಬೀಳುವಂತೆ ಮಾಡುತ್ತಿರುವುದು ವಿಚಿತ್ರ ಎನಿಸುವ ರೀತಿಯಲ್ಲಿ ಕಂಡು ಬರುತ್ತಿದೆ.
ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ: ಜಿಲ್ಲೆಯಾದ್ಯಂತ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಆಗಸ್ಟ್ 27 ರಿಂದ ಸೆಪ್ಟೆಂಬರ್ 16 ವರೆಗೆ ಮದ್ಯಪಾನ ಮಾರಾಟ ಮತ್ತು ಸಾಗಾಣಿಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿ ಸಂಗಪ್ಪ ಆದೇಶ ಹೊರಡಿಸಿದ್ದಾರೆ.
ಬಾಗಲಕೋಟೆ ತಾಲೂಕಿನಾದ್ಯಂತ ಆಗಸ್ಟ 26ರ ಮಧ್ಯರಾತ್ರಿಯಿಂದ 28ರ ಬೆಳಿಗ್ಗೆ 6 ಗಂಟೆವರೆಗೆ, ಆ. 30ರ ಮಧ್ಯರಾತ್ರಿಯಿಂದ ಸೆ. 1 ಬೆಳಿಗ್ಗೆ 6 ಗಂಟೆವರೆಗೆ, ಸೆ. 1ರ ಮಧ್ಯರಾತ್ರಿಯಿಂದ ಸೆ. 3ರ ಬೆಳಿಗ್ಗೆ 6 ಗಂಟೆವರೆಗೆ ಸೆ. 3ರ ಮಧ್ಯರಾತ್ರಿಯಿಂದ ಸೆ. 5 ಬೆಳಿಗ್ಗೆ 6 ಗಂಟೆವರೆಗೆ, ಬೀಳಗಿ ತಾಲೂಕಿನಾದ್ಯಂತ ಆ. 26ರ ಮಧ್ಯರಾತ್ರಿಯಿಂದ 28 ಬೆಳಿಗ್ಗೆ 6 ಗಂಟೆ, ಆ. 30ರ ಮಧ್ಯರಾತ್ರಿಯಿಂದ ಸೆ. 1 ಬೆಳಿಗ್ಗೆ 6 ಗಂಟೆ, ಸೆ. 1ರ ಮಧ್ಯರಾತ್ರಿಯಿಂದ ಸೆ. 3 ಬೆಳಿಗ್ಗೆ 6 ಗಂಟೆ, ಸೆ. 3ರ ಮಧ್ಯರಾತ್ರಿಯಿಂದ ಸೆ. 5ರ ಬೆಳಿಗ್ಗೆ 6 ಗಂಟೆ, ಸೆ. 5ರ ಮಧ್ಯರಾತ್ರಿಯಿಂದ ಸೆ. 7 ಬೆಳಿಗ್ಗೆ 6 ಗಂಟೆ ಹಾಗೂ ಸೆ. 15ರ ಮಧ್ಯರಾತ್ರಿಯಿಂದ ಸೆ. 17 ಬೆಳಿಗ್ಗೆ 6 ಗಂಟೆವರೆಗೆ ನಿಷೇಧಿಸಲಾಗಿದೆ.