ಬಾಗಲಕೋಟೆ: ಕೆಎಸ್‌ಆರ್‌ಟಿಸಿ ಬಸ್‌ಗೆ ಟೊಯೊಟಾ ಇನ್ನೋವಾ ಕಾರು ಡಿಕ್ಕಿ ಹೊಡೆದು ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹುಬ್ಬಳ್ಳಿ – ಸೋಲಾಪುರ ಹೆದ್ದಾರಿಯ ಹೂಲಗೇರಿ ಕ್ರಾಸ್‌ನಲ್ಲಿ ಜರುಗಿದೆ.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಡಾ. ಸಾಗರ ತೆಕ್ಕನ್ನವರ ಮೃತಪಟ್ಟವರೆಂದು ಗುರುತಿಸಲಾಗಿದೆ. ಬಸ್ ಓವರ್‌ಟೆಕ್ ಮಾಡಲು ಹೋಗಿ ಕಾರು ಡಿಕ್ಕಿ ಹೊಡೆದಿದ್ದು, ಇನ್ನೋವಾ ಕಾರನ್ನು ಚಾಲನೆ ಮಾಡುತ್ತಿದ್ದ ಸಾಗರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ನಿವೃತ್ತ ಪ್ರಾಚಾರ್ಯರಾಗಿರುವ ಡಾ. ಸಾಗರ, ಬೀಳಗಿ ತಾಲೂಕಿನ ನಾಗರಾಳದವರು. ತಮ್ಮ ಸೌಮ್ಯ ಸ್ವಭಾವದ ಮೂಲಕ ಎಲ್ಲರೊಂದಿಗೆ ಆಪ್ತ ಒಡನಾಟ ಇರಿಸಿಕೊಂಡಿದ್ದರು. ಸಹಕಾರಿ ಬ್ಯಾಂಕ್ ಕಟ್ಟುವ ತಯಾರಿಯಲ್ಲಿದ್ದ ಅವರು ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿದ್ದರು.
ಅಪಘಾತದಲ್ಲಿ ಬಸ್ಸಿನ ಗಾಜುಗಳು ಪುಡಿಯಾಗಿದ್ದು, ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಬಸ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೆರೂರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ಕೈಗೊಂಡಿದ್ದಾರೆ.
