ಕೋಲಾರ: ರಾಜ್ಯದ ನೀರಾವರಿ ತಜ್ಞ ಡಾ. ಮಧು ಸೀತಪ್ಪ (59) ಬುಧವಾರ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಶಿವಪುರದ ತಮ್ಮ ಫಾರ್ಮ್ ಹೌಸ್‌ನಲ್ಲಿ ರಾತ್ರಿ ಮಲಗಿದ್ದವರು ಬೆಳಗ್ಗೆ ಏಳಲಿಲ್ಲ. ಲಂಡನ್‌ನಲ್ಲಿ ನೇತ್ರ ತಜ್ಞರಾಗಿದ್ದ ಮಧುಸೀತಪ್ಪ ಅವರು ಕೋಲಾರ – ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಕಲ್ಪಿಸಿಕೊಡುವ ಕನಸು ಕಂಡಿದ್ದರು.
ಆರಂಭದಲ್ಲಿ ಲಂಡನ್ನಿಂದಲೇ ನೀರಾವರಿ ಹೋರಾಟಕ್ಕೆ ಚಾಲನೆ ನೀಡಿದ್ದ ಮಧುಸೀತಪ್ಪ ಅವಳಿ ಜಿಲ್ಲೆಗಳ ನೀರಾವರಿ ಸ್ಥಿತಿಗತಿ ಕುರಿತು 2012ರಲ್ಲಿ ‘ಮತ್ತೆ ಬರ ಬೇಡ’ ಡಾಕ್ಯುಮೆಂಟರಿ ಸಿದ್ಧಪಡಿಸಿ ನೀರಾವರಿ ಹೋರಾಟಕ್ಕೆ ತೀವ್ರ ಗತಿ ನೀಡಿದ್ದರು.
ನಂತರ ಲಂಡನ್ ಕೆಲಸ ತ್ಯಜಿಸಿ ಬಂದು ತಮ್ಮ ತವರೂರಾದ ಚಿಂತಾಮಣಿ ತಾಲೂಕಿಗೆ ಸಮೀಪದ ಶಿವಪುರದಲ್ಲಿ ಫಾರ್ಮ್ ಹೌಸ್ ನಿರ್ಮಿಸಿದ್ದರು. 2023 ವಿಧಾನ ಸಭಾ ಚುನಾವಣೆಯಲ್ಲಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಎಎಪಿ ಪಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು.
ಈ ಹಿಂದೆ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಮಧು ಸೀತಪ್ಪ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಅತ್ಯಂತ ಆಪ್ತರಾಗಿದ್ದರು. ಚಿಕ್ಕಬಳ್ಳಾಪುರದಿಂದ
ಲೋಕಸಭಾ ಚುನಾವಣೆ ಸ್ಪರ್ಧಾಕಾಂಕ್ಷಿಯಾಗಿದ್ದು ಟಿಕೆಟ್ ದೊರೆಯದ ಕಾರಣ ಎಎಪಿ ಸೇರಿದ್ದರು.
ಮಧು ಸೀತಪ್ಪ ಅವರ ಪತ್ನಿ ಹಾಗೂ ಪುತ್ರ ಲಂಡನ್‌ನಲ್ಲಿಯೇ ವಾಸವಿದ್ದು ಶುಕ್ರವಾರ ಭಾರತಕ್ಕೆ ಬಂದ ನಂತರ ಅಂತ್ಯಕ್ರಿಯೆ ನಡೆಯಲಿದೆ.