ಚುನಾವಣೆಯ ಮೂಲಕ ಉದ್ಭವಮೂರ್ತಿಯಂತೆ ಅವತರಿಸುವ ಜನಾದೇಶ ಜನತಂತ್ರ ಪದ್ಧತಿಯಲ್ಲಿ ಬ್ರಹ್ಮಾಸ್ತ್ರ; ಏಕೆಂದರೆ, ಸಾರ್ವಜನಿಕರ ಕಷ್ಟ ನಿಷ್ಠೂರಗಳ ಪರಿಹಾರಕ್ಕೆ ಮಾರ್ಗೋಪಾಯಗಳನ್ನು ರೂಪಿಸುವ ಜೊತೆಗೆ ಆಡಳಿತ ವ್ಯವಸ್ಥೆಯಲ್ಲಿ ಎದುರಾಗುವ ಸಮಸ್ಯೆಗಳ ನಿವಾರಣೆಗೆ ಶಾಸನಾತ್ಮಕ ಪರಿಹಾರಗಳನ್ನು ಕಂಡುಕೊಂಡು ಜಾರಿಗೊಳಿಸಲು ಅವಕಾಶ ಕಲ್ಪಿಸುವ ಈ ಬ್ರಹ್ಮಾಸ್ತ್ರದ ಸುತ್ತ ಪ್ರದಕ್ಷಿಣೆ ತಿರುಗುವುದೇ ಸಾರ್ವಜನಿಕರ ಆಶೋತ್ತರ. ಮುಖ್ಯಮಂತ್ರಿಯಿಂದ ಹಿಡಿದು ಶಾಸಕರವರೆಗೆ ಅಧಿಕಾರ ಒದಗಿಸುವ ಈ ಬ್ರಹ್ಮಾಸ್ತ್ರಕ್ಕೆ ಪರ್ಯಾಯ ಮಾರ್ಗಗಳು ಇದ್ದರೂ ಕೂಡಾ ಆ ಒಂದು ನೀತಿಯಲ್ಲಿ ನಿಶ್ಯಕ್ತ ಅಸ್ತ್ರಗಳು.
ಆದರೆ, ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ಈ ನಿಶ್ಯಕ್ತ ಅಸ್ತ್ರಗಳಿಗೆ ಜೀವ ತುಂಬಿ ಪರ್ಯಾಯ ಬ್ರಹ್ಮಾಸ್ತ್ರಗಳ ರೂಪ ಕೊಡುವ ಸನ್ನಾಹಗಳು ಜರುಗಲು ಮುಖ್ಯ ಕಾರಣ ರಾಜಕಾರಣದಲ್ಲಿ ತಿರುಗುಬಾಣದ ಗಾಳಿ ಎಬ್ಬಿಸುವುದು. ಇದಕ್ಕೆ ಕಾರಣ ಹಾಗೂ ಪ್ರೇರಣೆ ಏನೆಂಬುದು ನಿಶ್ಯಕ್ತ ಶಸ್ತ್ರಾಸ್ತ್ರಗಳ ಬಳಕೆದಾರರಿಗೆ ಹಾಗೂ ಅವುಗಳನ್ನು ಛೂ ಬಿಟ್ಟವರಿಗೆ ಮಾತ್ರ ಗೊತಾಗುವ ಸಂಗತಿ. ಆದರೆ, ಕ್ಷಣಾರ್ಧದಲ್ಲಿ ಲೋಕದ ಗುಟ್ಟುಗಳೇ ಬಯಲಾಗುವ ಈ ಕಲಿಗಾಲದಲ್ಲಿ ಎಲ್ಲವೂ ಬಯಲು ಹೌದು – ಅದೇ ಆಲಯವೂ ಹೌದು.
ಜನಾದೇಶದ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ಆಡಳಿತ ವ್ಯವಸ್ಥೆಯ ಜವಾಬ್ದಾರಿ ಹೊತ್ತವರು. ಸಾಂವಿಧಾನಿಕವಾಗಿ ಸ್ಥಾನಮಾನ ಇಲ್ಲದಿದ್ದರೂ ಪರಸ್ಪರ ಸಮ್ಮತಿಯ ಮೂಲಕ ಸೃಷ್ಟಿಯಾದ ಉಪ ಮುಖ್ಯಮಂತ್ರಿ ಸ್ಥಾನದಲ್ಲಿರುವ ಡಿ.ಕೆ. ಶಿವಕುಮಾರ್ ಜಂಟಿ ಜವಾಬ್ದಾರಿ ಸ್ಥಾನದಲ್ಲಿರುವವರು. ಜೊತೆಗೆ ಡಿ.ಕೆ.ಶಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರೂ ಕೂಡಾ. ಹೀಗಾಗಿ ಇವರಿಬ್ಬರ ನಾಯಕತ್ವದಲ್ಲಿ ಇಲ್ಲವೇ ಪ್ರತ್ಯೇಕವಾಗಿ ಶಾಸಕರ ಸಭೆ ಏರ್ಪಡಿಸುವ ಅಥವಾ ವೈಯಕ್ತಿಕವಾಗಿ ಮುಖಾಮುಖಿ ಚರ್ಚೆ ಮಾಡುವ ಅಧಿಕಾರ ಅವರಿಗಿದೆ. ಇವರಿಬ್ಬರನ್ನು ಬಿಟ್ಟು ಅಧಿಕೃತವಾಗಿ ಬೇರೆ ಇನ್ನಾರಿಗೂ ಈ ಪರಮಾಧಿಕಾರವಿಲ್ಲ.
ಎಐಸಿಸಿ ಉಸ್ತುವಾರಿಯಾಗಿ ಕರ್ನಾಟಕದ ಕಾಂಗ್ರೆಸ್ ವ್ಯವಹಾರಗಳನ್ನು ನೋಡಿಕೊಳ್ಳುವ ರಣದೀಪ್ ಸುರ್ಜೇವಾಲ ಶಾಸಕರು ಹಾಗೂ ಮಂತ್ರಿಗಳ ಜೊತೆ ಸಾಮೂಹಿಕವಾಗಿ ಹಾಗೂ ವೈಯಕ್ತಿಕವಾಗಿ ಭೇಟಿ ಮಾಡಿ ಅವರ ಅಭಿಪ್ರಾಯಗಳನ್ನು ಆಲಿಸಿರುವುದು ರಾಜಕೀಯದ ಮಟ್ಟಿಗೆ ತಪ್ಪು ತಾಳವಿದ್ದಂತೆ. ಹಾಗೊಮ್ಮೆ, ಈ ಸಭೆಗಳಲ್ಲಿ ಮುಖ್ಯಮಂತ್ರಿಯಾಗಲೀ ಇಲ್ಲವೇ ಉಪ ಮುಖ್ಯಮಂತ್ರಿಗಳಾಗಲೀ ಉಪಸ್ಥಿತರಿದ್ದರೆ ಅದರ ಮಾತು ಬೇರೆ. ಚುನಾಯಿತ ನಾಯಕರನ್ನೇ ಹೊರಗಿಟ್ಟು ಹೀಗೆ ಅಭಿಪ್ರಾಯವನ್ನು ಸಂಗ್ರಹಿಸುವುದು ನಾಯಕತ್ವಕ್ಕೆ ಎಸಗುವ ಅವಿಶ್ವಾಸದ ಕ್ರಮವಲ್ಲದೇ ಬೇರೇನು? ಇಂತಹ ಸಭೆಗಳು ಎಲ್ಲವೂ ಸುಸೂತ್ರವಾಗಿದ್ದ ಸಂದರ್ಭದಲ್ಲಿ ನಡೆದಿದ್ದರೆ ಯಾರ ತಕರಾರು ಇರುತ್ತಿರಲಿಲ್ಲ. ಆದರೆ, ಈಗಿರುವುದು ಇಳಿಜಾರಿನ ರಾಜಕೀಯ ಸ್ಥಿತಿ.
ಎರಡು ವರ್ಷದ ಆಡಳಿತವನ್ನು ಪೂರ್ಣಗೊಳಿಸಿರುವ ಸಿದ್ದರಾಮಯ್ಯನವರ ನಾಯಕತ್ವದ ಸರ್ಕಾರದ ಭವಿಷ್ಯದ ಬಗ್ಗೆ ನಾನಾ ರೀತಿಯ ಮಾತುಗಳು ಮಾರ್ದನಿಗೊಳ್ಳುತ್ತಾ ಬೀದಿ ಮಾತಾಗಿ ಪರಿವರ್ತನೆಯಾಗಿರುವ ಕಾಲಘಟ್ಟದಲ್ಲಿ ಹೈಕಮಾಂಡ್ ಪ್ರತಿನಿಧಿಯಾಗಿ ಸುರ್ಜೇವಾಲ ಇಂತಹ ಕ್ರಮಕ್ಕೆ ಕೈಹಾಕಿದ್ದು ಒಂದರ್ಥದಲ್ಲಿ ಜೇನುಗೂಡಿಗೆ ಕೊಳ್ಳಿ ಇಟ್ಟಂತಹ ಬೆಳವಣಿಗೆಗೆ ಕಾರಣವಾಗಿದೆ. ಲಭ್ಯವಾಗಿರುವ ಖಚಿತ ಮಾಹಿತಿ ಪ್ರಕಾರ, ಸಂಪುಟ ಸಭೆಯಲ್ಲಿ ಹಲವಾರು ಮಂದಿ ಮಂತ್ರಿಗಳು ಸುರ್ಜೇವಾಲ ಅವರ ಕಾರ್ಯವೈಖರಿಯನ್ನು ಆಕ್ಷೇಪಿಸಿ ಹೊಲಕ್ಕೆ ಬೇಲಿ ನುಗ್ಗಿರುವ ಸ್ಥಿತಿ ತಲೆದೋರಿರುವ ಅಂಶವನ್ನು ಪ್ರಸ್ತಾಪಿಸಿದರೆಂಬುದು ಪರಿಸ್ಥಿತಿಯ ದಿಕ್ಸೂಚಿ. ಹಾಗೆಂದಾಕ್ಷಣ, ಎಲ್ಲಾ ಮಂತ್ರಿಗಳು ಸುರ್ಜೇವಾಲ ಅವರ ವರ್ತನೆಗೆ ವಿರುದ್ಧವಾಗಿದ್ದಾರೆ ಎಂದೇನೂ ಅಲ್ಲ. ಒಟ್ಟಾರೆ ಸುರ್ಜೇವಾಲಾ ಅವ್ರ ಈ ಕ್ರಮದಿಂದ ಸಚಿವರ ವಲಯದಲ್ಲಿ ಭಿನ್ನಮತವಂತೂ ತಲೆದೋರಿರುವುದು ದಿಟ.
ಆಂತರಿಕವಾಗಿ ಕಾಂಗ್ರೆಸ್ ಪಕ್ಷದ ವಕ್ತಾರರು ಹಾಗೂ ಮುಖಂಡರು ಈ ಬೆಳವಣಿಗೆಯನ್ನು ಮನೆಯ ಒಳಗಿನ ಬೆಳವಣಿಗೆ ಎಂದು ವಿವರಿಸಿ ಸುಮ್ಮನಾಗಬಹುದು. ಆದರೆ, ಜನಾದೇಶ ಎಂಬುದು ಮನೆಯ ಒಳಗಿನ ಅಸ್ತ್ರವಲ್ಲ. ಇದು ಸಾರ್ವಜನಿಕ ಅಸ್ತ್ರ. ಈ ಜನಾದೇಶದ ಛೂ ಭಾಣಕ್ಕೆ ಪರ್ಯಾಯ ಮಾರ್ಗದಲ್ಲಿ ತಿರುಗುಬಾಣ ಬಿಡುವ ಕ್ರಮ ಸರ್ವಥಾ ಸಮರ್ಥನೀಯವಲ್ಲ. ಏಕೆಂದರೆ, ಜನಾಶಯಗಳ ಪ್ರತಿರೂಪವಾದ ಜನಾದೇಶವನ್ನು ಸಂಬಂಧಪಡದವರು ವಿರೂಪಗೊಳಿಸುವ ಸನ್ನಾಹವಿದು ಎಂಬ ಮಾತನ್ನು ನಿರಾಕರಿಸುವುದು ಕಷ್ಟ. ನಿಜ. ಇಂತಹ ಬೆಳವಣಿಗೆ ಕರ್ನಾಟಕದಲ್ಲಿ ಈಗ ಬೆಳಕಿಗೆ ಬಂದಿದೆ. ಹಿಂದೆಯೂ ಕೂಡಾ ಇಂತಹ ಆಯತಪ್ಪಿದ ನಡವಳಿಕೆಗಳು ನಡೆದಿರುವುದು ನಿಜ. ಈ ವಿಚಾರದ ಮಟ್ಟಿಗೆ ಎಲ್ಲಾ ರಾಜಕೀಯ ಪಕ್ಷಗಳ ವರ್ತನೆಯೂ ಒಂದೆ.
ಮುಖ್ಯಮಂತ್ರಿಗೆ ಮಿಗಿಲಾಗಿ ಹೈಕಮಾಂಡ್ ಪರವಾಗಿ ಬರುವ ರಾಯಭಾರಿಗಳು ಶಾಸಕರ ಭಾವನೆಗಳನ್ನು ಕೊಳದಲ್ಲಿ ಕಲ್ಲೆಸೆದು ತಮಾಷೆ ನೋಡಿ ನಂತರ ಅಂತಿಮ ಬೆಳವಣಿಗೆಗಳಿಗೆ ಕಾದುನೋಡುವುದು ಹೊಸತೇನೂ ಅಲ್ಲ. ಈ ಹಿಂದೆ ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರ ಗೃಹ ಸಚಿವ ಎಸ್.ಬಿ. ಚವ್ಹಾಣ್, ಎ.ಕೆ. ಆಂಟನಿ, ಉದಯ್ ಶರ್ಮಾ ನೇತೃತ್ವದ ವೀಕ್ಷಕರ ತಂಡ ಇದೇ ಮಾದರಿಯಲ್ಲಿ ಶಾಸಕರು ಹಾಗೂ ಮಂತ್ರಿಗಳನ್ನು ಭೇಟಿ ಮಾಡಿದ ಅಂತಿಮ ಪರಿಣಾಮವೇನೆಂದರೆ ವೀರಪ್ಪ ಮೊಯ್ಲಿ ನೇತೃತ್ವದ ಸರ್ಕಾರದ ಉದ್ಘವ. ನಂತರ ಇದೇ ಮಾದರಿಯಲ್ಲಿ ಬಿಹಾರದ ಜಗನ್ನಾಥ ಮಿಶ್ರ ನೇತೃತ್ವದ ವೀಕ್ಷಕರ ತಂಡ ಇದೇ ರೀತಿಯಲ್ಲಿ ಶಾಸಕರ ಜೊತೆ ಸಮಾಲೋಚಿಸಿ ಸಮನ್ವಯ ಸೂತ್ರ ರಚಿಸಿ ಸುಮ್ಮನಾದದ್ದು ಇನ್ನೊಂದು ಬೆಳವಣಿಗೆ.
ಹೈಕಮಾಂಡ್ ಮಟ್ಟದ ಇಂತಹ ನಿಯೋಗಗಳು ಬಂದಾಗಲೆಲ್ಲಾ ರಾಜಕೀಯ ಕಾವು ಏರಿರುವುದು ಸತ್ಯ. ಬಿಜೆಪಿಯ ಮಟ್ಟಿಗೆ ಹೇಳುವುದಾದರೆ ಉಸ್ತುವಾರಿಯಾಗಿ ನೋಡಿಕೊಳ್ಳುವವರು ಅಧಿಕಾರದಲ್ಲಿರುವ ಮುಖ್ಯಮಂತ್ರಿಗಳ ವರ್ತನೆಯನ್ನು ಸಮರ್ಥಿಸಿಕೊಳ್ಳುತ್ತಾ `ನಾಯಕತ್ವ ವಿಶ್ವಾಸಾರ್ಹವಾಗಿದೆ’ ಎಂದು ಆಗಿಂದಾಗ್ಗೆ ಸರ್ಟಿಫಿಕೇಟ್ ಕೊಡುತ್ತಾ ಹೋದರೂ ಕಡೆಗೆ ಸರ್ಟಿಫಿಕೇಟ್ ಕೊಟ್ಟ ಮೂರೇ ದಿನದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಪ್ರಸಂಗದಲ್ಲಿ ಎದ್ದು ಕಾಣುವುದು ಹೈಕಮಾಂಡ್‌ಗಳ ಹಿಡಿತ. ಪಕ್ಷಾಂತರ ನಿಷೇಧ ಶಾಸನದ ಅನ್ವಯ ಪರಮಾಧಿಕಾರವಿರುವುದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಕೈಯಲ್ಲಿ. ಹೀಗಾಗಿ ಶಾಸಕರ ಒಲವು ನಿಲುವುಗಳು ಯಾವಾಗಲೂ ಹೈಕಮಾಂಡ್ ಸುತ್ತಲೂ ಪ್ರದಕ್ಷಿಣೆ ಹಾಕುವ ರೀತಿಯಲ್ಲೇ ಸಾಗುವುದು ಇದೇ ಕಾರಣಕ್ಕೆ.
ಇದೊಂದು ರಾಜಕೀಯ ಪರ್ವ ಕಾಲ. ಬದಲಾವಣೆ ಜಗದ ನಿಯಮವಾದರೂ ಆಗಲೇಬೇಕೆಂಬ ಕಡ್ಡಾಯವಿಲ್ಲ. ಸಿದ್ದರಾಮಯ್ಯ ಅವರ ಮುಂದುವರಿಕೆಗೆ ಸಂಬಂಧಿಸಿದಂತೆ ಹೈಕಮಾಂಡ್ ಮಟ್ಟದಲ್ಲಿ ಯಾವುದೇ ರೀತಿಯ ನಿಲುವು ಅಧಿಕೃತವಾಗಿ ಪ್ರಕಟವಾಗಿಲ್ಲ. ಹಸ್ತಾಂತರದ ಒಪ್ಪಂದ ಎಂಬುದು ಈಗಲೂ ನಿಗೂಢವೇ. ಆದರೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನವೆಂಬರ್ ಹೊತ್ತಿಗೆ ನಾಯಕರಾಗಿ ಹೊರಹೊಮ್ಮುತ್ತಾರೆ ಎಂಬ ಆಶಾವಾದದ ಮಾತುಗಳು ಹೊರಹೊಮ್ಮಲು ಪ್ರೇರಣೆ ಯಾವುದು ಎಂಬುದೂ ಕೂಡಾ ನಿಗೂಢವೇ. ಕಾಂಗ್ರೆಸ್ ಆಂತರಿಕ ಬೆಳವಣಿಗೆಯನ್ನು ವಾರೆಗಣ್ಣಿನಿಂದ ನೋಡುತ್ತಿರುವ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಅವಕಾಶ ದೊರೆತರೆ ರಾಜಕೀಯ ಕಾವಿನಲ್ಲಿ ಮೈ ಬಿಸಿ ಮಾಡಿಕೊಳ್ಳುವ ಉಮೇದಿನಲ್ಲಿರುವುದಂತೂ ನಿಜ.
ಇಷ್ಟಲ್ಲದೆ ಆಂತರಿಕವಾಗಿಯೂ ಕೂಡಾ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿ ಅವರಲ್ಲದೆ ಮೂರನೆಯವರು ಕೂಡಾ ಖುರ್ಚಿಯ ಮೇಲೆ ಕಣ್ಣಿಟ್ಟಿರುವುದನ್ನು ಗಮನಿಸದೆ ಇರಲು ಸಾಧ್ಯವಿಲ್ಲ. ಈ ಮೂರನೆಯವರು ಯಾರಾಗಬಹುದು ಎಂಬ ಬಗ್ಗೆ ಕುತೂಹಲವಿದ್ದರೂ ಯಾರೊಬ್ಬರೂ ಕೂಡಾ ಖಚಿತ ನೆಲೆಯಲ್ಲಿ ಇಂತಹವರೇ ಎಂದು ಬೊಟ್ಟು ಮಾಡಿ ಹೇಳುತ್ತಿಲ್ಲ. ಒಂದಂತೂ ದಿಟ. ಮುಂಬರುವ ದಿನಗಳು ಸ್ವಾಭಾವಿಕ ರಾಜಕೀಯ ನಡೆಗಳ ದಿನಗಳಾಗಿರುವುದಿಲ್ಲ. ಅಧಿಕಾರದ ಸುತ್ತ ಪ್ರದಕ್ಷಿಣೆ ಹಾಕುವುದೇ ಏಕೈಕ ಗುರಿ ಎಂಬ ಶಪಥ ಮಾಡಿದಂತೆ ಕಂಡುಬರುವ ನಾಯಕರು ದೆಹಲಿ ಹಾಗೂ ಬೆಂಗಳೂರಿನಲ್ಲಿ ಸಮಾನಾಂತರವಾಗಿ ತಮ್ಮ ಪರವಾದ ವಾತಾವರಣ ಸೃಷ್ಟಿಯಾಗುವಂತೆ ಮಾಡಲು ರೂಪಿಸುವ ಕಾರ್ಯತಂತ್ರಗಳು ಹೊಸ ರಾಜಕೀಯ ಮನ್ವಂತರಕ್ಕೆ ನಾಂದಿ ಹಾಡುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ.