Home ಸಂಪಾದಕೀಯ ಸಂಪಾದಕೀಯ: ಮಾಲೇಗಾಂವ್ ಸ್ಫೋಟ ನಿಜ ದ್ರೋಹಿ ಯಾರು?

ಸಂಪಾದಕೀಯ: ಮಾಲೇಗಾಂವ್ ಸ್ಫೋಟ ನಿಜ ದ್ರೋಹಿ ಯಾರು?

0

ಸಂಯುಕ್ತ ಕರ್ನಾಟಕ ದಿನಪತ್ರಿಕೆ ಶನಿವಾರದ ಸಂಪಾದಕೀಯ

17 ವರ್ಷಗಳ ನಂತರ ಮಹಾರಾಷ್ಟ್ರದ ಮಾಲೇಗಾಂವ್ ಸ್ಫೋಟದಲ್ಲಿ ಆರೋಪಿಗಳಾಗಿದ್ದ ಸಂಸದೆ ಸಾಧ್ವಿ ಪ್ರಜ್ಞಾಸಿಂಗ್‌ಠಾಕೂರ್, ಲೆ.ಕರ್ನಲ್ ಪ್ರಸಾದ್ ಪುರೋಹಿತ್ ಸೇರಿದಂತೆ 7 ಜನರೂ ನಿರ್ದೋಷಿಗಳು ಎಂದು ನ್ಯಾಯಾಲಯ ಬಿಡುಗಡೆ ಮಾಡಿದೆ. ಈ ಪ್ರಕರಣ ಇಡೀ ದೇಶದ ಗಮನ ಸೆಳೆದಿತ್ತು. ಮೊದಲ ಬಾರಿ ಹಿಂದು ಉಗ್ರವಾದ ಎಂಬ ಪದ ಚಾಲ್ತಿಗೆ ಬಂದಿತು. ಉಗ್ರವಾದಕ್ಕೆ ಜಾತಿ, ಧರ್ಮ ಇಲ್ಲ ಎಂದು ಹೇಳುತ್ತಾ ಬಂದಿದ್ದರೂ ಹಿಂದೂಗಳಲ್ಲೂ ಉಗ್ರರು ಇದ್ದಾರೆ ಎಂದು ಸಾಬೀತು ಪಡಿಸಲು ಈ ಪ್ರಕರಣವನ್ನು ಬಳಸಿಕೊಳ್ಳಲಾಗಿತ್ತು.

ಸೆಪ್ಟೆಂಬರ್ 29, 2008 ರಂದು ನಾಸಿಕ್ ಬಳಿ ಇರುವ ಮುಸ್ಲಿಂ ಸಮುದಾಯದವರು ಹೆಚ್ಚಾಗಿರುವ ಮಾಲೇಗಾಂವ್‌ನಲ್ಲಿ ಮೋಟಾರ್ ಸೈಕಲ್ ಬಳಸಿ ಐಇಡಿ ಬಾಂಬ್ ಸ್ಫೋಟಗೊಳಿಸಲಾಗಿತ್ತು. ಇದರಿಂದ 6 ಜನ ಸತ್ತರು. 100 ಜನ ಗಾಯಗೊಂಡರು. ಈ ಪ್ರಕರಣದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥರಾದ ಮೋಹನ್ ಭಾಗ್ವತ್ ಅವರನ್ನು ಆರೋಪಿಯಾಗಿ ಮಾಡುವ ಹುನ್ನಾರ ನಡೆದಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದರು.

ಆಗಿನ ಮಹಾರಾಷ್ಟ್ರ ಸರ್ಕಾರ ಇದಕ್ಕಾಗಿ ಉಗ್ರವಿರೋಧಿ ದಳವನ್ನು ರಚಿಸಿತ್ತು. ಆಮೇಲೆ ಎನ್‌ಐಎ ತನಿಖೆ ಕೈಗೊಂಡಿತ್ತು. 300 ಜನ ಸಾಕ್ಷಿಗಳಿದ್ದರು. ಆದರೂ ಯಾರು ಆರೋಪಿಗಳು ಎಂಬುದು ಸಾಬೀತಾಗಿಲ್ಲ ಎಂದರೆ ಎಲ್ಲಿ ಲೋಪ ಇದೆ ಎಂಬುದು ಸ್ಪಷ್ಟವಾಗಬೇಕು. ಮಹಾರಾಷ್ಟ್ರ ಪೊಲೀಸರ ವೈಫಲ್ಯವೇ? ನ್ಯಾಯಾಂಗದ ವೈಫಲ್ಯವೇ ಎಂಬುದು ಸ್ಪಷ್ಟಗೊಳ್ಳಬೇಕು. ಈಗಿನ ಆರೋಪಿಗಳು ನಿರ್ದೋಷಿಗಳು ಎಂದಾದ ಮೇಲೆ ನಿಜವಾದ ಕ್ರಿಮಿನಲ್ ಯಾರು? ಇದನ್ನು ಕಂಡು ಹಿಡಿಯುವುದು ಯಾರ ಕೆಲಸ. ಸರ್ಕಾರ ಮಾಡಬೇಕೋ ಅಥವಾ ನ್ಯಾಯಾಂಗ ತನ್ನದೇ ವಿಚಾರಣೆ ನಡೆಸಬೇಕೋ? ಯಾರು ಇದರ ಹೊಣೆ ಹೊರಬೇಕು ಎಂಬುದು ತೀರ್ಮಾನವಾಗಬೇಕು.

ಕಳೆದ 17 ವರ್ಷಗಳಿಂದ ಈ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡವರ ಜೀವನ ಮೂರಾಬಟ್ಡೆಯಾಯಿತು. ಅದಕ್ಕೆ ಯಾರು ಹೊಣೆ? ನಿರ್ದೋಷಿಗಳಾದವರಿಗೆ ಪರಿಹಾರ ಕೊಡುವವರು ಯಾರು? ಇಸ್ರೋ ಮಾಹಿತಿ ಸೋರಿಕೆ ಪ್ರಕರಣದಲ್ಲಿ ನಿರ್ದೋಷಿಗಳಾದ ವಿಜ್ಞಾನಿ ನಂಬಿ ನಾರಾಯಣನ್ ಅವರಿಗೆ 1.80 ಕೋಟಿ ರೂ. ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತು. ಈಗ ಅದೇ ರೀತಿ ಮಾಲೇಗಾಂವ್ ಪ್ರಕರಣದ ನಿರ್ದೋಷಿಗಳಿಗೆ ಪರಿಹಾರ ಕೊಡುವವರು ಯಾರು?

ಈ ರೀತಿ ಯಾರೂ ಕಾರಣರಲ್ಲ ಎಂದು ಮುಕ್ತಾಯಗೊಳಿಸುವ ಪ್ರಕರಣಗಳ ಬಗ್ಗೆ ಸ್ವತಂತ್ರವಾಗಿ ತನಿಖಾ ಆಯೋಗ ರಚಿಸುವುದು ಅಗತ್ಯ ಎಂದು ಕಾನೂನು ಪಂಡಿತರು ಹೇಳಿದ್ದಾರೆ. ವಿದೇಶಗಳಲ್ಲಿ ಈ ರೀತಿ ತನಿಖಾ ಆಯೋಗ ಇದೆ. ನ್ಯಾಯಾಲಯ ಕೊಟ್ಟಿರುವ ತೀರ್ಪು ಸರಿಯಾಗಿದೆಯೇ ಎಂಬುದನ್ನು ಉನ್ನತ ನ್ಯಾಯಾಲಯಗಳು ಮೇಲ್ಮನವಿ ಸಲ್ಲಿಸಿದರೆ ಮಾತ್ರ ವಿಚಾರಣೆ ಕೈಗೆತ್ತಿಕೊಳ್ಳುತ್ತದೆ. ಇಲ್ಲದಿದ್ದರೆ ಇಂಥ ಪ್ರಕರಣಗಳು ಇತಿಹಾಸ ಪುಟಗಳನ್ನು ಸೇರಿ ಹೋಗುತ್ತದೆ.

ಹಾಗಾದರೆ ಸ್ಫೋಟದಿಂದ ಸತ್ತವರ ಕುಟುಂಬದವರು ಮತ್ತು ಗಾಯಗೊಂಡವರಿಗೆ ನ್ಯಾಯ ಪಡೆಯುವ ಹಕ್ಕು ಇರುವುದಿಲ್ಲವೇ? ಇಡೀ ವ್ಯವಸ್ಥೆ ವಿಫಲಗೊಂಡಲ್ಲಿ ಜನಸಾಮಾನ್ಯರು ಯಾರ ಬಳಿ ಹೋಗಬೇಕು. ಈ ರೀತಿ ಮುಂಬೈ ರೈಲು ಸ್ಫೋಟಿದಲ್ಲೂ ಎಲ್ಲ ಆರೋಪಿಗಳು ಖುಲಾಸೆ ಗೊಂಡಿದ್ದಾರೆ. ನಿಜವಾದ ದ್ರೊಹಿಗಳು ಪಾರಾಗುವುದು. ಅಮಾಯಕರು ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವುದು ಇಡೀ ವ್ಯವಸ್ಥೆಗೆ ಕಪ್ಪುಚುಕ್ಕೆ. ಇದಕ್ಕೆ ಶಾಸಕರು ಮತ್ತು ನ್ಯಾಯಮೂರ್ತಿಗಳು ಪರಿಹಾರ ಕಂಡುಹಿಡಿಯಬೇಕು.

ಅದು ಮಾಲೇಗಾಂವ್ ಪ್ರಕರಣದಿಂದಲೇ ಅರಂಭವಾಗಲಿ. ಆಗ ಪೊಲೀಸ್ ಇಲಾಖೆಯಲ್ಲೂ ಹೊಸ ಬದಲಾವಣೆ ಬರಬಹುದು. ನಮ್ಮಲ್ಲಿ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯಲ್ಲಿ ರಾಜಕಾರಣಿಗಳ ಹಸ್ತಕ್ಷೇಪ ಅಧಿಕಗೊಂಡಿದೆ. ಎಫ್‌ಐಆರ್ ದಾಖಲಾತಿಯಿಂದ ಹಿಡಿದು ನ್ಯಾಯಾಲಯದ ವಿಚಾರಣೆವರೆಗೆ ಎಲ್ಲ ಹಂತಗಳಲ್ಲೂ ರಾಜಕೀಯ ಪ್ರಭಾವ ಎದ್ದು ಕಾಣುತ್ತಿವೆ. ಕಾಯ್ದೆ ಪ್ರಕಾರ ಯಾರೂ ಹಸ್ತಕ್ಷೇಪ ಮಾಡುವ ಹಾಗಿಲ್ಲ. ಇದನ್ನು ನ್ಯಾಯಾಲಯಗಳು ಗಂಭೀರವಾಗಿ ಪರಿಗಣಿಸಿಲ್ಲ. ಒಂದೆರಡು ಪ್ರಕರಣಗಳಲ್ಲಿ ಹಸ್ತಕ್ಷೇಪವನ್ನು ಪ್ರಮುಖವಾಗಿ ಪರಿಗಣಿಸಿ ಒಂದಿಬ್ಬರು ಗಣ್ಯವ್ಯಕ್ತಿಗಳನ್ನು ಜೈಲಿಗೆ ಕಳುಹಿಸಿದರೆ ಪೊಲೀಸರು ಮುಕ್ತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ.

ನಮ್ಮಲ್ಲಿ ದಕ್ಷ ಪೊಲೀಸರು ಇದ್ದಾರೆ. ಹಿಂದೆ ಉತ್ತಮ ತನಿಖೆ ನಡೆಯುತ್ತಿತ್ತು. ತನಿಖೆಯಲ್ಲಿ ಹಸ್ತಕ್ಷೇಪ ಇರಲಿಲ್ಲ. ಈಗ ಪ್ರತಿಹೆಜ್ಜೆಗೂ ಹಸ್ತಕ್ಷೇಪ ಕಂಡು ಬರುತ್ತದೆ. ಅದರಿಂದ ಜನಸಾಮಾನ್ಯರಿಗೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ಉಳಿದಿಲ್ಲ. ಇದರಿಂದ ನಿಜವಾದ ದ್ರೋಹಿಗಳು ಪಾರಾಗುತ್ತಾರೆ. ಅಮಾಯಕರು ನ್ಯಾಯಾಲಯಕ್ಕೆ ಅಲೆದು ಸುಣ್ಣವಾಗಿ ಕೊನೆಗೆ ನಿರ್ದೋಷಿಗಳು ಎಂಬ ಹಣೆಪಟ್ಟಿ ಹಚ್ಚಿಕೊಂಡು ಹೊರ ಬರುತ್ತಾರೆ. ಅವರ ಕಳೆದುಹೋದ ಯೌವನ ಮತ್ತೆ ಬರುವುದಿಲ್ಲ. ಅವರಿಗೆ ತನ್ನವರು ಎಂಬುವರು ಯಾರೂ ಇರುವುದಿಲ್ಲ. ಇದನ್ನೇ ಸಂಸದೆ ಸಾಧ್ವಿ ಪ್ರಜ್ಞಾಸಿಂಗ್ ಹೇಳಿದ್ದಾರೆ. 17 ವರ್ಷದ ಜೀವನ ಮತ್ತೆ ಬರುವುದಿಲ್ಲ. ಕಳಂಕವಂತೂ ಹೋಗುವುದಿಲ್ಲ. ಇದೇ ಪರಿಸ್ಥಿತಿ ಬೇರೆಯವರದು. ಅದೇರೀತಿ ಸ್ಫೋಟದಿಂದ ಗಾಯಗೊಂಡವರು ಜೀವನ ಪರ್ಯಂತ ಪರಿತಪಿಸಬೇಕು. ಈ ಪರಿಸ್ಥಿತಿ ಮರುಕಳಿಸದಂತೆ ಮಾಡುವುದು ಹೇಗೆ ಎಂಬುದನ್ನು ಶಾಸಕಾಂಗ ಮತ್ತು ನ್ಯಾಯಾಂಗ ತೀರ್ಮಾನಿಸಬೇಕು.

NO COMMENTS

LEAVE A REPLY

Please enter your comment!
Please enter your name here

Exit mobile version