ಸಂಯುಕ್ತ ಕರ್ನಾಟಕ ದಿನಪತ್ರಿಕೆ ಶನಿವಾರದ ಸಂಪಾದಕೀಯ
ಆರ್‌ಸಿಬಿ ವಿಜಯೋತ್ಸವದ ದಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ದುರಂತಕ್ಕೆ 11 ಜನ ಅಮಾಯಕರು ಬಲಿಯಾಗಿರುವುದಕ್ಕೆ ಆರ್‌ಸಿಬಿ ಮತ್ತು ಪೊಲೀಸರು ಹೊಣೆ ಎಂದು ನ್ಯಾಯಾಂಗ ತನಿಖೆ ವರದಿ ಹೇಳಿರುವುದು ನಿಜಕ್ಕೂ ಆಶ್ಚರ್ಯ ತಂದಿದೆ. ಕಾಲ್ತುಳಿತದ ಘಟನೆ ನಡೆಯುವ ಮುನ್ನ ವಿಧಾನಸೌಧ ಮೆಟ್ಟಿಲುಗಳ ಮೇಲೆ ನಡೆದ ಸಂಭ್ರಮದ ಕಾರ್ಯಕ್ರಮದ ಬಗ್ಗೆ ವರದಿಯಲ್ಲಿ ಚಕಾರ ಇಲ್ಲ. ಅಲ್ಲಿ ಸೇರಿದ ಲಕ್ಷಾಂತರ ಜನರೇ ಸ್ಟೇಡಿಯಂಗೆ ನುಗ್ಗಿರುವುದು ಎಂಬುದು ಸ್ಪಷ್ಟ.
ವಿಧಾನಸೌಧದ ಮೆಟ್ಟಿಲ ಮೇಲೆ ನಡೆದ ಸಮಾರಂಭದಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಭಾಗವಹಿಸಿದ್ದರು. ಇದಕ್ಕೂ ವಿಧಾನಸೌಧದ ಡಿಸಿಪಿ ಅನುಮತಿ ನಿರಾಕರಿಸಿದ್ದರು. ಆದರೆ ಗೃಹ ಇಲಾಖೆ ಪೊಲೀಸರ ಸಲಹೆಯನ್ನು ಬದಗೊತ್ತಿ ಸಮಾರಂಭಕ್ಕೆ ಅನುಮತಿ ನೀಡಿದೆ. ಈ ಕಾರ್ಯಕ್ರಮದ ನಂತರ ನಡೆದ ಸ್ಟೇಡಿಯಂ ಕಾರ್ಯಕ್ರಮಕ್ಕೂ ಪೊಲೀಸ್ ಕಮಿಷನರ್ ಸೇರಿದಂತೆ ಎಲ್ಲ ಹಿರಿಯ ಅಧಿಕಾರಿಗಳು ಅನುಮತಿ ನಿರಾಕರಿಸಿ ಲಿಖಿತದಲ್ಲಿ ತಿಳಿಸಿದ್ದರೂ ಆರ್‌ಸಿಬಿ ಕಾರ್ಯಕ್ರಮ ನಡೆಸಲು ಮುಂದಾಗಿದೆ.
ಅಲ್ಲದೆ ಕ್ರಿಕೆಟ್ ಪಟುಗಳ ಪರೇಡ್‌ಗಳು ಆಯುಕ್ತರು ಅನುಮತಿ ನಿರಾಕರಿಸಿದ್ದಾರೆ. ವಿಧಾನಸೌಧದ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತಿದ್ದಂತೆ ಎಲ್ಲರನ್ನೂ ಸ್ಟೇಡಿಯಂಗೆ ಹೋಗಲು ಅಲ್ಲಿಯ ವೇದಿಕೆಯಿಂದಲೇ ಸಾರ್ವಜನಿಕರಿಗೆ ತಿಳಿಸಲಾಗಿದೆ. ಇಷ್ಟೆಲ್ಲ ಘಟನೆ ನಡೆದಿದ್ದರೂ ಪೊಲೀಸರ ವೈಫಲ್ಯ ಎಂದು ಸರ್ಕಾರ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಈಗ ಇಡೀ ಪ್ರಕರಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮುಂದಿದೆ.
ಸರ್ಕಾರ ನ್ಯಾಯಾಂಗ ತನಿಖೆಯ ವರದಿಯನ್ನೂ ಮಂಡಿಸಿದೆ. ಇಂಥ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮುನ್ನ 1 ವಾರದ ಪೂರ್ವಸಿದ್ಧತೆ ಬೇಕೆಂದು ಪೊಲೀಸರು ತಿಳಿಸಿದ್ದಾರೆ. ಆದರೂ ಅವರ ಮಾತಿಗೆ ಸರ್ಕಾರ ಕಿವಿಗೊಟ್ಟಲ್ಲ. ಅದರ ಪರಿಣಾಮದಿಂದ 11 ಜನ ಅಮಾಯಕರು ಬಲಿಯಾದರು. ಈ ರೀತಿ ವಿಜಯೋತ್ಸವದಲ್ಲಿ ಜನಸಾಮಾನ್ಯರು ಸಮೂಹ ಸನ್ನಿಗೆ ಒಳಗಾಗುವುದು ಸಹಜ. ಆಗ ಎಲ್ಲರೂ ಹುಚ್ಚೆದ್ದು ಕುಣಿಯುವುದು ಸಹಜ. ಆದರೆ ಅಧಿಕಾರದಲ್ಲಿರುವವರು ಸಂಯಮದಿಂದ ವರ್ತಿಸುವುದು ಅಗತ್ಯ. ಅಧಿಕಾರದಲ್ಲಿದ್ದವರೇ ಕುಣಿಯಲು ಆರಂಭಿಸಿದಾಗ ಪೊಲೀಸರು ಏನು ಮಾಡಲು ಸಾಧ್ಯ? ಈಗ ಅವರನ್ನು ದೂಷಿಸಿದರೆ ಫಲವೇನು? ಹೋದವರ ಪ್ರಾಣ ಮರಳಿ ಬರುವುದಿಲ್ಲ.
ಕಾನೂನು ಪರಿಪಾಲನೆ ಪೊಲೀಸರ ಹಾಗೆ ಎಲ್ಲರೂ ಪಾಲಿಸಬೇಕು. ಅದರಲ್ಲೂ ಜನಪ್ರತಿನಿಧಿಗಳು ಪೊಲೀಸರ ಮಾತಿಗೆ ಗೌರವಕೊಟ್ಟು ಅದರಂತೆ ನಡೆದುಕೊಳ್ಳಬೇಕು. ಸ್ಟೇಡಿಯಂ ದುರಂತದಲ್ಲಿ ಪೊಲೀಸರು ಆರ್‌ಸಿಬಿಯೊಂದಿಗೆ ಶಾಮೀಲಾಗಿದ್ದರು ಎಂದು ಆರೋಪಿಸಲಾಗಿದೆ. ಇದು ಬಾಲಿಶ. ಪೊಲೀಸರ ಮನೋಸ್ಥೈರ್ಯವನ್ನು ಕುಂದಿಸುವ ಕೆಲಸ ಮಾಡಬಾರದು. ಹಿಂದೆ ಹಲವು ನ್ಯಾಯಾಂಗ ತನಿಖೆಗಳು ಪೊಲೀಸರ ಅತಿರೇಕದ ವರ್ತನೆಯ ಮೇಲೆ ನಡೆದಿವೆ. ಗೋಲಿಬಾರ್‌ನಿಂದ ಸಾವು ಸಂಭವಿಸಿದಾಗ ಪೊಲೀಸರನ್ನು ದೂರಲಾಗಿದೆ. ಆದರೆ ಇಲ್ಲಿ ವಿಚಿತ್ರ ಎಂದರೆ ಪೊಲೀಸರು ನಿಷ್ಕ್ರೀಯರಾಗಿದ್ದರು ಎಂದು ಆರೋಪಿಸಲಾಗಿದೆ.
ಸಾಮಾನ್ಯವಾಗಿ ಮುಖ್ಯಮಂತ್ರಿ ಮತ್ತಿತರ ಗಣ್ಯರು ಇರುವಾಗ ಪೊಲೀಸರು ತಮ್ಮ ಬಲವನ್ನು ಹೆಚ್ಚು ಬಳಸುವುದಿಲ್ಲ. ಅದೇ ರೀತಿ ಜನಪ್ರತಿನಿಧಿಗಳು ಕೂಡ ಪೊಲೀಸರ ಹಿತವಚನ ಮೀರಿ ಹೋಗುವುದಿಲ್ಲ. ಇಲ್ಲಿ ಪೊಲೀಸರ ಮಾತಿಗೆ ಕಿವಿಗೊಡದೇ ಇರುವುದು ದುರಂತಕ್ಕೆ ಕಾರಣವಾಗಿದೆ. ಈಗ ಇವೆಲ್ಲವೂ ಹೈಕೋರ್ಟ್ ಮುಂದೆ ನಡೆಯಲಿರುವ ವಿಚಾರಣೆಯಲ್ಲಿ ಬಹಿರಂಗಗೊಳ್ಳಲಿದೆ. ಸ್ಟೇಡಿಯಂ ಸುತ್ತ ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳ ಕಚೇರಿಗಳಿವೆ. ಅವರೆಲ್ಲರ ಮೇಲೆ ಕ್ರಮ ಕೈಗೊಳ್ಳಲು ಹೇಗೆ ಸಾಧ್ಯ? ಪೊಲೀಸರು ಕಾನೂನು ಪರಿಪಾಲನೆ ಸಂದರ್ಭ ಬಂದಾಗ ಮುಖ್ಯಮಂತ್ರಿ ಮತ್ತು ಸಚಿವರಿಗೆ ಸೂಕ್ತ ಸಲಹೆ ನೀಡೇ ನೀಡುತ್ತಾರೆ. ಅದನ್ನು ಪಾಲಿಸುವುದು ಬಿಡುವುದು ಗಣ್ಯರಿಗೆ ಸೇರಿದ್ದು. ಅವರು ಪಾಲಿಸಲಿಲ್ಲ ಎಂದರೆ ಪೊಲೀಸ್ ಅಧಿಕಾರಿ ಕ್ರಮ ಕೈಗೊಳ್ಳಲು ಬರುವುದಿಲ್ಲ.
ಹಿಂದೆ ಗೃಹ ಸಚಿವರ ಸಮ್ಮುಖದಲ್ಲೇ ಇಬ್ಬರು ಶಾಸಕರು ಹೊಡೆದಾಡಿದರು. ಪೊಲೀಸರು ಅವರನ್ನು ಮುಟ್ಟಲಿಲ್ಲ. ನಮ್ಮ ಗೃಹ ಸಚಿವರೇ ಇರುವಾಗ ನಮಗೇನು ಸಂಬಂಧ ಎಂದರು. ಈಗಲೂ ಅದೇ ಮಾತು ಅನ್ವಯಿಸುತ್ತದೆ. ಇಡೀ ದುರಂತದ ನೈತಿಕ ಹೊಣೆ ಸರ್ಕಾರದ್ದು. ಅದನ್ನು ಬಿಟ್ಟು ಬೇರೆಯವರ ಮೇಲೆ ವೃಥಾ ಆರೋಪ ಹೊರಿಸುವುದು ನಾಗರಿಕ ಲಕ್ಷಣವಲ್ಲ. ಹಿಂದೆ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ರೈಲಿನ ದುರಂತಕ್ಕೆ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು.
ಈಗ ರಾಜೀನಾಮೆ ನೀಡುವುದು ಬೇಡ. ಬೇರೆಯವರ ಮೇಲೆ ದೋಷ ಹೊರಿಸುವುದನ್ನು ಕೈಬಿಟ್ಟರೆ ಸಾಕು. ಗೆಲುವಿನ ಉನ್ಮಾದದಲ್ಲಿ ನಡೆದ ದುರಂತಕ್ಕೆ ಕ್ಷಮೆ ಕೋರಿದರೆ ನಾಗರಿಕತೆ ಉಳಿಯುತ್ತದೆ. ಸರ್ಕಾರದ ಘನತೆ ಗೌರವ ಹೆಚ್ಚುತ್ತದೆ. ಅದನ್ನು ಬಿಟ್ಟು ಮಾಡದ ತಪ್ಪಿಗೆ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದು ಶೋಭೆ ತರುವುದಿಲ್ಲ. ಹೈಕೋರ್ಟ್ ವಿಚಾರಣೆ ಕೈಗೆತ್ತಿಕೊಂಡು ಸರ್ಕಾರದ ವಿರುದ್ಧ ಟೀಕೆ ಟಿಪ್ಪಣಿ ಮಾಡುವ ಮುನ್ನ ಇಡೀ ಘಟನೆಗೆ ಮಂಗಳ ಹಾಡುವುದು ಸೂಕ್ತ. ಮಿಂಚಿಹೋದ ಘಟನೆಗೆ ಈಗ ಚಿಂತಿಸಿ ಫಲವಿಲ್ಲ.