ಕಾರವಾರ: ಕಾಮಿಡಿ ಕಿಲಾಡಿ ಶೋ ಮೂಲಕ ಜನರನ್ನು ನಕ್ಕು ನಲಿಸಿದ್ದ ಯಲ್ಲಾಪುರ ತಾಲ್ಲೂಕಿನ ಚಿಮ್ಮಳ್ಳಿ ಗ್ರಾಮದ ಚಂದ್ರಶೇಖರ ಸಿದ್ದಿ (31) ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಚಂದ್ರಶೇಖರ್ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಮನಳ್ಳಿಯ ಸಿದ್ದಿ ಜನಾಂಗದ ಯುವಕ, ಈತ ಕಬ್ಬಿಗೆ ಗ್ರಾಮಕ್ಕೆ ಪತ್ನಿಯೊಂದಿಗೆ ಕೆಲಸಕ್ಕೆಂದು ಹೋಗಿ ಅಲ್ಲೇ ಉಳಿದುಕೊಂಡಿದ್ದ. ಶನಿವಾರ ಮಧ್ಯಾಹ್ನ 2 ಗಂಟೆಗೆ ತನ್ನ ಮಗನೊಂದಿಗೆ ಶಾಲೆ ಬಿಟ್ಟು ಮನೆಗೆ ಬಂದಿದ್ದ. ಈತ ಬಳಿಕ ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೋದವನು ಮರಳಿ ಬಂದಿರಲಿಲ್ಲ.
ಆತನ ಪತ್ನಿ ಹುಡುಕಾಡಿದಾಗ ಮರವೊಂದಕ್ಕೆ ನೈಲಾನ್ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಕಳೆದ 2-3 ತಿಂಗಳಿನಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಚಂದ್ರಶೇಖರ್ ಸಿದ್ದಿಗೆ ಕಾರವಾರದ ಕ್ರೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಈ ಬಗ್ಗೆ ಆತನ ತಾಯಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಉತ್ತಮ ಯೋಗಪಟು ಆಗಿದ್ದ ಚಂದ್ರಶೇಖರ್ ನಿನಾಸಂನಲ್ಲಿ ನಾಟಕ ತರಬೇತಿ ಪಡೆದುಕೊಂಡಿದ್ದನು. ಬಳಿಕ ಖಾಸಗಿ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿ ಶೋನಲ್ಲಿ ಕೆಲ ಕಾಲ ಕಾಣಿಸಿಕೊಂಡಿದ್ದ ಈತ ಜನರನ್ನು ರಂಜಿಸಿ ಗಮನ ಸೆಳೆದಿದ್ದ. ಕೆಲ ಧಾರವಾಹಿಗಳಲ್ಲಿಯೂ ಸಹಪಾತ್ರ ನಿರ್ವಹಿಸಿದ್ದ. ಸಾಕಷ್ಟು ಸಂಖ್ಯೆಯ ಅಭಿಮಾನಿಗಳನ್ನ ಸಹ ಹೊಂದಿದ್ದ ಚಂದ್ರಶೇಖರ್ ಬಳಿಕ ಅವಕಾಶಗಳು ಸಿಗದೆ ಊರಿನ ಕಡೆ ಆಗಮಿಸಿದ್ದ ಈತ ಕೂಲಿ ಮಾಡಿಕೊಂಡಿದ್ದ ಎನ್ನಲಾಗಿದೆ.
ಕೆಲ ತಿಂಗಳ ಹಿಂದಷ್ಟೇ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ರಾಕೇಶ್ ಪೂಜಾರಿ ಹೃದಯಾಘಾತದಿಂದ ಮೃತಪಟ್ಟಿದ್ದರು. ನಟ ರಾಕೇಶ್ ಅವರ ಸಾವಿನ ಕಹಿ ನೆನಪು ಮಾಸುವ ಮುನ್ನವೇ ಚಂದ್ರಶೇಖರ ಸಿದ್ದಿ ಅವರ ಸಾವಿನ ಸುದ್ದಿ ಅಭಿಮಾನಿಗಳಿಗೆ ಮತ್ತಷ್ಟು ನೋವುಂಟು ಮಾಡಿದೆ.
ಉಡುಪಿ ಜಿಲ್ಲೆಯ ಕಾರ್ಕಳದ ನಿಟ್ಟೆಯಲ್ಲಿ ಮದುವೆಯ ಕಾರ್ಯಕ್ರಮಕ್ಕೆಂದು ಬಂದು ರಾತ್ರಿ ಮೆಹಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಕೇಶ್. ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಹೃದಯಾಘಾರದಿಂದ ನಿಧನರಾಗಿದ್ದರು.
2018 ರಲ್ಲಿ ಜೀ ಕನ್ನಡ ‘ಕಾಮಿಡಿ ಕಿಲಾಡಿಗಳು ಸೀಸನ್ 2’ಕ್ಕೆ ಆಯ್ಕೆಯಾಗಿದ್ದ ರಾಕೇಶ್ ರನ್ನರ್ ಅಪ್ ತಂಡದಲ್ಲಿ ಇದ್ದರು. ಬಳಿಕ ಸೀಸನ್ 3ರಲ್ಲಿ ವಿಜೇತರಾಗಿದ್ದರು. ಬಳಿಕ ಧಾರಾವಾಹಿಗಳಲ್ಲಿ ಅವಕಾಶವನ್ನು ಪಡೆಯುವುದರ ಜತೆಗೆ ಕನ್ನಡ ಮತ್ತು ತುಳು ಭಾಷೆಯ ಸಿನಿಮಾಗಳಲ್ಲಿ ರಾಕೇಶ್ ನಟಿಸಿದ್ದರು.