Home ಸುದ್ದಿ ದೇಶ ಆರ್‌ಪಿಎಫ್‌ಗೆ ಮೊದಲ ಮಹಿಳಾ ಡಿಜಿ ನೇಮಕ: ಸೋನಾಲಿ ಮಿಶ್ರಾ ಪರಿಚಯ

ಆರ್‌ಪಿಎಫ್‌ಗೆ ಮೊದಲ ಮಹಿಳಾ ಡಿಜಿ ನೇಮಕ: ಸೋನಾಲಿ ಮಿಶ್ರಾ ಪರಿಚಯ

0

ನವದೆಹಲಿ: ಐಪಿಎಸ್ ಅಧಿಕಾರಿ ಸೋನಾಲಿ ಮಿಶ್ರಾ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. 143 ವರ್ಷಗಳಷ್ಟು ಹಳೆಯದಾದ ಆರ್‌ಪಿಎಫ್‌ಗೆ ಮೊದಲ ಮಹಿಳೆ ಮುಖ್ಯಸ್ಥರು ಎಂಬ ದಾಖಲೆಯನ್ನು ಈ ಮೂಲಕ ಬರೆದಿದ್ದಾರೆ. ದೇಶದಲ್ಲಿ ಪೊಲೀಸ್ ಮತ್ತು ರೈಲ್ವೆ ಭದ್ರತಾ ಕ್ಷೇತ್ರಗಳಲ್ಲಿ ಇದು ಒಂದು ಪ್ರಮುಖ ಮೈಲಿಗಲ್ಲು.

ಆರ್‌ಪಿಎಫ್ ಮಹಾನಿರ್ದೇಶಕಿ ಸೋನಾಲಿ ಮಿಶ್ರಾ 1993ರ ಬ್ಯಾಚ್ ಮಧ್ಯಪ್ರದೇಶ ಕೇಡರ್ ಐಪಿಎಸ್ ಅಧಿಕಾರಿ. ಮನೋಜ್ ಯಾದವ್‌ರಿಂದ ತೆರವಾದ ಸ್ಥಾನಕ್ಕೆ ಸೋನಾಲಿ ಮಿಶ್ರಾರನ್ನು ನೇಮಿಸಿ ಕೇಂದ್ರ ಸರ್ಕಾರ ಜುಲೈ 14ರಂದು ಆದೇಶ ಹೊರಡಿಸಿತ್ತು. ಅಕ್ಟೋಬರ್ 31, 2026ರ ತನಕ ಇವರ ಅಧಿಕಾರಾವಧಿ ಇದೆ.

ಸೋನಾಲಿ ಮಧ್ಯಪ್ರದೇಶದಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ (ಆಯ್ಕೆ/ನೇಮಕಾತಿ) ಸೇವೆ ಸಲ್ಲಿಸಿದ್ದಾರೆ. ಭೋಪಾಲ್‌ನಲ್ಲಿರುವ ಪೊಲೀಸ್ ತರಬೇತಿ ಮತ್ತು ಸಂಶೋಧನಾ ಸಂಸ್ಥೆ ಮತ್ತು ಪೊಲೀಸ್ ಅಕಾಡೆಮಿಯ ಉಸ್ತುವಾರಿಯಾಗಿಯೂ ಕಾರ್ಯ ನಿರ್ವವಹಿಸಿದ್ದಾರೆ.

ವಿಶ್ವದ ಅತಿದೊಡ್ಡ ರೈಲು ಜಾಲಗಳಲ್ಲಿ ಭಾರತೀಯ ರೈಲ್ವೆ ಒಂದು. ಅದರ ಆಸ್ತಿಯ ಭದ್ರತೆ, ಪ್ರಯಾಣಿಕರ ಸುರಕ್ಷತೆ ಮತ್ತು ಅಪರಾಧ ತಡೆಗಟ್ಟುವಿಕೆ ಉಸ್ತುವಾರಿಯನ್ನು ನೋಡಿಕೊಳ್ಳುವ ಹೊಣೆ ರೈಲ್ವೆ ರಕ್ಷಣಾ ಪಡೆ ಮೇಲಿದೆ. ಸೋನಾಲಿ ಮಿಶ್ರಾ ರಾಜ್ಯ ಮತ್ತು ಕೇಂದ್ರ ಪೊಲೀಸ್ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಈ ಅನುಭವ ಪಡೆಯೊಳಗೆ ಆಧುನೀಕರಣ, ಸಾಮರ್ಥ್ಯ ವೃದ್ಧಿ ಮತ್ತು ಸಮುದಾಯ ತೊಡಗಿಸಿಕೊಳ್ಳುವಿಕೆಗೆ ಹೊಸ ವೇಗವನ್ನು ತರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಳ್ಳುವಲ್ಲಿ ಆರ್‌ಪಿಎಫ್‌ನ ಉಪಕ್ರಮಗಳನ್ನು ಬಲಪಡಿಸುವುದು ಮತ್ತು ಮಾನವ ಕಳ್ಳಸಾಗಣೆ ಮತ್ತು ದುರ್ಬಲ ಪ್ರಯಾಣಿಕರ ಮೇಲಿನ ಅಪರಾಧಗಳಂತಹ ಸಂಘಟಿತ ಅಪರಾಧಗಳನ್ನು ತಡೆಗಟ್ಟುವಲ್ಲಿ ಅದರ ಪಾತ್ರವನ್ನು ಹೆಚ್ಚಿಸುವುದರ ಮೇಲೆ ಅವರ ಗಮನವಿರುತ್ತದೆ.

ಅಧಿಕಾರ ವಹಿಸಿಕೊಂಡ ನಂತರ ಮಿಶ್ರಾ ಮಾತನಾಡಿ, ಸೇವೆ ಸಲ್ಲಿಸುವ ಅವಕಾಶ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು ಮತ್ತು ಆರ್‌ಪಿಎಫ್‌ನ ಧ್ಯೇಯವಾಕ್ಯವಾದ ಯಶೋ ಲಾಭಸ್ವವನ್ನು ವ್ಯಾಖ್ಯಾನಿಸುವ ಜಾಗರೂಕತೆ, ಧೈರ್ಯ ಮತ್ತು ಸೇವೆಯ ಮೌಲ್ಯಗಳನ್ನು ಎತ್ತಿಹಿಡಿಯುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.

ರಾಜ್ಯ ಮತ್ತು ಕೇಂದ್ರ ಸಂಸ್ಥೆಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಸೇವೆ ಸಲ್ಲಿಸಿರುವ ಅವರು, ಪೊಲೀಸ್ ಮತ್ತು ಭದ್ರತೆಯಲ್ಲಿ 30 ವರ್ಷಗಳಿಗೂ ಹೆಚ್ಚಿನ ವಿಶಿಷ್ಟ ಸೇವೆಯನ್ನು ಹೊಂದಿದ್ದಾರೆ. ಸೋನಾಲಿ ಸಿಬಿಐ, ಬಿಎಸ್‌ಎಫ್‌ನಲ್ಲಿಯೂ ಸೇವೆ ಸಲ್ಲಿಸಿದ್ದು, ಇದರೊಂದಿಗೆ ಕೊಸೊವೊದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

ಈ ವೃತ್ತಿಪರತೆ ಹಾಗೂ ಕಾರ್ಯನಿಷ್ಠೆ ಮತ್ತು ನಾಯಕತ್ವವನ್ನು ಗುರುತಿಸಿ ರಾಷ್ಟ್ರಪತಿಗಳು ಸೋನಾಲಿ ಮಿಶ್ರಾಗೆ ವಿಶಿಷ್ಟ ಸೇವೆಗಾಗಿ ಪೊಲೀಸ್ ಪದಕ ಮತ್ತು ಪ್ರತಿಭಾನ್ವಿತ ಸೇವೆಗಾಗಿ ಪೊಲೀಸ್ ಪದಕವನ್ನು ಪ್ರದಾನ ಮಾಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version