ರಾಜ್ಯಕ್ಕೆ ಕೃಷ್ಣಾ ನದಿ ನೀರು ಬಿಡದಿರಲು ಮಹಾ ಆಜ್ಞೆ

0
12

ಸಂಜೀವ ಕಾಂಬಳೆ
ಚಿಕ್ಕೋಡಿ/ಬೆಳಗಾವಿ: ಉತ್ತರ ಕರ್ನಾಟಕದ ಜೀವಜಲನಾಡಿ ಕೃಷ್ಣಾ ನದಿಯ ಒಡಲು ಬತ್ತಿ ಹೋಗಿದೆ. ಹನಿ ನೀರಿಗೂ ನದಿ ತೀರದ ಗ್ರಾಮಸ್ಥರು ಜಾನುವಾರುಗಳು ಅಕ್ಷರಶಃ ಪರದಾಡುತ್ತಿವೆ.
ಇದೇ ವೇಳೆ ಮಳೆರಾಯ ಕೃಪೆ ತೋರಿದ್ದು ತುಸು ನಿಟ್ಟುಸಿರು ಬಿಡುವಂತಾಗಿದೆ. ಪಶ್ಚಿಮ ಘಟ್ಟಗಳಲ್ಲಿ ಬೀಳುತ್ತಿರುವ ಮಳೆಯಿಂದಾಗಿ ಕೊಂಚ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿತ್ತು. ಆದರೆ ಈಗ ಇದಕ್ಕೂ ಮಹಾರಾಷ್ಟ್ರ ಸರ್ಕಾರ ಕಲ್ಲು ಹಾಕಿದೆ. ರಾಜ್ಯದ ಕೃಷ್ಣೆಗೆ ನೀರು ಬರದಂತೆ ರಾಜಾಪುರ ಡ್ಯಾಂ ಬಳಿ ಮಹಾರಾಷ್ಟ್ರದ ಪೊಲೀಸರು ಹಾಗೂ ನೀರಾವರಿ ಅಧಿಕಾರಿಗಳನ್ನು ನಿಯೋಜನೆ ಮಾಡಿದೆ. ಇದರಿಂದಾಗಿ ರಾಜ್ಯದ ರೈತರು ಕರ್ನಾಟಕ ಮತ್ತು ಮಹಾ ಸರ್ಕಾರದ ವಿರುದ್ಧ ಇದೀಗ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಎರಡು ಸಾವಿರ ಕ್ಯೂಸೆಕ್ ನೀರು: ಕೃಷ್ಣಾ ನದಿಗೆ ನೀರು ಹರಿದು ಬಂದು ಮಹಾರಾಷ್ಟçದ ಕೊಲ್ಹಾಪುರ ಜಿಲ್ಲೆಯ ರಾಜಾಪುರ ಬ್ಯಾರೇಜ್ ಭಾಗಶಃ ತುಂಬಿದೆ. ಈ ಬ್ಯಾರೇಜ್‌ನ ಗೇಟ್‌ಗಳು ಸ್ವಲ್ಪ ಪ್ರಮಾಣದಲ್ಲಿ ಓಪನ್ ಇದ್ದ ಕಾರಣ ಕೃಷ್ಣಾ ನದಿಗೆ ನಾಲ್ಕು ದಿನದಿಂದ ಎರಡು ಸಾವಿರ ಕ್ಯೂಸೆಕ್‌ನಷ್ಟು ನೀರು ಹರಿದು ಬರುತ್ತಿತ್ತು. ಇದರಿಂದ ಕೃಷ್ಣಾ ನದಿ ಪಾತ್ರದ ಜನತೆ ಕೊಂಚ ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದರು. ಆದರೆ ಸದಾ ಗಡಿ ವಿವಾದ ಕೆದಕುವ ಮಹಾರಾಷ್ಟ್ರ ಈಗ ಜಲ ವಿವಾದವನ್ನು ಮತ್ತೆ ಕೆದಕಿದೆ. ಸಹಜವಾಗಿ ಕೃಷ್ಣಾ ನದಿಗೆ ಹರಿದು ಬರುತ್ತಿದ್ದ ನೀರಿಗೆ ತಡೆಯೊಡ್ಡುವ ಮೂಲಕ ಮಹಾರಾಷ್ಟ್ರ ಸರ್ಕಾರ ಕ್ಯಾತೆ ಶುರು ಮಾಡಿದ್ದು ಇದರಿಂದ ಗಡಿ ಭಾಗದ ರೈತರು ಕಿಡಿಕಾರುತ್ತಿದ್ದಾರೆ.
ಕರ್ನಾಟಕಕ್ಕೆ ಹರಿದು ಬರ್ತಿದ್ದ ನೀರು ತಡೆ ಹಿಡಿದಿದ್ದು ಅಷ್ಟ್ಟೆ ಅಲ್ಲದೇ ಬ್ಯಾರೇಜ್ ಮೇಲಿನ ನೀರು ಕದಿಯಬಾರದು ಅಂತಾ ಸಿಬ್ಬಂದಿಯನ್ನು ನೇಮಿಸಿದೆ. ಇದರಿಂದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಜಿಲ್ಲೆ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಕೃಷ್ಣಾ ನದಿಗೆ ನೀರು
ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಕಲ್ಬುರ್ಗಿಗಳಿಗೆ ಮಹಾರಾಷ್ಟ್ರದ ಕೊಯ್ನಾ ಮತ್ತು ವಾರಣಾ ಜಲಾಶಯಗಳಿಂದ ಕೃಷ್ಣಾ ನದಿಗೆ ನೀರನ್ನು ಕರ್ನಾಟಕವು ಖರೀದಿಸುತ್ತಲೇ ಬಂದಿದೆ. ಆದರೆ ೨೦೧೬ರಿಂದ ನೀರು ಬಿಡುಗಡೆಗೆ ಒಪ್ಪದ ಮಹಾರಾಷ್ಟçವು `ನೀರು ವಿನಿಮಯ ಒಪ್ಪಂದ’ಕ್ಕೆ ಪಟ್ಟು ಹಿಡಿದಿದೆ. ಬೇಸಿಗೆಯಲ್ಲಿ ಕೃಷ್ಣಾ ನದಿಗೆ ಬಿಡಲಾಗುವ ನೀರಿನ ಪ್ರಮಾಣದಲ್ಲಿಯೇ ವಿಜಯಪುರ ಜಿಲ್ಲೆಯ ತುಬಚಿ -ಬಬಲೇಶ್ವರ ಏತ ನೀರಾವರಿ ಯೋಜನೆಯಿಂದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿಗೆ ನೀರು ಪೂರೈಸಬೇಕೆಂದು ಆಗ್ರಹಿಸುತ್ತಿದೆ.

Previous articleರಾಜ್ಯದಲ್ಲಿ ೪೦ ಸಾವಿರ ಶಾಲಾ ಶಿಕ್ಷಕರ ಕೊರತೆ
Next articleಕ್ರೈಂ ತಡೆಯಲು ಪೊಲೀಸರಿಂದ ಗ್ರಾಮ ವಾಸ್ತವ್ಯ‌