ಗಗನಯಾನ ಯೋಜನೆ ೨೦೨೫ಕ್ಕೆ ಕಾರ್ಯಗತ

Advertisement

ಭೀಮಾಶಂಕರ ಫಿರೋಜಾಬಾದ್

ಕಲಬುರಗಿ: ಸದಾ ಅನ್ವೇಷಣೆ, ಆವಿಷ್ಕಾರ, ಸಂಶೋಧನೆಗೆ ಜಾಗತಿಕ ಮಟ್ಟದಲ್ಲಿ ಹೆಸರಾಗಿರುವ ಇಸ್ರೋದಲ್ಲಿ ಕೆಲಸ ಮಾಡುವುದೆಂದರೆ ದೊಡ್ಡ ಹೆಮ್ಮೆಯೇ ಸರಿ. ಇಸ್ರೋ ಕೇಂದ್ರ ಕಚೇರಿಯಲ್ಲಿ ಸಹ ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿರುವ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹೊಳಗುಂದಿ-ಬಾವಿಹಳ್ಳಿ ಗ್ರಾಮದ ಪ್ರತಿಭಾನ್ವಿತ ವಿಜ್ಞಾನಿ ಡಾ. ಬರದೂರು ಹಿರೇಮಠದ ದಾರುಕೇಶ (ಡಾ.ಬಿ. ಎಚ್.ಎಂ. ದಾರುಕೇಶ) ಕಲಬುರಗಿಗೆ ಬಂದಿದ್ದಾಗ `ಸಂಯುಕ್ತ ಕರ್ನಾಟಕ’ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ಸಂ.ಕ.: ಇಸ್ರೋ ಸಂಸ್ಥೆಯ ವಿಜ್ಞಾನಿಗಳ ಪ್ರಯತ್ನದ ಫಲವಾಗಿ ಚಂದ್ರಯಾನ-೩ ಉಡಾವಣೆಗೊಂಡು ಯಶಸ್ವಿಯಾಯಿತು. ಈಗ ಮುಂದಿನ ಹಂತ, ಏನೆಲ್ಲ ಪ್ರಗತಿ ಕಾಣಬಹುದು?
ಬಿಎಚ್‌ಎಂ: ಪ್ರಪಂಚ ಮಾಡೆಲ್ ಭೂಮಿ ಕಡೆ ನೋಡುತ್ತಾ ಚಂದ್ರನ ಸುತ್ತುತ್ತಾ ಮಾಹಿತಿ ಸಂಗ್ರಹಿಸುತ್ತಿದೆ. ಈ ಹಿಂದೆ ಹಾರಿಬಿಡಲಾಗಿದ್ದ ಲ್ಯಾಂಡರ್ ಮತ್ತು ರೋವರ್ ಚಂದ್ರನ ಮೇಲೆ ನಿದ್ರಾವಸ್ಥೆಯಲ್ಲಿವೆ.
ಚಂದ್ರಯಾನ-೩ ಯಶಸ್ವಿಯಾದ ಯೋಜನೆ, ಬಾಹ್ಯಾಕಾಶ ಕ್ಷೇತ್ರದಲ್ಲಿ ಇದು ಇತಿಹಾಸ ಸೇರಿದೆ.
ಸಂ.ಕ.: ಚಂದ್ರಯಾನ-೩ರ ಯಶಸ್ವಿ ನೌಕೆ ಉಡಾವಣೆಯಲ್ಲಿ ನಿಮ್ಮ ಪಾತ್ರ ಏನಿತ್ತು? ಅನುಭವ ಹೇಗಿತ್ತು?
ಬಿಎಚ್‌ಎಂ: ಚಂದ್ರಯಾನ-೩ ಮಾಡ್ಯುಲ್ ಗಳಿಸಿದ ಮಾಹಿತಿ, ಎಲೆಮೆಟರಿ ಡಾಟಾ ಸಂಗ್ರಹಿಸುವ ಆ್ಯಂಪ್ಲಿಪೈಯರ್ ವಿನ್ಯಾಸಗೊಳಿಸಿದೆ. ೫ ವ್ಯಾಟ್ ಮಾಹಿತಿ ಸಂಗ್ರಹಿಸುವ ಟ್ರಾನ್ಸ್ಮೀಟರ್ ಆಗಿದೆ. ಈ ಹಿಂದೆ ಚಂದ್ರಯಾನ-೧ ಮತ್ತು ೨ ರಲ್ಲೂ ಇದನ್ನೇ ವಿನ್ಯಾಸಗೊಳಿಸಿದೆ. ಒಳ್ಳೆಯ ಅವಕಾಶ ಸಿಕ್ಕಿದ್ದು ಸಾರ್ಥಕ ಭಾವ ಮೂಡಿಸಿದೆ.
ಸಂ.ಕ: ಚಂದ್ರಯಾನ, ಮಂಗಳಯಾನ ಆಯ್ತು, ಈಗ ಸೂರ್ಯನ ಮೇಲೆ ಹೋಗುವ ಯೋಜನೆ ಇದೆಯಾ?
ಬಿಎಚ್‌ಎಂ: ಸೂರ್ಯನ ಹತ್ತಿರ ಹೋಗಲು ಸೋಲಾರ್ ಪಾರ್ಕರ್ ಸ್ಯಾಟ್‌ಲೆಟ್ ಆತ್ಮಾಹುತಿ ರಾಕೆಟ್ ದೂರದಿಂದಲೇ ಮಾಹಿತಿ ಸಂಗ್ರಹಿಸುತ್ತಿದೆ. ಇನ್ನು ಸೂರ್ಯ ಮತ್ತು ಭೂಮಿಗೆ ಹತ್ತಿರ ಇರುವ ಆದಿತ್ಯ-೧೧ ರಾಕೆಟ್ ಶೇ. ೧ ರಷ್ಟು ಅಂದರೆ ೧೫ ಲಕ್ಷ ಕಿಮೀ ಸೂರ್ಯನಿಂದ ದೂರ ಇದ್ದು ಸಂಶೋಧಿಸುತ್ತಿದೆ. ಇದು ಸೂರ್ಯನ ಬಗ್ಗೆ ೨೪**೭ ನಿರಂತರವಾಗಿ ಸಂಶೋಧನೆಯಲ್ಲಿ ತೊಡಗಿದೆ. ಇಸ್ರೋದಿಂದ ಪ್ರಯತ್ನಗಳು ನಡೆದಿವೆ.
ಸಂ.ಕ.: ಚಂದ್ರಯಾನ-೩ರ ಐತಿಹಾಸಿಕ ಬಾಹ್ಯಾಕಾಶ ಸಾಧನೆ ಬಗ್ಗೆ ಶಾಲಾ ಪಠ್ಯಕ್ರಮದಲ್ಲಿ ಅಳವಡಿಸಲು ಏನಾದರೂ ಕ್ರಮವಹಿಸಲಾಗಿದಿಯೇ?
ಬಿಎಚ್‌ಎಂ: ಎನ್‌ಸಿಆರ್‌ಟಿ ಶಾಲಾ ಪಠ್ಯಕ್ರಮದಲ್ಲಿ ಚಂದ್ರಯಾನ-೩ರ ಸಾಧನೆ ಬಗ್ಗೆ ಒಂದು ಅಧ್ಯಾಯ ಪಠ್ಯಕ್ರಮದಲ್ಲಿ ಸೇರಿಸಲು ತೀರ್ಮಾನಿಸಲಾಗಿದೆ. ಮುಂದಿನ ವರ್ಷದ ಶೈಕ್ಷಣಿಕ ಸಾಲಿನಿಂದ ಕಾರ್ಯರೂಪಕ್ಕೆ ಬರಬಹುದು.
ಸಂ.ಕ.: ಮುಂದಿನ ಯುವ ಪೀಳಿಗೆಯು ಬಾಹ್ಯಾಕಾಶ, ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ವಿಪುಲ ಅವಕಾಶಗಳಿವೆಯೇ?
ಬಿಎಚ್‌ಎಂ: ಭಾರತ ಸಂಕ್ರಮಣ ಕಾಲದಲ್ಲಿದೆ. ಬಾಹ್ಯಾಕಾಶ ಸಂಶೋಧನೆ ಕೇವಲ ಸರ್ಕಾರಿ ಸಂಸ್ಥೆಗಳು ಮಾಡಬೇಕೆಂತಿಲ್ಲ, ಖಾಸಗಿ ಸಂಶೋಧನಾ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು, ನವೋದ್ಯಮಗಳು ಸಹ ಮುಕ್ತವಾಗಿ ತೊಡಗಿಸಿಕೊಳ್ಳಬಹುದು. ಶೈಕ್ಷಣಿಕ ಸಂಸ್ಥೆಗಳು, ವಿದ್ಯಾರ್ಥಿಗಳು ಮುಂದಿನ ವಿಜ್ಞಾನ ಹೇಗಿರಬೇಕು. ಏನೆಲ್ಲ ಸಂಶೋಧನೆ ಮತ್ತು ಸಲಕರಣೆಗಳನ್ನೂ ಒದಗಿಸಿಕೊಡಲು ವೈಜ್ಞಾನಿಕ, ಸಂಶೋಧನೆ ಮತ್ತು ಉತ್ತಮ ದೃಷ್ಟಿಯಿಂದ ಅವಕಾಶಗಳಿವೆ.
ಸಂ.ಕ: ಇಸ್ರೋಂ ಸಂಸ್ಥೆಯ ಮುಂದಿರುವ ಹೊಸ ಪ್ರಾಜೆಕ್ಟ್ಗಳೇನು?
ಬಿಎಚ್‌ಎಂ: ಈಗಾಗಲೇ ಆದಿತ್ಯ-೧೧ ಯೋಜನೆ ಪ್ರಗತಿ ಹಂತದಲ್ಲಿದ್ದು, ಎಕ್ಸ್ಪೋ ಸ್ಯಾಟ್‌ಲೆಟ್ ಯೋಜನೆ ಗುರಿ ಹೊಂದಿದ್ದೇವೆ. ಇನ್ನು ಭಾರತೀಯ ಇಬ್ಬರು ಅಥವಾ ಮೂವರು ವಿಜ್ಞಾನಿಗಳ ಸಹಿತ ೪೦೦ ಕಿ.ಮೀ ಆಕಾಶದ ಎತ್ತರಕ್ಕೆ ಹೋಗಿ ಸುರಕ್ಷಿತವಾಗಿ ಇಳಿಯುವಾಗ ವಿವಿಧ ಹಂತಗಳಲ್ಲಿ ಎದುರಾಗುವ ಸಮಸ್ಯೆಗಳ ಬಗ್ಗೆ ಪರೀಕ್ಷೆಗಳ ಸರಣಿ ನಡೆದಿವೆ. ಬಹುಶಃ ೨೦೨೫ರಲ್ಲಿ ಗಗನಯಾನ ಯೋಜನೆ ಪೂರ್ಣಗೊಳ್ಳಲಿದೆ.
ಸಂ.ಕ: ಜಾಗತಿಕ ಮಟ್ಟದಲ್ಲಿ ಭಾರತದ ಬಾಹ್ಯಾಕಾಶ ಕ್ಷೇತ್ರದ ಕೊಡುಗೆ ಏನು? ಭಾರತ ಸೂಪರ್ ಪವಾರ ರಾಷ್ಟ್ರವಾಗಲು ಸಾಧ್ಯನಾ?
ಬಿಎಚ್‌ಎಂ: ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ತೀರಾ ಹಿಂದುಳಿದ ರಾಷ್ಟ್ರ ಎನಿಸಿಕೊಂಡಿದ್ದ ಭಾರತ, ಈಗ ಈ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿ ತಾವು ಯಾರಿಗೂ ಕಮ್ಮಿ ಯೇನು ಇಲ್ಲವೆಂದು ಸಾಬೀತುಪಡಿಸಿದೆ. ಮಾಜಿ ರಾಷ್ಟ್ರಪತಿ ದಿ. ಎಪಿಜೆ ಅಬ್ದುಲ್ ಕಲಾಂ ಕಂಡ ಕನಸಿನಂತೆ ಈಗಾಗಲೇ ಭಾರತ ಸೂಪರ್ ಪವಾರ ರಾಷ್ಟ್ರವಾಗಿ ಗುರುತಿಸಿಕೊಂಡು ಜಾಗತಿಕ ಮಟ್ಟದಲ್ಲಿ ಛಾಪು ಮೂಡಿಸಿದೆ. ಯಾರನ್ನು ನಮ್ಮನ್ನು ಸುಲಭವಾಗಿ ಕಾಣಬಾರದು, ಹಗುರವಾಗಿ ಪರಿಗಣಿಸಬಾರದು ಮತ್ತು ಜ್ಞಾನ ಹಂಚಿಕೊಳ್ಳಲು ಸಜ್ಜಾಗಿರುವ ಭಾರತ, ೨೦೩೦ಕ್ಕೆ ಅಲ್ಲ, ಈಗಲೇ ಭಾರತ ಸೂಪರ್ ಪವರ್‌ ರಾಷ್ಟ್ರವಾಗಿದೆ.