ಸುಳ್ಳು ಹೇಳುವಷ್ಟರ ಮಟ್ಟಿಗೆ ಬೆಳೆದ ಮಗಳು

Advertisement

ಬಿಡುವಿನ ಸಮಯದಲ್ಲಿ ಹೊಸ ವಿದ್ಯಾರ್ಥಿಗಳ ಪೋಷಕರೊಂದಿಗೆ ಮಾತನಾಡುವುದು ಅಭ್ಯಾಸ. ಎರಡನೇ ಸೆಮಿಸ್ಟರ್‌ನಲ್ಲಿ ಓದುತ್ತಿರುವ ವಿದ್ಯಾರ್ಥಿನಿಯೊಬ್ಬಳ ಅಂಕಗಳು ತುಂಬಾ ಕಡಿಮೆಯಾಗಿದ್ದರಿಂದ ಆಕೆಯ ತಾಯಿಗೆ ಕರೆ ಮಾಡಿದೆ.
“ಮೇಡಂ, ಕಾಲೇಜಿನಿಂದ ಮಾತನಾಡುತ್ತಿರುವುದು, ನಿಮ್ಮ ಮಗಳು ಸ್ಮಿತಾ (ಹೆಸರು ಬದಲಾಯಿಸಲಾಗಿದೆ), ಕಾಲೇಜಿನಲ್ಲಿ ಎರಡನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದಾಳಲ್ಲವಾ”. ಆ ಕಡೆಯಿಂದ ಸ್ಮಿತಾಳ ತಾಯಿ, “ಹೌದು ಸರ್, ನಾನು ಸ್ಮಿತಾಳ ತಾಯೀನೇ, ಯಾಕೆ, ಏನಾದರೂ ಸಮಸ್ಯೆಯಾಗಿದೆಯಾ? ನಮ್ಮ ಮಗಳು ಯಾವತ್ತೂ ಗಲಾಟೆ ಮಾಡಿಕೊಂಡವಳಲ್ಲ, ಏನಾಯಿತು” ಎಂದು ಕೇಳಿದರು.
“ಹೆದರಿಕೊಳ್ಳುವ ಅಗತ್ಯ ಇಲ್ಲ ಮೇಡಂ, ಇತ್ತೀಚಿಗೆ ಹೇಗೆ ಅಭ್ಯಾಸ ಮಾಡುತ್ತಿದ್ದಾಳೆ ಎಂದು ಕೇಳುತ್ತಿದ್ದೇನೆ”.
ಚೆನ್ನಾಗಿಯೇ ಮಾಡಿದ್ದೇನೆ ಎಂದಿದ್ದಾಳೆ. ಮೊನ್ನೆ ನಡೆದ ಕಿರು ಪರೀಕ್ಷೆಯಲ್ಲಿ ಬಂದ ಅಂಕಗಳನ್ನೂ ನನಗೆ ತೋರಿಸಿದ್ದಾಳೆ, ಎಲ್ಲವು ಚೆನ್ನಾಗಿಯೇ ಬಂದಿದೆ ಎಂದರು. ಇರಬಹುದು, ಆದರೆ ಆಕೆಗೆ ಕಳೆದ ಸೆಮಿಸ್ಟರ್‌ನಲ್ಲಿ ಬಂದ ಅಂಕಗಳನ್ನು ನೋಡಿದ್ದೀರಾ ಎಂದು ಕೇಳಿದೆ.
ಹೌದು ಸರ್, ಫಲಿತಾಂಶ ೯೦% ಬಂದಿದೆ ಎಂದಿದ್ದಾಳೆ, ಆದರೆ ಅಂಕ ಪಟ್ಟಿ ಬಂದಿಲ್ಲ, ಬಹುಶಃ ಎರಡೂ ಸೆಮಿಸ್ಟರ್‌ನ ಅಂಕಪಟ್ಟಿ ಒಟ್ಟಿಗೇ ಬರಬಹುದು ಎಂದಿದ್ದಾಳೆ''. ಅದಕ್ಕೆ ನಾನು,ಇಲ್ಲ ಮೇಡಂ, ನಿಮ್ಮ ಮಗಳು ಅಷ್ಟೊಂದು ಚೆನ್ನಾಗಿ ಮಾಡಿಲ್ಲ, ಅದಕ್ಕಾಗಿಯೇ ನಾನು ನಿಮಗೆ ಕರೆ ಮಾಡುತ್ತಿರುವುದು. ಸೆಮಿಸ್ಟರ್‌ನಲ್ಲಿ ಚೆನ್ನಾಗಿ ಮಾಡದೇ ಇರುವವರ ಪಟ್ಟಿಯನ್ನು ನನಗೆ ಕಳಿಸಿ ಕೊಡುತ್ತಾರೆ, ಅವರಿಗೆ ಆಪ್ತ- ಸಮಾಲೋಚನೆ ಮಾಡಲು. ಅದಕ್ಕಾಗಿಯೇ ನಿಮಗೆ ಕರೆ ಮಾಡಿ ಕೇಳುತ್ತಿರುವುದು”.
ಸರ್, ನಮ್ಮ ಮಗಳು ಬೇರೆ ಹುಡುಗಿಯರ ತರಹ ಅಲ್ಲ, ಅವಳು ಮೊದಲಿನಿಂದಲೂ ಯಾವ ಪರೀಕ್ಷೆಯಲ್ಲೂ ಫೇಲ್ ಆಗಿಲ್ಲ, ಅವಳಿಗೆ ೯೦ಕ್ಕಿಂತ ಕಡಿಮೆ ಬಂದ ದಾಖಲೆಯೇ ಇಲ್ಲ, ಬಹುಶಃ ನಿಮ್ಮವರೇ ಎಲ್ಲೋ ವ್ಯತ್ಯಾಸ ಮಾಡಿರಬಹುದು, ಇನ್ನೊಮ್ಮೆ ಚೆಕ್ ಮಾಡಿ ಎಂದರು.
ಅದಕ್ಕೆ ನಾನು, “ಇಲ್ಲ ಮೇಡಂ, ವ್ಯತ್ಯಾಸ ಎಲ್ಲೂ ಆಗಿಲ್ಲ, ಕಳೆದ ಸೆಮಿಸ್ಟರ್‌ನಲ್ಲಿ ಯಾವ ಪರೀಕ್ಷೆಯಲ್ಲೂ ನಿಮ್ಮ ಮಗಳು ಉತ್ತಮವಾಗಿ ಮಾಡಿಲ್ಲ. ಅವಳನ್ನು ಆಪ್ತ- ಸಮಾಲೋಚನೆಗೆ ಬರ ಹೇಳಲು ಕರೆ ಮಾಡುತ್ತಿರುವುದು, ಸದ್ಯ ನಿಮ್ಮ ಮಗಳಿಗೆ ಬಂದು ನನ್ನನ್ನು ನೋಡಲು ಹೇಳಿ ಎಂದೆ.
ಮುಂದಿನ ಐದೇ ನಿಮಿಷದಲ್ಲಿ ಸ್ಮಿತಾಳ ತಂದೆ ಕರೆ ಮಾಡಿದ್ದರು. ಸರ್, ನನ್ನ ಹೆಸರು ಉಮೇಶ(ಹೆಸರು ಬದಲಾಯಿಸಲಾಗಿದೆ) ಸ್ಮಿತಾಳ ತಂದೆ. ತಾವು ನಮ್ಮ ಮನೆಯವರಿಗೆ ಕರೆ ಮಾಡಿ ಆಕೆಯ ಫಲಿತಾಂಶ ಚೆನ್ನಾಗಿಲ್ಲ ಅಂತ ಹೇಳಿದ್ದೀರಲ್ಲ, ನೋಡಿ ಸರ್, ನಮ್ಮ ಮನೆಯವರು ತುಂಬಾ ಸೂಕ್ಷ್ಮ, ನಿಮ್ಮಲ್ಲೇ ಎಲ್ಲೋ ತಪ್ಪಾಗಿರಬಹುದು, ಅದನ್ನು ವಿಚಾರಿಸುವುದು ಬಿಟ್ಟು ನಮ್ಮ ಮಗಳ ಹೆಸರು ಹಾಳು ಮಾಡುತ್ತಿದ್ದೀರಲ್ಲ, ಸರಿಯಾಗಿ ಏನಾಗಿದೆ ಎಂತ ಹೇಳಿ ಎಂದರು.
“ಸರ್, ಇದರಲ್ಲಿ ಕೋಪಿಸಿಕೊಳ್ಳುವ ಅಗತ್ಯ ಏನೂ ಇಲ್ಲ ಸರ್, ನಿಮ್ಮ ಮಗಳು ಕಳೆದ ಸೆಮಿಸ್ಟರ್ ಪರೀಕ್ಷೆಯಲ್ಲಿ ಮೂರು ವಿಷಯದಲ್ಲಿ ಫೇಲ್ ಆಗಿದ್ದಾಳೆ, ಆಕೆಯಿಂದ ಫೇಲ್ ಆದ ಕಾರಣ ಕೇಳಿಕೊಂಡು ಮುಂದೆ ಹೇಗೆ ಅಭ್ಯಾಸ ಮಾಡಬೇಕು ಎಂದು ಹೇಳಿಕೊಡುತ್ತೇನೆ, ನೀವು ಒಪ್ಪಿಗೆ ಕೊಟ್ಟರೆ, ಇಲ್ಲ ಅಂದರೆ ಈ ಸೆಮಿಸ್ಟರ್‌ನಲ್ಲೂ ಅವಳು ಚೆನ್ನಾಗಿ ಮಾಡಲು ಆಗುವುದಿಲ್ಲ, ದಯವಿಟ್ಟು ಅರ್ಥ ಮಾಡಿಕೊಳ್ಳಿ”
ಮರುದಿನ ಬೆಳಗ್ಗೆ ಅವರು ನನ್ನ ಕೊಠಡಿಯ ಮುಂದೆ ಇದ್ದರು. ಅವರನ್ನು ನೋಡಿದರೆ ರಾತ್ರಿಯಿಡೀ ನಿದ್ದೆ ಮಾಡಿದವರ ಹಾಗೆ ಕಾಣುತ್ತಿರಲಿಲ್ಲ, ಹೈದರಾಬಾದ್‌ನಿಂದ ಕಾರು ಓಡಿಸಿಕೊಂಡು ಬಂದಿದ್ದ ಅವರ ಮುಖದಲ್ಲಿ ಆತಂಕದ ಛಾಯೆ. ತೀವ್ರತರವಾದ ಆಘಾತಕ್ಕೊಳಗಾದವರ ಹಾಗಿದ್ದರು ಆ ತಾಯಿ! ತುಂಬಾ ಹೊತ್ತು ಅತ್ತಿದ್ದರಿಂದ ಅವರ ಮುಖ ಕೆಂಪಗಾಗಿ ಊದಿಕೊಂಡಿತ್ತು.
ಕುಶಲೋಪರಿಯ ಬಳಿಕ ಅವರ ಮಾತನ್ನು ಆಲಿಸತೊಡಗಿದೆ. ಸ್ಮಿತಾಳ ತಂದೆಯೇ ಮಾತನ್ನು ಆಡಲು ಶುರು ಮಾಡಿದರು. ಸರ್, ಮಗಳು ಕಾಲೇಜಿನಲ್ಲಿ ಫೇಲ್ ಆಗಿದ್ದಾಳೆ ಎನ್ನುವುದಕ್ಕಿಂತ ನನ್ನ ಮಗಳು ನನಗೇ ಸುಳ್ಳು ಹೇಳುವಷ್ಟರ ಮಟ್ಟಿಗೆ ದೊಡ್ಡವಳಾದಳಾ ಎನ್ನುವುದು ನಮ್ಮ ಮನೆಯವಳ ಕೊರಗು ಎಂದರು.
ಹೌದು, ತುಂಬಾ ಪೋಷಕರಿಗೆ ತಮ್ಮ ಮಕ್ಕಳು ತಮ್ಮ ಬಳಿಯೇ ಸುಳ್ಳು ಹೇಳುತ್ತಿದ್ದಾರೆ ಎನ್ನುವುದನ್ನು ಒಪ್ಪಿಕೊಳ್ಳಲಾಗುವುದಿಲ್ಲ, ಅದರಲ್ಲೂ ತಾಯಂದಿರಿಗೆ, ಒಬ್ಬರೇ ಮಕ್ಕಳಿದ್ದವರಿಗೆ, ಇದು ಕಷ್ಟಕರವಾದದ್ದು.
ವಿಷಯ ಕೇಳಿದಾಗಿನಿಂದ ಅವರು ನೀರನ್ನೂ ಕುಡಿದಿರಲಿಲ್ಲವಂತೆ. ಮೆಸ್‌ನವರಿಗೆ ಹೇಳಿ ಅಲ್ಲಿಯೇ ತಿಂಡಿ, ನೀರು ತರಿಸಿಕೊಟ್ಟಾಯಿತು. ಒಂದು ಸುಳ್ಳು ಹೇಳಿದ ತಕ್ಷಣ ಅವರ ಮಗಳು ಕೆಟ್ಟ ಹುಡುಗಿಯಾಗಿ ಬಿಡುವುದಿಲ್ಲ, ಕೆಟ್ಟ ದಾರಿ ಹಿಡಿದವಳಾಗಿ ಬಿಡುವುದಿಲ್ಲ; ಮಗಳು ದೂರವಾಗುತ್ತಿದ್ದಾಳೆ ಎನ್ನುವ ಭಾವವೂ ಸತ್ಯವಲ್ಲ. ಅವಳ ತಪ್ಪನ್ನು ಅಕ್ಷಮ್ಯ ಅಪರಾಧವೆಂದು ಪರಿಗಣಿಸದೆ, ಅವಳಿಗಿದ್ದ ಸಮಸ್ಯೆಯನ್ನು ಅರಿತು, ಪರಿಹರಿಸುವ ಬಗ್ಗೆ, ಅವಳ ಆತ್ಮ ವಿಶ್ವಾಸವನ್ನು ಹೆಚ್ಚಿಸುವ ಬಗ್ಗೆ ನಿಮ್ಮ ವಾತ್ಸಲ್ಯಪೂರಿತ ಗಮನವಿರಬೇಕು ಎಂದು ತಿಳಿ ಹೇಳಲು ಮೀಸಲಿಟ್ಟೆ.