ಸುಪ್ರೀಂಗೆ ಹೋಗಿದ್ದರಿಂದಲೇ ರಾಜ್ಯಕ್ಕೆ ಪರಿಹಾರ

Advertisement

ಚಿಕ್ಕೋಡಿ: ಒಂದು ವೇಳೆ ಸುಪ್ರೀಂಕೋರ್ಟ್ ಕದ ತಟ್ಟದೆ ಹೋಗಿದ್ದರೆ ರಾಜ್ಯಕ್ಕೆ ಕೇಂದ್ರ ಸರ್ಕಾರ ಒಂದು ಪೈಸೆಯೂ ಪರಿಹಾರ ಕೊಡುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದರು.
ಶನಿವಾರ ಸಂಜೆ ಚಿಕ್ಕೋಡಿ ಆರ್.ಡಿ. ಹೈಸ್ಕೂಲ್ ಮೈದಾನದಲ್ಲಿ ನಡೆದ ಚಿಕ್ಕೋಡಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕಕ್ಕೆ ಅನ್ಯಾಯವಾದಾಗ ಇಲ್ಲಿನ ಸಂಸದರು ತುಟಿಪಿಟಕ್ ಎನ್ನಲಿಲ್ಲ. ೨೭ ಎಂಪಿಗಳಿದ್ದರೂ ನಮ್ಮ ತೆರಿಗೆ ನಮ್ಮ ಹಕ್ಕು ಪ್ರಕಾರ ಕೇಂದ್ರ ಸರಕಾರದಿಂದ ಹಣ ಬಿಡುಗಡೆ ಮಾಡಿಸಲು ಮುಂದಾಗಲಿಲ್ಲ ಎಂದರು.
ಎನ್‌ಡಿಎ ನೇತೃತ್ವದಲ್ಲಿ ಮೋದಿ ಪ್ರಧಾನಿಯಾಗಿ ಹತ್ತು ವರ್ಷವಾಗಿದೆ. ಬಡವರು, ದಲಿತರು, ಹಿಂದುಳಿದವರು, ರೈತರು, ಅಲ್ಪಸಂಖ್ಯಾತರಿಗೆ ಕೊಟ್ಟಿರುವ ಯೋಜನೆ, ೧೦ ವರ್ಷದಲ್ಲಿ ಮಾಡಿದ ಸಾಧನೆಗಳ ಬಗ್ಗೆ ಹೇಳುತ್ತಿಲ್ಲ ಎಂದರು.
ವಿದೇಶದಲ್ಲಿನ ಕಪ್ಪು ಹಣ ತಂದು ಪ್ರತಿಯೊಬ್ಬರಿಗೆ ೧೫ ಲಕ್ಷ ಜಮಾ ಮಾಡುವುದಾಗಿ ಪ್ರಧಾನಿ ಹೇಳಿದ್ದರು. ಆದರೆ ೧೫ ರೂಪಾಯಿ ಕೂಡ ಜಮಾ ಮಾಡಿಲ್ಲ. ದೇಶದಲ್ಲಿ ಕೋಟ್ಯಾಂತರ ಜನತೆ ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ೧೦ ವರ್ಷದಲ್ಲಿ ೨೦ ಕೋಟಿ ಉದ್ಯೋಗ ನೀಡಬೇಕಾಗಿತ್ತು. ಆದರೆ ಉದ್ಯೋಗ ಕೇಳುವ ಯುವಕರಿಗೆ ಪಕೋಡಾ ಮಾರಲು ಹೋಗಿ ಅಂತಾ ಹೇಳುತ್ತಿದ್ದಾರೆ ಎಂದು ಹರಿಹಾಯ್ದರು.