ಸುಡು ಬಿಸಿಲಿಗೆ ವಿಶ್ವವಿಖ್ಯಾತ ಹಂಪಿ ಭಣ ಭಣ

Advertisement

ಹೊಸಪೇಟೆ: ಸುಡು ಬಿಸಿಲಿಗೆ ವಿಶ್ವವಿಖ್ಯಾತ ಹಂಪಿ ಪ್ರವಾಸಿಗರಿಲ್ಲದೆ ಭಣಗುಡುತ್ತಿದ್ದು ೩೮, ೩೯, ೪೦ ಡಿಗ್ರಿ ಸೆಲ್ಷಿಯಸ್ ದಾಟಿ ಬಿಸಿಲು ನೆತ್ತಿ ಸುಡುತ್ತಿದೆ. ಇದರಿಂದ ಹಂಪಿ ಪ್ರವಾಸೋದ್ಯಮದ ಆರ್ಥಿಕತೆಗೆ ಹೊಡೆತ ಬಿದ್ದಿದೆ. ಬಿಸಿಲಿನಿಂದ ಶೇ.೮೦ ರಷ್ಟು ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ.
ಕಳೆದ ವರ್ಷಗಿಂತಲೂ ಈ ವರ್ಷ ಬಿಸಿಲಿನ ತಾಪ ಹೆಚ್ಚಾಗಿದ್ದು, ಜನರನ್ನು ಹೈರಾಣ ಮಾಡಿದ್ದು, ಮನೆಯಿಂದ ಹೊರ ಬರದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಶನಿವಾರ ಹಾಗೂ ಭಾನುವಾರದ ವೀಕೆಂಡ್ ದಿನಗಳಲ್ಲಿಯೂ ಹಂಪಿಯಲ್ಲಿ ಪ್ರವಾಸಿಗರು ಕಂಡುಬರುತ್ತಿಲ್ಲ.
ಸ್ಮಾರಕಗಳತ್ತ ಚಿತ್ತವಿಲ್ಲ
ವಿರೂಪಾಕೇಶ್ವರ ದೇವಾಲಯ, ಸಾಸುವೆಕಾಳು ಗಣಪತಿ, ಕಡಲೆಕಾಳು ಗಣಪತಿ, ಹೇಮಕೂಟ, ಕೃಷ್ಣ ದೇಗುಲ, ಕೃಷ್ಣ ಬಜಾರ್, ಬಡವಿಲಿಂಗ, ಲಕ್ಷ್ಮೀ ನರಸಿಂಹ, ತುಂಗಭದ್ರಾ ನದಿತೀರ ಸೇರಿದಂತೆ ಪ್ರಮುಖ ಸ್ಥಳ ಹಾಗೂ ಸ್ಮಾರಕಗಳಲ್ಲಿ ಬೆರಳಣಿಕೆ ಜನ ಬಿಟ್ಟರೆ ಮತ್ಯಾರೂ ಕಂಡುಬರುತ್ತಿಲ್ಲ.
ಬ್ಯಾಟರಿ ವಾಹನಗಳಿಗಿಲ್ಲ ಕೆಲಸ
ವಿಜಯವಿಠಲ ದೇವಾಲಯ ವೀಕ್ಷಣೆಗೆ ಹಂಪಿಯ ಗೆಜ್ಜಲ ಮಂಟಪದಿಂದ ಪ್ರವಾಸಿಗರನ್ನು ಹೊತ್ತು ಸಾಗುವ ಬ್ಯಾಟರಿ ಚಾಲಿತ ವಾಹನಗಳಿಗೆ ಪ್ರವಾಸಿಗರಿಲ್ಲದೆ ಬೇಡಿಕೆ ಇಲ್ಲದಂತಾಗಿದೆ. ಸದಾ ಜನರಿಂದ ತುಂಬಿಕೊಳ್ಳುತ್ತಿದ್ದ ವಾಹನಗಳು ಖಾಲಿಯಾಗಿ ನಿಂತಿದ್ದು, ವಾಹನ ಚಾಲಕರು ಪ್ರವಾಸಿಗರನ್ನು ಕಾಯುವಂತಾಗಿದೆ. ಹಂಪಿ ಪ್ರವಾಸೋದ್ಯಮ ನೆಚ್ಚಿಕೊಂಡು ಬದುಕು ಕಟ್ಟಿಕೊಂಡಿದ್ದ ಸಣ್ಣಪುಟ್ಟ ವ್ಯಾಪಾರಸ್ಥರು, ಗೈಡ್‌ಗಳು ಹಾಗೂ ಆಟೋ ಚಾಲಕರಿಗೆ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.