“ಸಿಇಟಿ ಪರೀಕ್ಷೆಯಲ್ಲಿ ಔಟ್ ಆಫ್ ಸಿಲೆಬಸ್ ಪ್ರಶ್ನೆಗಳು!” ಹೊಣೆ ಯಾರು?

Advertisement

-ಡಾ. ಎಂ. ಮೋಹನ್ ಆಳ್ವ

ಮಂಗಳೂರು: ಎಂಜಿನಿಯರಿಂಗ್‌ ಸೇರಿದಂತೆ ಇತರ ವೃತ್ತಿಪರ ಶಿಕ್ಷಣ ಕೋರ್ಸುಗಳ ಪ್ರವೇಶಕ್ಕಾಗಿ ನಡೆಯುವ ಪ್ರವೇಶ ಪರೀಕ್ಷೆ ಸಿಇಟಿಯು ಈ ವರ್ಷ ವಿದ್ಯಾರ್ಥಿಗಳ ಪಾಲಿಗೆ ಸ್ನೇಹಪರವಾಗಿ ಇರದೇ ದುಸ್ವಪ್ನವಾಗಿ ಪರೀಕ್ಷಾ ಕೊಠಡಿಯಲ್ಲಿಯೇ ಆತಂಕಕ್ಕೆ ಒಳಗಾಗುವ ಪರಿಸ್ಥಿತಿಯನ್ನು ಕರ್ನಾಟಕ ಪರೀಕ್ಷಾ ಮಂಡಳಿ (ಕೆಇಎ) ತಂದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ” ಎಂದು ಕರ್ನಾಟಕ ಅನುದಾನರಹಿತ ಪದವಿಪೂರ್ವ ಕಾಲೇಜ್ ಆಡಳಿತ ಮಂಡಳಿಗಳ ಸಂಘ(ಕುಪ್ಮಾ) ಇದರ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಪ್ರತೀವರ್ಷ ಸುಮಾರು 3 ಲಕ್ಷ ವಿದ್ಯಾರ್ಥಿಗಳು ರಾಜ್ಯಾದ್ಯಾಂತ ಸಿಇಟಿ ಪರೀಕ್ಷೆ ಬರೆಯುತ್ತಾರೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇದುವರೆಗೂ ಪರೀಕ್ಷೆಯನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಕೆಇಎ ಅವರು ಸಮನ್ವಯತೆಯಿಂದ ಸುಸೂತ್ರವಾಗಿ ನಡೆಸಿಕೊಂಡು ಬರುತ್ತಿದ್ದರು. ಆದರೆ ಈ ವರ್ಷ ನಡೆಸಿದ ಸಿಇಟಿ ಪರೀಕ್ಷೆಯು ವಿದ್ಯಾರ್ಥಿಗಳಿಗೆ, ಹೆತ್ತವರಿಗೆ ಮತ್ತು ಅಧ್ಯಾಪಕ ವೃಂದದವರಿಗೂ ಗೊಂದಲದ ಮತ್ತು ಆತಂಕದ ಗೂಡಾಗಿದೆ.
ಸಿಇಟಿಯ ನಾಲ್ಕು ಪರೀಕ್ಷೆಗಳಲ್ಲಿ ಅಂದರೆ ಜೀವಶಾಸ್ತ್ರ ಮತ್ತು ಗಣಿತ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳಲ್ಲಿ ಕೇಳಲಾಗಿರುವ ಪ್ರಶ್ನೆಗಳು ಪದವಿ ಪೂರ್ವ ಶಿಕ್ಷಣ ಇಲಾಖೆಯು ಪಠ್ಯ ಪುಸ್ತಕದಿಂದ ತೆಗೆದು ಹಾಕಿರುವ ಅಧ್ಯಾಯಕ್ಕೆ ಸಂಬಂಧಿಸಿದ 45ಕ್ಕಿಂತ ಹೆಚ್ಚು ಪಶ್ನೆಗಳನ್ನು ಪಠ್ಯದ ಹೊರತಾಗಿ ಕೇಳಲಾಗಿದೆ. ಸಿಇಟಿ ಪರೀಕ್ಷೆಯ ಸಿಲೆಬಸ್ ಪದವಿಪೂರ್ವ ಶಿಕ್ಷಣ ಇಲಾಖೆಯು ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿಭಾಗಕ್ಕೆ ಅಳವಡಿಸಿರುವ ಪಠ್ಯದ ವಿಷಯಗಳನ್ನೇ ಒಳಗೊಂಡಿರುತ್ತದೆ. ಇದನ್ನು ಕೆಇಎ ಇಲಾಖೆಯು ಬಿಡುಗಡೆ ಮಾಡಿರುವ ಸಿಇಟಿ ಕೈಪಿಡಿಯ ಪುಟ ಸಂಖ್ಯೆ 29ರಲ್ಲಿ ಉಲ್ಲೇಖವಾಗಿದೆ. ಹಾಗಾಗಿ ಕರ್ನಾಟಕ ಪಿಯು ಬೋರ್ಡ್ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಯಾವ ಸಿಲೆಬಸ್‌ ನೀಡುತ್ತದೋ ಅದರ ಆಧಾರದ ಮೇಲೆ ಕೆಇಎ ಸಿಇಟಿಯಲ್ಲಿ ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಬೇಕು. ಮೊದಲ ದಿನ ನಡೆದ ಎರಡು ಪರೀಕ್ಷೆಗಳಲ್ಲಿ ಪಠ್ಯದ ಹೊರತಾಗಿ ಪ್ರಶ್ನೆಗಳು ಬಂದಿರುವ ಕಾರಣ ಎರಡನೇ ದಿನ ವಿದ್ಯಾರ್ಥಿಗಳಿಗೆ ಸಿಲೆಬಸ್‌ ಪಠ್ಯವನ್ನು ಓದಬೇಕಾ ಅಥವಾ ಪಠ್ಯದ ಹೊರತಾಗಿ ಓದಬೇಕಾ ಎಂಬ ಬಗ್ಗೆ ಆತಂಕಕ್ಕೆ ಕಾರಣವಾಗಿದೆ. ಈ ಗೊಂದಲಕ್ಕೆ ಕಾರಣರು ಯಾರು? ಇದರ ಜವಾಬ್ದಾರಿಯನ್ನು ಯಾರು ವಹಿಸಿಕೊಳ್ಳುತ್ತಾರೆ?” ಎಂದವರು ಪ್ರಶ್ನಿಸಿದರು.

ಬಳಿಕ ಮಾತಾಡಿದ ಸಂಘಟನೆ ಕಾರ್ಯದರ್ಶಿ ನರೇಂದ್ರ ಎಲ್. ನಾಯಕ್ ಅವರು, “ಪಿಯು ಬೋರ್ಡ್ ವೆಬ್ ಸೈಟ್ ನಲ್ಲಿ ಕಡಿತಗೊಂಡ ಪಠ್ಯಕ್ರಮಗಳನ್ನು ಪ್ರಕಟಿಸಿದ್ದಾರೆ. ಅದರಲ್ಲಿ ಪ್ರಥಮ ಪಿಯು ಮತ್ತು ದ್ವಿತೀಯ ಪಿಯು ವಿಷಯಗಳು ಇವೆ. ಆದರೆ ಇದನ್ನು ಗಣನೆಗೆ ತೆಗೆದುಕೊಳ್ಳದೆ ಕಡಿತಗೊಂಡ ಪಠ್ಯಕ್ರಮಗಳನ್ನು ಅಳವಡಿಸಿ ಪ್ರಶ್ನೆಪತ್ರಿಕೆ ತಯಾರಿಸಿದ್ದಾರೆ ಅಥವಾ ಕಳೆದ ವರ್ಷದ ಪ್ರಶ್ನೆ ಪತ್ರಿಕೆಯನ್ನು ಈ ವರ್ಷವೂ ನೀಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಎರಡು ದಿನಗಳಲ್ಲಿ ಪರೀಕ್ಷೆ ಬರೆಯುವಾಗ ವಿದ್ಯಾರ್ಥಿಗಳಲ್ಲಾದ ಮಾನಸಿಕ ತಳಮಳಕ್ಕೆ ಹೊಣೆ ಯಾರು?” ಎಂದು ಪ್ರಶ್ನೆಸಿದರು. ಬಳಿಕ ಮಾತಾಡಿದ ಎಂ.ಬಿ. ಪುರಾಣಿಕ್ ಅವರು, “ಔಟ್ ಆಫ್ ಸಿಲೆಬಸ್ ಪ್ರಶ್ನೆಗಳು ಬಂದಾಗ ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಒಂದೆರಡು ಮಾರ್ಕ್ ಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಎದುರಾಗಬಹುದು. ಮಕ್ಕಳು ಮತ್ತು ಹೆತ್ತವರ ಆತಂಕಕ್ಕೆ ಹೊಣೆ ಯಾರು? ಸಂಬಂಧಪಟ್ಟವರು ಈ ಕೂಡಲೇ ಪ್ರತಿಕ್ರಿಯೆ ಕೊಡಬೇಕು. ಇಲ್ಲವಾದರೆ ಮುಂದೇನಾದರೂ ಅನಾಹುತ ಸಂಭವಿಸಿದಲ್ಲಿ ಸರಕಾರ ಮತ್ತು ಶಿಕ್ಷಣ ಇಲಾಖೆಯೇ ಹೊಣೆಯಾಗಲಿದೆ” ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಟಿಯಲ್ಲಿ ಕುಪ್ಮಾ ಗೌರವಾಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್, ಅಧ್ಯಕ್ಷ ಮೋಹನ್ ಆಳ್ವ, ಕಾರ್ಯದರ್ಶಿ ನರೇಂದ್ರ ಎಲ್.ನಾಯಕ್, ಸುಧಾಕರ್, ವಿಶ್ವನಾಥ್ ಶೇಷಾಚಲ, ಯುವರಾಜ್ ಜೈನ್, ಮಂಜುನಾಥ್ ರೇವಣ್ಕರ್ ಮತ್ತಿತರರು ಉಪಸ್ಥಿತರಿದ್ದರು.