ಸಂಸಾರದಲ್ಲಿ ಸುಖಕ್ಕಿಂತ ದುಃಖವೇ ಅಧಿಕ

Advertisement

ಪ್ರಪಂಚದಲ್ಲಿ ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಬೇಕಾದ ವಸ್ತುವೆಂದರೆ ಸುಖ. ಯಾರಿಗೂ ಬೇಡವಾದ ವಸ್ತು ದುಃಖ. ಭೌತಿಕವಾಗಿ ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ ಎಂಬ ಪಂಚ ವಿಷಯಗಳಿಂದ ಸುಖವು ದೊರೆಯುವುದರಿಂದ ಅದನ್ನು ಪಡೆಯಲು ಮನುಷ್ಯನು ನಿರಂತರ ಪ್ರಯತ್ನಿಸುತ್ತಿರುತ್ತಾನೆ. ಆದರೆ ಅದು ಅತ್ಯಂತ ಕ್ಷಣಿಕವೂ, ಭ್ರಮಾತ್ಮಕವೂ ಆಗಿರುತ್ತದೆ ಅಲ್ಲದೇ ಅದನ್ನು ಪಡೆಯಲು ವ್ಯಾಪಕವಾದ ದುಃಖವನ್ನು ಅನುಭವಿಸಬೇಕಾಗುತ್ತದೆ. ಆದರೆ ಒಂದು ಕ್ಷಣದ ಆ ಸುಖವು ಅದನ್ನು ಪಡೆಯಲು ವ್ಯಾಪಕವಾಗಿ ಪಟ್ಟಿರುವ ದುಃಖವನ್ನೆಲ್ಲ ಮರೆಸಿ ಹಾಕಿ ಬಿಡುತ್ತದೆ. ಆಗ ಅನುಭವಿಸಿದ ಆ ಕ್ಷಣದ ಸುಖ ಮಾತ್ರ ಸ್ಮೃತಿಯಲ್ಲಿ ಉಳಿಯುವುದರಿಂದ ಅದುವೇ ಅಧಿಕವೆಂದು ಭಾಸವಾಗುತ್ತದೆ. ಅದನ್ನೇ ಮತ್ತೆ ಮತ್ತೆ ಅನುಭವಿಸಲು ಮನದಲ್ಲಿ ವಾಸನೆ ಜಾಗೃತವಾಗುತ್ತದೆ. ಈ ವಾಸನೆಯೇ ಮನುಷ್ಯನನ್ನು ವಿಷಯ ಲಂಪಟನನ್ನಾಗಿ ಮಾಡಿ ಬುದ್ಧಿಯನ್ನು ವಿವೇಕಹೀನನ್ನಾಗಿಸುತ್ತದೆ.
ವಸ್ತುತಃ ಶಬ್ದಾದಿ ವಿಷಯಗಳಿಂದ ಲಭಿಸುವ ಸುಖವು ಇಂದ್ರಿಯ ಮತ್ತು ವಿಷಯಗಳ ಸನ್ನಿಕರ್ಷಜನ್ಯವಾಗಿದ್ದು, ಇಂದ್ರಿಯಗಳೊಂದಿಗೆ ವಿಷಯಗಳ ಸಂಬಂಧವಿರುವವರೆಗೆ ಮಾತ್ರ ತೋರುತ್ತದೆ. ವಿಷಯಗಳು ಇಂದ್ರಿಯಗಳ ಸಂಪರ್ಕಕ್ಕೆ ಬರುವ ಮೊದಲೂ ಅಲ್ಲಿ ಸುಖವಿರುವುದಿಲ್ಲ. ನಂತರವೂ ಸುಖವಿರುವುದಿಲ್ಲ. ಯಥೇಚ್ಛವಾಗಿ ಹೋಳಿಗೆ ಉಣ್ಣುವ ಇಚ್ಛೆಯಾದಾಗ ಅದನ್ನು ಮನೆಯಲ್ಲಿ ಮಾಡಿಸಲು ಎಣ್ಣಿ ಕಡಲೆ ಬೇಳೆ ಮುಂತಾದ ಅನೇಕ ಸಾಮಗ್ರಿಗಳನ್ನು ಮಾರ್ಕೆಟ್‌ನಿಂದ ತರಬೇಕಾಗುತ್ತದೆ. ಹೀಗೆ ಸಾಮಗ್ರಿ ತರುವಾಗ ಯಾವ ಸುಖವಿಲ್ಲ. ತಂದ ಸಾಮಗ್ರಿಗಳನ್ನು ಹೋಳಿಗೆ ಮಾಡಲು ಅನುಕೂಲವಾಗುವ ರೀತಿಯಲ್ಲಿ ಸಜ್ಜುಗೊಳಿಸುವಾಗಲೂ ಸುಖವಿಲ್ಲ. ಹೋಳಿಗೆ ಮಾಡುವಾಗಲೂ ಸುಖವಿಲ್ಲ. ತಾಟಿನಲ್ಲಿ ಬಡಿಸಿದಾಗಲೂ ಸುಖವಿಲ್ಲ. ತುತ್ತು ಮಾಡಿ ಬಾಯಲ್ಲಿ ಇರಿಸಿದಾಗ ಸ್ವಲ್ಪ ಸುಖವೆನಿಸುತ್ತದೆ. ಆ ತುತ್ತನ್ನು ನುಂಗಿದ ಮೇಲೆ ಮತ್ತೆ ಏನೂ ಇಲ್ಲ. ಇದರಂತೆ ಶಬ್ದ ಸ್ಪರ್ಶ ಮೊದಲಾದ ಎಲ್ಲ ವಿಷಯಗಳಿಂದ ದೊರೆಯುವ ಸುಖವು ಕ್ಷಣಿಕವೇ ಆಗಿರುತ್ತದೆ.
ಹೀಗೆ ಒಂದು ಕ್ಷಣ ಮಾತ್ರ ತೋರಿ ಅಡಗುವ ಸುಖವು ಕೂಡ ವಾಸ್ತವಿಕವಾದುದಲ್ಲ. ಬದಲಾಗಿ ಅದು ಭ್ರಾಮಕವಾದುದು. ವಿಷಯಗಳನ್ನು ಅನುಭವಿಸುವಾಗ ಯಾವ ಸಮಯದವರೆಗೆ ಇಂದ್ರಿಯಗಳೊಂದಿಗೆ ವಿಷಯಗಳ ಸಂಬಂಧವು ಇರುತ್ತದೆಯೋ ಅಷ್ಟು ಸಮಯದ ವರೆಗೆ ಮನಸ್ಸು ಏಕಾಗ್ರಗೊಳ್ಳುತ್ತದೆ. ಮನಸ್ಸು ಏಕಾಗ್ರವಾದ ತಕ್ಷಣ ಅದಕ್ಕೆ ಆತ್ಮದ ಸುಖವು ಲಭಿಸುತ್ತದೆ. ಹೀಗೆ ವಿಷಯಗಳ ಸನ್ನಿಕರ್ಷದಿಂದ ಏಕಾಗ್ರಗೊಂಡ ಮನಸ್ಸಿಗೆ ದೊರೆಯುವ ಆ ಆತ್ಮದ ಸುಖವನ್ನೇ ವಿಷಯಗಳಿಂದ ದೊರೆತ ಸುಖವೆಂದು ಮನಷ್ಯನು ಭ್ರಮೆಗೊಳಗಾಗುತ್ತಾನೆ. ಶ್ವಾನವು ಒಣಗಿದ ಎಲುಬನ್ನು ಹಲ್ಲಿನಿಂದ ಕಡಿಯುವಾಗ ಅದು ಆ ನಾಯಿಯ ಒಸಡಿಗೇ ಚುಚ್ಚಿ ಒಸಡಿನಿಂದ ರಕ್ತ ಬರುತ್ತದೆ.
ಅ ರಕ್ತವು ತನಗೆ ಈ ಎಲುಬಿನಿಂದಲೇ ದೊರೆಯುತ್ತಿದೆ ಎಂಬ ಭ್ರಮೆ ಹುಟ್ಟಿ ಅದನ್ನು ಮತ್ತಷ್ಟು ಕಡಿಯುತ್ತದೆ. ಆಗ ಆ ನಾಯಿಯ ಒಸಡಿನಿಂದ ಮತ್ತಷ್ಟು ರಕ್ತ ಬರುತ್ತದೆ. ಇದರಂತೆ ಆತ್ಮದ ಸುಖವೇ ವಿಷಯಗಳನ್ನು ಅನುಭವಿಸುವ ಸಮಯದಲ್ಲಿ ಮನಸ್ಸಿಗೆ ಲಭಿಸುವುದರಿಂದ ಮನಸ್ಸು ವಿಷಯಗಳಿಂದಲೇ ಸುಖವು ದೊರೆಯುತ್ತದೆ ಎಂಬ ಭ್ರಮೆಯಲ್ಲಿ ಮುಳುಗುತ್ತದೆ. ಈ ಭ್ರಮೆಯೇ ಮತ್ತಷ್ಟು ಪ್ರಗಾಢವಾಗಿ ಶ್ವಾನಗಳು ಎಲುಬಿಗಾಗಿ ಕಚ್ಚಾಡುವಂತೆ ಮನುಷ್ಯರು ವಿಷಯಗಳಿಗಾಗಿ ಪರಸ್ಪರ ಪೈಪೋಟಿ ಮಾಡುತ್ತಿರುತ್ತಾರೆ. ಕಾರಣ ವಿಷಯಗಳಲ್ಲಿಯ ಸುಖವು ಕ್ಷಣಿಕ, ಮೋಹಕ, ಭ್ರಾಮಕವಾಗಿರುವುದರಿಂದ ಅವುಗಳೊಡನೆ ನಿರ್ಲಿಪ್ತ ಭಾವದಿಂದ ಇರಬೇಕು.