ಶಿರಸಿ ಉದ್ಯಮಿಗಳ ನಿವಾಸದ ಮೇಲೆ ಐಟಿ ದಾಳಿ

Advertisement

ಶಿರಸಿ: ಶುಕ್ರವಾರ ಮುಂಜಾನೆ ಏಕಕಾಲಕ್ಕೆ ೬ ಕಡೆಗಳಲ್ಲಿ ಐಟಿ ಅಧಿಕಾರಿಗಳು ಶಿರಸಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ದಾಳಿ ನಡೆಸಿದ್ದಾರೆ.
ಯುವ ಕಾಂಗ್ರೆಸ್ ಧುರೀಣ ಹಾಗೂ ಉದ್ಯಮಿ ದೀಪಕ್ ಹೆಗಡೆ ದೊಡ್ಡೂರು ಅವರ ಮನೆ, ಅಡಿಕೆ ವ್ಯಾಪಾರಸ್ಥ ಮತ್ತು ಉದ್ಯಮಿ ಶಿವರಾಮ ಹೆಗಡೆ, ನಿಕಟಪೂರ್ವ ಟಿಎಸ್‌ಎಸ್ ಎಂಡಿ ರವೀಶ ಹೆಗಡೆ, ಟಿಎಸ್‌ಎಸ್ ನಿವೃತ್ತ ಉದ್ಯೋಗಿ ಮತ್ತು ಉದ್ಯಮಿ ಅನಿಲ ಮುಷ್ಠಗಿ ಮನೆ ಹಾಗೂ ಹಾಲಿ ಟಿಎಸ್‌ಎಸ್ ನಿರ್ದೇಶಕ, ನಿಕಟಪೂರ್ವ ಉಪಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆಯವರ ನಿವಾಸಗಳ ಮೇಲೆ ಹುಬ್ಬಳ್ಳಿ ಮತ್ತು ಇತರೆಡೆಯಿಂದ ಬಂದಿದ್ದ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಮತ್ತು ವ್ಯವಹಾರಗಳ ಬಗೆಗೆ ತಪಾಸಣೆ ನಡೆಸಿದರು.
ಟಿಎಸ್‌ಎಸ್ ಜೊತೆ ವ್ಯವಹಾರ…
ಟಿಎಸ್‌ಎಸ್ ಸಂಸ್ಥೆಯೊಂದಿಗೆ ಅನೇಕ ವ್ಯವಹಾರದಲ್ಲಿ ಇವರು ತಮ್ಮ ಉದ್ಯಮದೊಂದಿಗೆ ಸಂಬಂಧ ಹೊಂದಿರುವರು. ಕೆಲ ತಿಂಗಳ ಹಿಂದೆ ಟಿಎಸ್‌ಎಸ್ ನಲ್ಲಿಯ ಆಡಳಿತ ಮಂಡಳಿ ಬದಲಾವಣೆ ಆಗಿದ್ದು, ಈ ಹಿಂದಿನ ವ್ಯವಹಾರಗಳ ಬಗ್ಗೆ ವಿಶೇಷ ಆಡಿಟ್ ಕೈಗೊಳ್ಳಲು ಹೊಸ ಆಡಳಿತ ಮಂಡಳಿ ನಿರ್ಧರಿಸಿತ್ತು. ಅದರಂತೆ ಪ್ರತ್ಯೇಕ ೨ ತಂಡ ಲೆಕ್ಕ ಪರಿಶೀಲನೆ ಹಾಗೂ ವ್ಯವಹಾರ ಪರಿಶೀಲನೆ ನಡೆಸಿತ್ತು. ಆ ಸಂದರ್ಭದಲ್ಲಿ ಕೋಟ್ಯಂತರ ರೂ. ಖರೀದಿ ಮತ್ತು ನಿರ್ವಹಣೆ ವ್ಯವಹಾರವು ಇವರ ಕಂಪನಿಗಳ ಮೂಲಕ ನಡೆದಿದ್ದು ಬೆಳಕಿಗೆ ಬಂದಿತ್ತು. ಆ ಕುರಿತು ತನಿಖೆ ಸಹ ಮುಂದುವರಿದಿತ್ತು. ಅದರ ಅಂಗವಾಗಿಯೇ ಈ ಐಟಿ ದಾಳಿ ನಡೆದಿರಬಹುದೆಂದು ಶಂಕಿಸಲಾಗಿದೆ.
ರಿಯಲ್ ಎಸ್ಟೇಟ್ ಮತ್ತು ವಿದೇಶೀ ಕಂಪನಿ ಮತ್ತು ವಿವಿಧ ವಸ್ತುಗಳ ಸರಬರಾಜು ವ್ಯವಹಾರದಲ್ಲಿ ಈ ೬ ಜನರಲ್ಲಿ ಕೆಲವರ ಉದ್ಯಮ ಕಾರ್ಯನಿರ್ವಹಿಸಿತ್ತು ಎನ್ನಲಾಗಿದೆ. ಅದರ ಸಂಪೂರ್ಣ ವಿವರ ಪರಿಶೀಲಿಸಲಾಗುತ್ತಿದೆ. ವ್ಯವಹಾರ ಮತ್ತು ಇತರ ವಿಷಯಗಳು ಐಟಿ ಅಧಿಕಾರಿಗಳು ಹೊರಹಾಕುವ ವಿವರಗಳ ಮೇಲೆ ನಿಂತಿದ್ದು, ಸ್ಪಷ್ಟವಾದ ಮಾಹಿತಿಯನ್ನೊಳಗೊಂಡ ವಿವರ ಪರಿಶೀಲನೆ ಮುಗಿದ ಬಳಿಕ ಸಿಗಬಹುದಾಗಿದೆ. ಶುಕ್ರವಾರ ರಾತ್ರಿ ಮತ್ತು ಶನಿವಾರ ಮುಂಜಾನೆಯ ತನಕ ಪರಿಶೀಲನೆ ಮುಂದುವರಿಯಬಹುದು ಎನ್ನಲಾಗುತ್ತಿದೆ.