ವೈಭವಪೂರ್ಣ ಉತ್ಸವಕ್ಕೆ ಕ್ಷಣಗಣನೆ

Advertisement

ಕೆ.ಲಕ್ಷ್ಮಣ
ಹೊಸಪೇಟೆ:
ವಿಶ್ವ ವಿಖ್ಯಾತ ಹಂಪಿ ಉತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ವಿಜಯನಗರ ಗತ ವೈಭವ ಮರುಕಳಿಸಲು ಹಂಪಿ ಸಜ್ಜುಗೊಳ್ಳುತ್ತಿದೆ.
ಫೆ.೨ರಂದು ರಾತ್ರಿ ೭:೩೦ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಂಪಿ ಉತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ. ಬಳಿಕ ಹಂಪಿಯ ಗಾಯತ್ರಿ ಪೀಠ ವೇದಿಕೆ, ಎದುರು ಬಸವಣ್ಣ ವೇದಿಕೆ, ವಿರೂಪಾಕ್ಷೇಶ್ವರ ವೇದಿಕೆ ಮತ್ತು ಸಾಸಿವೆಕಾಳು ಗಣಪತಿ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮೂರು ದಿನಗಳವರೆಗೆ ಉತ್ಸವ ನಡೆಯಲಿದೆ.
ಉದ್ಘಾಟನಾ ಸಮಾರಂಭದಲ್ಲಿ ಅಶ್ವಿನಿ ಪುನೀತ್‌ರಾಜಕುಮಾರ ಭಾಗವಹಿಸಲಿದ್ದಾರೆ. ಶಾಸಕ ಎಚ್.ಆರ್. ಗವಿಯಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಜಮೀರ್ ಅಹಮದ್ ಖಾನ್, ಶಿವರಾಜ್ ತಂಗಡಗಿ ಸೇರಿದಂತೆ ಶಾಸಕರು, ಸಚಿವರು ಭಾಗವಹಿಸಲಿದ್ದಾರೆ.
ಕಲೆ ಸಾಕಾರ: ಐದು ಸಾವಿರ ಕಲಾವಿದರು ಹಂಪಿಯಲ್ಲಿ ವೈವಿಧ್ಯಮಯ ಕಲೆಯನ್ನು ಉಣಬಡಿಸಲಿದ್ದಾರೆ ಎರಡು ಸಾವಿರ ಪೊಲೀಸರನ್ನು ಕೂಡ ನಿಯೋಜನೆ ಮಾಡಲಾಗುತ್ತಿದೆ. ಪುಸ್ತಕ ಮೇಳ, ವಸ್ತು ಪ್ರದರ್ಶನ, ಸಿರಿಧಾನ್ಯ ಮೇಳವೂ ನಡೆಯಲಿದೆ. ಕಲಾವಿದೆ ಅನುರಾಧಾ ಭಟ್ ವಿರೂಪಾಕ್ಷೇಶ್ವರ ಗೀತೆ, ನೃತ್ಯ ಗಾಯನ ನಡೆಸಿಕೊಡಲಿದ್ದಾರೆ. ವಿಜಯಪ್ರಕಾಶ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಫೆ. ೩ರಂದು ಗಾಯತ್ರಿ ಪೀಠ ವೇದಿಕೆಯಲ್ಲಿ ೨ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಾಲ್ಗೊಳ್ಳಲಿದ್ದಾರೆ. ವಿ. ಹರಿಕೃಷ್ಣ ರಸಮಂಜರಿ ನಡೆಸಿಕೊಡಲಿದ್ದಾರೆ.
ಫೆ. ೪ರಂದು ನಟರ ದಂಡೇ ಹಂಪಿ ಉತ್ಸವಕ್ಕೆ ಆಗಮಿಸಲಿದೆ. ನಟರಾದ ರವಿಶಂಕರ್ ಆರ್ಮುಗಂ, ಅಜಯರಾವ್, ನೆನಪಿರಲಿ ಪ್ರೇಮ, ದಿಗಂತ್, ಜಾಹಿದ್ ಅಹಮದ್ ಖಾನ್ ಕೂಡ ರಂಜಿಸಲಿದ್ದಾರೆ. ನಟಿಯರಾದ ರಾಗಿಣಿ ದಿವೇದಿ, ನಮ್ರತಾ ಗೌಡ, ಸಂಯುಕ್ತ ಹೆಗ್ಡೆ ಆಗಮಿಸಲಿದ್ದಾರೆ. ಸಾಧುಕೋಕಿಲ ಮತ್ತು ತಂಡ ಕೂಡ ರಸಮಂಜರಿ ಕಾರ್ಯಕ್ರಮ ನೀಡಲಿದೆ.