ವಿಫಲ ಬೋರ್‌ವೆಲ್ ಮುಚ್ಚುವುದು ಯಾರ ಹೊಣೆ?

Advertisement

ವಾಸುದೇವ ಹೆರಕಲ್ಲ
ವಿಜಯಪುರ: ಲಚ್ಯಾಣದ ಶ್ರೀಸಿದ್ಧಲಿಂಗ ಮಹಾರಾಜರ ಕೃಪೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಯೋಧರ ಪರಿಶ್ರಮದ ಫಲವಾಗಿ ಕೊಳವೆ ಬಾವಿಗೆ ಬಿದ್ದಿದ್ದ ಮಗು ಸಾತ್ವಿಕ ಸಾವು ಗೆದ್ದು ಬಂದಿದ್ದಾನೆ. ಆಪರೇಷನ್ ಸಕ್ಸಸ್ ಆಗಿದ್ದರೂ ಸಾರ್ವಜನಿಕರನ್ನು ಕಾಡುವ ಏಕೈಕ ಪ್ರಶ್ನೆ ಎಂದರೆ ಇಂಥ ಅವಘಡಗಳಿಗೆ ಯಾರು ಹೊಣೆ?
ಒಂದು ಕೊಳವೆ ಬಾವಿ ವಿಫಲವಾದರೆ ಅದನ್ನು ಮುಚ್ಚುವುದು ಜವಾಬ್ದಾರಿ ಅಲ್ಲವೇ? ಆ ಹೊಣೆ ಹೊತ್ತುಕೊಳ್ಳಬೇಕಾಗಿದ್ದು ಯಾರು? ಸಾತ್ವಿಕ ಕೊಳವೆ ಬಾವಿಗೆ ಬಿದ್ದ ಪ್ರಕರಣದಲ್ಲಿ ಇಲ್ಲಿಯವರೆಗೂ ಯಾರನ್ನೂ ಹೊಣೆಗಾರರನ್ನಾಗಿ ಮಾಡಿದಂತಿಲ್ಲ.
ಬೋರ್‌ವೆಲ್ ಕೊರೆದ ಗುತ್ತಿಗೆದಾರನೇ? ಜಮೀನಿನ ಮಾಲೀಕನೇ? ಕೊರೆಯಲು ಪರವಾನಿಗೆ ನೀಡಿದ ಗ್ರಾಮ ಪಂಚಾಯ್ತಿ ಅಧಿಕಾರಿಯೇ? ಗ್ರಾಮ ಪಂಚಾಯ್ತಿ ಅಧಿಕಾರಿಗಳು ಸಮರ್ಪಕವಾಗಿ ಕಾನೂನು ಅನುಷ್ಠಾನಗೊಳಿಸುತ್ತಾರೋ ಇಲ್ಲವೋ ಎಂದು ಪರಿಶೀಲಿಸದ ತಾಲೂಕು ಪಂಚಾಯ್ತಿ ಅಧಿಕಾರಿಯೇ? ಕಾಲಕಾಲಕ್ಕೆ ಈ ಕುರಿತು ಪರಿಶೀಲನೆ ನಡೆಸಬೇಕಾಗಿದ್ದ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳೇ ಅಥವಾ ಇಡೀ ಜಿಲ್ಲೆಯ ಕಂದಾಯ ಇಲಾಖೆ ವ್ಯವಸ್ಥೆಯ ಮೇಲೆ ತೀವ್ರ ನಿಗಾ ವಹಿಸಬೇಕಾದ ಜಿಲ್ಲಾಧಿಕಾರಿಗಳೇ?
ಪ್ರಶ್ನೆಗಳ ಸರಮಾಲೆ ಬೆಳೆಯುತ್ತಲೇ ಹೋಗು ತ್ತದೆ. ತಮಾಷೆ ಎಂದರೆ ಇಂಥ ಅನಾಹುತಗಳಾ ದಾಗ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಉತ್ತರಗಳನ್ನು ಸಿದ್ಧವಾಗಿಟ್ಟುಕೊಂಡಿರುತ್ತಾರೆ. ಸರ್ಕಾರವೂ ಅನಾಹುತ ಗಳಾದಾಗ ಎಚ್ಚೆತ್ತುಕೊಂಡು ಉನ್ನತಮಟ್ಟದ ಸಭೆ ನಡೆಸಿ ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಪರೆನ್ಸ್ ಮಾಡಿ ಮರೆತುಬಿಡುತ್ತದೆ. ಮತ್ತೊಂದು ಮಗು ಬೋರ್‌ವೆಲ್‌ಗೆ ಬಿದ್ದಾಗಲೇ ಸರ್ಕಾರ ಮತ್ತೆ ಚುರುಕಾಗುತ್ತದೆ.
ಸರ್ಕಾರದ ನಿಯಮಾವಳಿಗಳನ್ನೇ ಗಮನಿಸಿದರೆ ಬೋರ್‌ವೆಲ್ ಕೊರೆಯುವುದಕ್ಕೂ ಮೊದಲು ಪರವಾನಿಗೆ ಪಡೆಯಲೇ ಬೇಕು. ಆ ನಂತರದಲ್ಲಿ ಕೊರೆದ ಬಾವಿಯಲ್ಲಿ ನೀರು ಬಿದ್ದಿದೆಯೋ ಅಥವಾ ವಿಫಲವಾಗಿದೆಯೋ ಎಂಬ ಬಗ್ಗೆ ಬೋರ್‌ವೆಲ್ ಕಂಪನಿ ಗುತ್ತಿಗೆದಾರ ಸರ್ಟಿಫಿಕೇಟ್ ನೀಡಬೇಕು. ಬೋರ್‌ವೆಲ್ ಕೊರೆಯುವುದಕ್ಕಾಗಿ ಲಕ್ಷಾಂತರ ರೂ. ಬಿಲ್ ಮಾಡುವ ಗುತ್ತಿಗೆದಾರನಿಗೆ ಅದೆಂಥ ಮರೆವು. ಬೋರ್‌ವೆಲ್ ವಿಫಲವಾದ ತಕ್ಷಣ ಅದನ್ನು ಮುಚ್ಚಲೇಬೇಕು. ಒಂದೊಮ್ಮೆ ನೀರು ಬಿದ್ದಿದ್ದರೂ ಕೇಸಿಂಗ್‌ಪೈಪ್, ಮೋಟರ್ ಅಳವಡಿಸುವುದಕ್ಕೆ ನಾಲ್ಕಾರು ದಿನಗಳ ಬೇಕಾಗುತ್ತವೆ. ಅಲ್ಲಿಯವರೆಗೂ ಬೋರ್‌ವೆಲ್‌ನ ಬಾಯಿಯನ್ನು ತೆರೆದಿಡಬಾರದು. ಅದಕ್ಕೊಂದು ಮುಚ್ಚಳ ಹಾಕಲೇಬೇಕಲ್ಲವೇ?
ಎಲ್ಲರೂ ಹಾಗಂತಲ್ಲ. ಎಲ್ಲೊ ಕೆಲವರು ಮಾಡುವ ಕೆಲಸಗಳು ಅಮಾಯಕ ಕಂದಮ್ಮಗಳ ಪ್ರಾಣಕ್ಕೆ ಕಂಟಕ ತಂದೊಡ್ಡುತ್ತವೆ.
ವಿಜಯಪುರ ಜಿಲ್ಲೆಯಲ್ಲಿಯೇ ಈ ಹಿಂದೆ ಎರಡು ಕಂದಮ್ಮಗಳು ವಿಫಲ ಬೋರ್‌ವೆಲ್‌ನಲ್ಲಿ ಬಿದ್ದು ಸಾವಿಗೀಡಾದ ಇತಿಹಾಸವಿದೆ. ಜಿಲ್ಲೆಯಲ್ಲೆ ಇನ್ನೆಷ್ಟು ಮೃತ್ಯುಕೂಪಗಳಿವೆಯೋ ಲೆಕ್ಕವಿಟ್ಟವರು ಯಾರು?