ವಿದ್ಯುತ್ ದರ ೧.೧೦ ರೂ. ಕಡಿತ ಜಾರಿ

Advertisement

ಬೆಂಗಳೂರು: ಕರ್ನಾಟಕ ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಕೈಗೊಂಡ ನಿರ್ಧಾರದಂತೆ ಏಪ್ರಿಲ್ ೧ರಿಂದ ವಿದ್ಯುತ್ ದರ ಪ್ರತಿ ಯುನಿಟ್‌ಗೆ ೧.೧೦ ರೂ. ಜಾರಿಯಾಗಿದ್ದು, ೧೫ ವರ್ಷಗಳ ನಂತರ ರಾಜ್ಯದಲ್ಲಿ ವಿದ್ಯುತ್ ದರ ಇಳಿಕೆಯಾಗಿದೆ
ಗೃಹಬಳಕೆಯಲ್ಲಿ ೧೦೦ ಯುನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಸುವವರಿಗೆ ಪ್ರತಿ ಯುನಿಟ್‌ಗೆ ೧.೧೦ ರೂ. ಕಡಿಮೆ ಮಾಡಲಾಗಿದೆ. ಈ ಮೂಲಕ ೧೫ ವರ್ಷಗಳ ಬಳಿಕ ರಾಜ್ಯದಲ್ಲಿ ವಿದ್ಯುತ್ ದರ ಇಳಿಕೆಯಾಗಿದೆ. ೨೦೨೪-೨೫ನೇ ಸಾಲಿಗೆ ಅನ್ವಯವಾಗುವಂತೆ ಈ ಪರಿಷ್ಕೃತ ದರ ಏಪ್ರಿಲ್ ೧ರಿಂದಲೇ ಜಾರಿಯಾಗಿದ್ದು ಎಲ್ಲಾ ಎಸ್ಕಾಂಗಳಿಗೂ ಏಕರೂಪದ ವಿದ್ಯುತ್ ದರವೇ ಜಾರಿಗೆ ಬರುತ್ತಿದೆ.
ಮೊದಲು ೧೦೦ಕ್ಕಿಂತ ಹೆಚ್ಚು ಯುನಿಟ್ ವಿದ್ಯುತ್ ಬಳಕೆ ಮಾಡುವವರಿಗೆ ಪ್ರತಿ ಯುನಿಟ್‌ಗೆ ೭ ರೂ. ನಿಗದಿ ಮಾಡಲಾಗಿತ್ತು. ಇದೀಗ ೭ ರೂ. ಬದಲಿಗೆ ಪ್ರತಿ ಯುನಿಟ್‌ಗೆ ೫.೯೦ ರೂ. ಮಾತ್ರ ಶುಲ್ಕ ವಿಧಿಸಲಾಗಿದೆ. ಇನ್ನು ೧೦೦ ಯುನಿಟ್‌ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವವರು ಈಗಾಗಲೆ ಪ್ರತಿ ಯುನಿಟ್‌ಗೆ ೪.೭೫ ರೂ. ಪಾವತಿಸುತ್ತಿದ್ದಾರೆ.
ಸರ್ಕಾರ ೨೦೦ ಯುನಿಟ್ ಒಳಗೆ ಬಳಸುವವರಿಗೆ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ನೀಡುವುದರಿಂದ ಈ ಸೌಲಭ್ಯಕ್ಕೆ ನೋಂದಾಯಿಸಿಕೊಂಡವರಿಗೆ ದರ ಇಳಿಕೆಯ ಪ್ರಯೋಜನ ಸಿಗುವುದಿಲ್ಲ. ಗ್ರಾಹಕರಿಗೆ ದರ ಕಡಿತದ ಲಾಭ ಏಪ್ರಿಲ್‌ನಲ್ಲಿ ಬರುವ ಬಿಲ್‌ನಲ್ಲಿ ಬರುವುದಿಲ್ಲ. ಮೇ ತಿಂಗಳಿನಲ್ಲಿ ಬರುವ ಬಿಲ್‌ನಲ್ಲಿ ಕಡಿಮೆ ಮಾಡಲಾದ ದರ ಅನ್ವಯವಾಗಲಿದೆ. ೨೦೨೪-೨೫ನೇ ಸಾಲಿಗೆ ಅನ್ವಯವಾಗುವಂತೆ ಕೆಇಆರ್‌ಸಿ ಮಾಡಿರುವ ದರ ಪರಿಷ್ಕರಣೆ ಆದೇಶದಲ್ಲಿ ಈವರೆಗೆ ಎಲ್ಲ ಎಸ್ಕಾಂಗಳ ವ್ಯಾಪ್ತಿಯಲ್ಲಿ ೦-೧೦೦ ವರೆಗಿನ ಯೂನಿಟ್ ಹಾಗೂ ೧೦೦ಕ್ಕಿಂತ ಹೆಚ್ಚು ಯುನಿಟ್ ಬಳಕೆಗೆ ಪ್ರತ್ಯೇಕವಾಗಿದ್ದ ಎಲ್.ಟಿ. ಗೃಹಬಳಕೆ ಶುಲ್ಕದ ಸ್ಲ್ಯಾಬ್ ರದ್ದುಪಡಿಸಲಾಗಿದೆ.
ಎಷ್ಟೇ ಯುನಿಟ್ ಬಳಕೆ ಮಾಡಿದರೂ ಪ್ರತಿ ಯೂನಿಟ್‌ಗೆ ೫.೯೦ ರೂ.ಗಳಂತೆ ದರ ನಿಗದಿ ಮಾಡಿದೆ. ಜತೆಗೆ ಎಲ್ಲಾ ಎಸ್ಕಾಂಗಳಿಗೂ ಏಕರೂಪದ ಗೃಹಬಳಕೆ ವಿದ್ಯುತ್ ದರ ನಿಗದಿ ಮಾಡಿದೆ. ಇದರಿಂದ ೧೦೦ಕ್ಕಿಂತ ಹೆಚ್ಚು ಯುನಿಟ್ ಬಳಕೆ ಮಾಡುವವರಿಗೆ ೭ ರೂ. ಬದಲಿಗೆ ಪ್ರತಿ ಯುನಿಟ್‌ಗೆ ೫.೯೦ ರೂ. ಶುಲ್ಕ ವಿಧಿಸಲಾಗುತ್ತದೆ.
ಇನ್ನು ೧೦೦ ಯುನಿಟ್‌ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವವರಿಗೆ ಈವರೆಗೆ ಪ್ರತಿ ಯುನಿಟ್‌ಗೆ ೪.೭೫ ರೂ. ನಿಗದಿ ಮಾಡಲಾಗಿತ್ತು. ಅದು ಸಹ ೫.೯೦ ರೂ.ಗೆ ಹೆಚ್ಚಳವಾಗುವುದರಿಂದ ೧೦೦ ಯುನಿಟ್‌ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವವರಿಗೆ ಪ್ರತಿ ಯುನಿಟ್‌ಗೆ ೧.೧೫ ರೂ. ಶುಲ್ಕ ಹೆಚ್ಚಳ ಹೊರೆ ಬೀಳಲಿದೆ. ಆದರೆ, ೧೦೦ ಯುನಿಟ್‌ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವ ಶೇ. ೯೭ ರಷ್ಟು ವಿದ್ಯುತ್ ಬಳಕೆದಾರರು ಈಗಾಗಲೇ ಗೃಹಜ್ಯೋತಿ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ಹೀಗಾಗಿ ಇವರಿಗೆ ದರ ಏರಿಕೆ ಬಿಸಿ ತಾಗುವುದಿಲ್ಲ.