ವಯಸ್ಕರಲ್ಲಿ ಕಾಣಿಸಿಕೊಳ್ಳುವ ಬಿಳಿ ಕೂದಲ ಸಮಸ್ಯೆ…

Advertisement

ಪ್ರಶ್ನೆ: ನನ್ನ ಗೆಳತಿಗೆ ೧೬ ವರ್ಷ. ಅವಳಿಗೆ ಅಲ್ಲೊಂದು ಇಲ್ಲೊಂದು ಬಿಳಿ ಕೂದಲು ಕಾಣಿಸಿಕೊಂಡಿದೆ. ಈಗಲೇ ಬಿಳಿ ಕೂದಲು ಶುರುವಾಗಿರೋದು ಅವಳಿಗೆ ತುಂಬಾ ಆತಂಕ ತಂದಿದೆ. ಇದಕ್ಕೆ ಏನು ಮಾಡಬೇಕು? ಅವಳು ತಲೆಗೆ ಎಣ್ಣೆಯನ್ನು ಸರಿಯಾಗಿ ಹಚ್ಚಿಕೊಳ್ಳುವುದಿಲ್ಲ. ಶಾಂಪೂ ಕೂಡ ಬೇರೆ ಬೇರೆ ಬದಲಾಯಿಸುತ್ತಿರುತ್ತಾಳೆ ಬಿಳಿ ಕೂದಲು ಆಗದಂತೆ ತಡೆಯುವುದು ಹೇಗೆ? ದಯವಿಟ್ಟು ಹೇಳಿ.
ಉತ್ತರ: ಇದು ನಿಮ್ಮ ಗೆಳತಿಯ ಸಮಸ್ಯೆ ಮಾತ್ರವಲ್ಲ. ಅನೇಕ ಯುವ ವಯಸ್ಸಿನ ಹುಡುಗ ಹುಡುಗಿಯರಿಗೆ ತಲೆ ಕೂದಲು ಬಿಳಿಯಾಗಲು ಆರಂಭವಾಗಿದೆ. ಪರಿಸರ ಮಾಲಿನ್ಯ, ಪೋಷಕಾಂಶಗಳ ಕೊರತೆ, ತಲೆಗೆ ನಿಯಮಿತವಾಗಿ ಎಣ್ಣೆ ಹಚ್ಚಿಕೊಳ್ಳದಿರುವುದು, ಅನುವಂಶಿಯ ಕಾರಣ ಮುಂತಾದವುಗಳಿಂದ ಕೂದಲು ಬೇಗನೆ ಬಿಳಿಯಾಗುತ್ತಿದೆ. ನೀಲಿ ಭೃಂಗರಾಜ ತೈಲವನ್ನು ನಿಯಮಿತವಾಗಿ ತಲೆಗೆ ಹಚ್ಚಿಕೊಳ್ಳಬೇಕು. ಈ ತೈಲ ಆಯುರ್ವೇದ ಔಷಧಿ ಅಂಗಡಿಯಲ್ಲಿ ಸಿಗುತ್ತದೆ. ಆಹಾರದಲ್ಲಿ ಸೊಪ್ಪು, ತರಕಾರಿ, ಹಣ್ಣುಗಳು, ಹಾಲು ಮೊಸರು ತುಪ್ಪ ಧಾರಾಳವಾಗಿ ಸೇವಿಸಬೇಕು. ತಲೆಯ ಸ್ನಾನಕ್ಕೆ ಗಿಡಮೂಲಿಕೆಗಳಿಂದ ತಯಾರಾದ ಮೃದು ಶಾಂಪೂ ಬಳಸಬೇಕು. ತಲೆ ಸ್ನಾನಕ್ಕೆ ಹೆಚ್ಚು ಬಿಸಿ ನೀರಿನ ಬಳಕೆ ಬೇಡ. ವಾರಕ್ಕೊಮ್ಮೆ ಕಾಡಿಗ್ಗರುಗ ಪುಡಿಯನ್ನು ಅಂದರೆ ಬೃಂಗರಾಜದ ಪುಡಿಯನ್ನು ಮೆಹಂದಿಯೊಂದಿಗೆ ನೀರಿನಲ್ಲಿ ಬೆರೆಸಿ ಪೇಸ್ಟ್ ತಯಾರಿಸಿ ಬಿಳಿ ಕೂದಲಿಗೆ ಹಚ್ಚಿ ಒಂದು ಗಂಟೆ ಬಿಟ್ಟು ತೊಳೆಯಬೇಕು. ಇದರಿಂದ ಕೂದಲು ಸ್ವಲ್ಪ ಕೆಂಚಗಾಗುತ್ತದೆ.
ಪ್ರಶ್ನೆ: ನನ್ನ ವಯಸ್ಸು ೧೭ ವರ್ಷ. ನನಗೆ ತುಟಿಯ ಮೇಲ್ಭಾಗದಲ್ಲಿ ಸಣ್ಣಗೆ ಕೂದಲು ಬರುತ್ತಿದೆ. ನನ್ನ ಗೆಳತಿಯರು ತಮಾಷೆ ಮಾಡುತ್ತಾರೆ. ಕೂದಲುಗಳನ್ನು ಹೋಗಲಾಡಿಸಲು ಯಾವುದಾದರೂ ಕ್ರೀಮ್ ಇದೆಯೇ? ನನ್ನ ಗೆಳತಿ ಜಾಹೀರಾತಿನಲ್ಲಿ ಬರುವ ಕ್ರೀಮ್ ಅನ್ನು ಬಳಸಲು ತಿಳಿಸಿದಳು. ಚರ್ಮಕ್ಕೆ ಏನಾದರೂ ತೊಂದರೆಯಾದರೆ ಅಂತ ಭಯ ಆಗುತ್ತೆ. ಆದ್ದರಿಂದ ಯಾವ ಕ್ರೀಮನ್ನು ಬಳಸಬೇಕು? ದಯವಿಟ್ಟು ನನ್ನ ಪ್ರಶ್ನೆಗೆ ಉತ್ತರಿಸಿ. ಉತ್ತರಕ್ಕಾಗಿ ಕಾತರದಿಂದ ಕಾಯುತ್ತಿದ್ದೇನೆ.
ಉತ್ತರ: ತುಟಿಯ ಮೇಲ್ಭಾಗದಲ್ಲಿ ಸಣ್ಣಗೆ ರೋಮಗಳು ಬೆಳವಣಿಗೆ ಆಗುವುದು ಕೆಲವರಲ್ಲಿ ಸ್ವಾಭಾವಿಕ. ಅನುವಂಶೀಯವಾಗಿಯೂ ಕಂಡು ಬರುತ್ತದೆ. ಅಲ್ಲದೆ ರಸದೂತಗಳ ವ್ಯತ್ಯಾಸದಿಂದಲೂ ಕಂಡು ಬರುತ್ತದೆ. ಅದರ ಬಗ್ಗೆ ಚಿಂತೆ ಬೇಡ. ಯಾವುದೇ ರೋಮನಿವಾರಕ ಕ್ರೀಮ್‌ಗಳನ್ನ ಹಚ್ಚುವುದರಿಂದ ರೋಮಗಳು ಉದುರುತ್ತವೆಯಾದರೂ ಮತ್ತೆ ಬಹುಬೇಗ ಬೆಳೆಯುತ್ತವೆ. ನಂತರ ಬರುವ ರೋಮಗಳು ತುಂಬಾ ಗಾಢವಾಗಿ ಬರಲು ಆರಂಭಿಸುತ್ತವೆ. ಆದ್ದರಿಂದ ತಾತ್ಕಾಲಿಕವಾಗಿ ವ್ಯಾಕ್ಸಿಂಗ್ ಮಾಡಿಕೊಳ್ಳಬಹುದು. ಇಲ್ಲದಿದ್ದಲ್ಲಿ ಬನ್ನಿಮರದ ಕಾಯಿಯನ್ನು ತೇಯ್ದು ಹಚ್ಚುವುದರಿಂದ ರೋಮಗಳ ಬೆಳವಣಿಗೆ ಕುಂಠಿತವಾಗುತ್ತದೆ. ಪ್ರತಿದಿನ ಸ್ನಾನದ ಸಮಯದಲ್ಲಿ ಕಸ್ತೂರಿ ಅರಿಶಿಣವನ್ನು ರೋಮಗಳಿಗೆ ಹಚ್ಚಿ ಮೃದುವಾಗಿ ಮಸಾಜ್ ಮಾಡಿ ಅರ್ಧ ಗಂಟೆ ಬಿಟ್ಟು ತೊಳೆದುಕೊಳ್ಳಬೇಕು. ಶಾಶ್ವತ ಪರಿಹಾರವೆಂದರೆ ಲೇಸರ್ ಚಿಕಿತ್ಸೆ. ಚರ್ಮರೋಗ ತಜ್ಞರ ಸಲಹೆ ಪಡೆದು ಲೇಸರ್ ಚಿಕಿತ್ಸೆಯನ್ನು ಪಡೆಯಬೇಕು. ಇದು ದುಬಾರಿಯೂ ಆಗಿರುತ್ತದೆ.