ಲಕ್ಷ್ಮೀವೆಂಕಟೇಶ್ವರ ಸ್ವಾಮಿ ತಲೆ ನೋವು ನಿವಾರಣೆಗೆ ಬಟ್ಟೆ ಕಟ್ಟಿದ ಭಕ್ತರು!

Advertisement

ಹರಪನಹಳ್ಳಿ: ಸಮೀಪದ ದೇವರ ತಿಮ್ಮಲಾಪುರದ ಲಕ್ಷ್ಮೀವೆಂಕಟೇಶ್ವರ ರಥೋತ್ಸವ ಮಾರ್ಗಶಿರ ಮಾಸ ಶುಕ್ಲಪಕ್ಷ ಹಣ್ಣಿಮೆಯ ಮಂಗಳವಾರ ಸಹಸ್ರಾರು ಭಕ್ತ ಸಮೂಹದೊಂದಿಗೆ ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಐದಾರು ದಿನ ನಡೆಯುವ ಜಾತ್ರೆಯಲ್ಲಿ ಅಸಂಖ್ಯಾತ ಭಕ್ತರು ಜಾಗಟೆ, ಘಂಟೆಗಳ ನಾದ ಜೊತೆಗೆ ಗೋವಿಂದಾ ಗೋವಿಂದ ಎನ್ನುವ ಜಯಘೋಷಣೆಗಳು, ಅರ್ಚಕರ ಮಂಗಳಾರತಿಗಳಿಂದ ವೆಂಕಟೇಶ್ವರಸ್ವಾಮಿಗೆ ತಲೆನೋವು ಬರುತ್ತದೆ ಎಂದು ಇಲ್ಲಿಯ ಭಕ್ತರ ನಂಬಿಕೆಯಿದೆ.
ಆದ್ದರಿಂದ ರಥೋತ್ಸವ ಜರುಗಿದ ಮೂರನೇ ದಿನಕ್ಕೆ ವೆಂಕಟೇಶ್ವರನಿಗೆ ಬಂದ ಸಂಕಟವನ್ನು ಪರಿಹರಿಸಲು ದೇವರಿಗೆ ಮಜ್ಜನ ಮಾಡುತ್ತಾರೆ. ಶುಭ್ರವಾದ ಶ್ವೇತವರ್ಣದ ಬಟ್ಟೆಗಳನ್ನು ಮಾತ್ರ ಹಾಕುತ್ತಾರೆ. ಸೊಂಟಿಯ ರಸದಲ್ಲಿ ಅದ್ದಿದ ಶಾಲನ್ನು ಸ್ವಾಮಿಯ ತಲೆಗೆ ಬಿಗಿಯಾಗಿ ಕಟ್ಟುತ್ತಾರೆ. ಅಂದು ಯಾರೂ ಘಂಟೆ ಬಾರಿಸುವಂತಿಲ್ಲ. ಕಾಯಿ ಒಡೆಯುವಂತಿಲ್ಲ. ಕೇವಲ ಮಂತ್ರ ಗುನಗುನಿಸುತ್ತಾರೆ. ಭಕ್ತರು ನಿಶ್ಯಬ್ದವಾಗಿರುತ್ತಾರೆ. ಇದರಿಂದ ವೆಂಕಟೇಶ್ವರನ ತಲೆನೋವು ಮಾಯವಾಗುತ್ತದೆ ಎಂದು ಪ್ರತೀತಿ ಇದ್ದು ಚಾಚೂ ತಪ್ಪದೇ ಎಲ್ಲಾ ಭಕ್ತರು ಹಾಗೂ ಅರ್ಚಕರು ನಡೆಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ.