ರಾಷ್ಟ್ರಪತಿ, ಪ್ರಧಾನಮಂತ್ರಿ ಮಾಡ್ತೀನಿ ಅಂದ್ರೂ ನಾನು ಬಿಜೆಪಿಗೆ ಹೋಗಲ್ಲ

Advertisement

ಮೈಸೂರು: ನನ್ನನ್ನು ರಾಷ್ಟ್ರಪತಿ, ಪ್ರಧಾನಮಂತ್ರಿ ಮಾಡ್ತೀನಿ ಅಂದ್ರೂ ನಾನು ಬಿಜೆಪಿ ಕಡೆ ತಲೆ ಹಾಕಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟವಾಗಿ ನುಡಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ‌ ನಡೆದ ಪರಿಶಿಷ್ಟ ಜಾತಿ, ವರ್ಗಗಳ ಕಾರ್ಯಕರ್ತರು ಮತ್ತು ಮುಖಂಡರ ಸಭೆಯಲ್ಲಿ ಲೋಕಸಭಾ ಅಭ್ಯರ್ಥಿ ಎಂ.ಲಕ್ಷ್ಮಣ್ ಪರ ಮತಯಾಚಿಸಿ ಮಾತನಾಡಿದರು.
ನಮಗೆ ಸೈದ್ಧಾಂತಿಕ ಸ್ಪಷ್ಟತೆ ಇದ್ದಾಗ ಮಾತ್ರ ರಾಜಕೀಯ ಶಕ್ತಿ ಬರುತ್ತದೆ. BJP-RSS ಕಡೆ ತಲೆ ಹಾಕಬೇಡಿ. ಶೂದ್ರರಿಗೆ-ದಲಿತರಿಗೆ-ಮಹಿಳೆಯರಿಗೆ RSS ಗರ್ಭಗುಡಿಯೊಳಗೆ ಪ್ರವೇಶವನ್ನೇ ಕೊಡಲ್ಲ. ಮೋದಿ ಪ್ರಧಾನಿಯಾದರೆ ದೇಶ ತೊರೆಯುತ್ತೇನೆ ಎಂದಿದ್ದ ದೇವೇಗೌಡರು‌ ಈಗ ಮೋದಿಗೂ‌ ತಮಗೂ‌ ಅವಿನಾಭಾವ ಸಂಬಂಧ ಇದೆ ಎನ್ನುತ್ತಿದ್ದಾರೆ. ರಾಜಕಾರಣಿಯಾದವರಿಗೆ ಸೈದ್ಧಾಂತಿಕ ಸ್ಪಷ್ಟತೆ ಇರಬೇಕು ಎಂದರು.
BJP ಮತ್ತು RSS ಸಾಮಾಜಿಕ ನ್ಯಾಯದ ವಿರೋಧಿ. ಹೀಗಾಗಿ ಮೀಸಲಾತಿಯನ್ನು ಇಷ್ಟ ಪಡುವುದಿಲ್ಲ. ಮೀಸಲಾತಿ ಎನ್ನುವುದು ಭಿಕ್ಷೆಯಲ್ಲ. ಅದು ಶೋಷಿತ ಜನ ಸಮುದಾಯಗಳ ಹಕ್ಕು. ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತದೋ ಅಲ್ಲಿಯವರೆಗೂ ಮೀಸಲಾತಿ ಇದ್ದೇ ಇರಬೇಕು ಎಂದರು
ಸ್ವಾತಂತ್ರ್ಯ ಪೂರ್ವದಲ್ಲಿ , ಬ್ರಿಟೀಷರಿಗೂ ಮೊದಲು ಓದುವ ಹಕ್ಕು ನಮಗೆ ಅಂದರೆ ಶೂದ್ರರಿಗೆ ಇತ್ತಾ? ಮಹಿಳೆಯರಿಗೆ ಇತ್ತಾ? ಪತಿ ಮೃತಪಟ್ಟ ತಕ್ಷಣ ಪತ್ನಿ ಕೂಡ ಬೆಂಕಿಗೆ ಆಹುತಿ ಆಗಬೇಕಿತ್ತು. ಇಂಥಾ ಮನುಸ್ಮೃತಿ ಪ್ರೇರಿತ ಅಮಾನವೀಯ ಪದ್ಧತಿ ರದ್ದಾಗಿದ್ದು ನಮ್ಮ ಸಂವಿಧಾನದಿಂದ. ಹೀಗಾಗಿ ಈ ಸಂವಿಧಾನ ಬದಲಾಯಿಸಿ ಮತ್ತೆ ಮನುಸ್ಮೃತಿ ತರಬೇಕು ಎನ್ನುವುದು ಅವರ ಹುನ್ನಾರ. ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ ಎಂದು ಕರೆ ನೀಡಿದರು.
ಶೂದ್ರರಿಗೆ, ದಲಿತರಿಗೆ ಮತ್ತು ಮಹಿಳೆಯರಿಗೆ ಗರ್ಭಗುಡಿಯೊಳಗೆ ಬಿಟ್ಟುಕೊಳ್ಳಲ್ಲ. ನಂಜೇಗೌಡರು ಅಂತ ಹಿರಿಯ ಬಿಜೆಪಿ ನಾಯಕರು ಮತ್ತು ಈಗಿನ ಬಿಜೆಪಿ ನಾಯಕ ಗೂಳಿಹಟ್ಟಿ ಶೇಖರ್ ಅವರು ಕೂಡ ತಮ್ಮನ್ನು RSS ಗರ್ಭಗುಡಿಯೊಳಗೆ ಬಿಟ್ಟುಕೊಳ್ಳಲ್ಲ ಅಂತ ಬಹಿರಂಗವಾಗಿ ಹೇಳಿದ್ದಾರೆ. ಇದು ಸತ್ಯ. ಹೀಗಾಗಿ ಶೂದ್ರರನ್ನು ಕೇವಲ ಬಳಸಿಕೊಳ್ತಾರೆ ಅಷ್ಟೆ. ಆದ್ದರಿಂದ RSS ಕಡೆ ಶೂದ್ರರು, ದಲಿತರು, ಮಹಿಳೆಯರು ತಲೆ ಕೂಡ ಹಾಕಬಾರದು ಎಂದರು.
ಇಂಥಾ RSS ಜತೆ JDS ಸೇರಿಕೊಂಡಿದೆಯಲ್ಲಾ, ಇದನ್ನು ಟೀಕಿಸಬಾರದಾ? ದಲಿತರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ ನಲ್ಲಿ ಹಣ ಮೀಸಲಿಡುವ ಕಾನೂನನ್ನು ಜಾರಿಗೆ ತಂದಿದ್ದು ಕಾಂಗ್ರೆಸ್. ಅಭಿವೃದ್ಧಿ ಹಣದಲ್ಲಿ ಶೇ24.1% ಹಣ ಮೀಸಲಿಡಬೇಕು ಎನ್ನುವ ಕಾನೂನನ್ನು ಜಾರಿ ಮಾಡಿದ್ದು ನಮ್ಮ ಸರ್ಕಾರ. ಈ ಪ್ರಗತಿಪರ ಕಾನೂನನ್ನು ಇಡಿ ದೇಶದಲ್ಲಿ ಬಿಜೆಪಿಯ ಯಾವ ಸರ್ಕಾರವೂ ಜಾರಿ ಮಾಡಿಲ್ಲ. ಮಾಡಿರುವುದು ನಮ್ಮ ಕಾಂಗ್ರೆಸ್ ಸರ್ಕಾರ ಮಾತ್ರ. ಇದನ್ನೆಲ್ಲಾ ಜನ ಸಮುದಾಯ ತಿಳಿದುಕೊಳ್ಳಬೇಕು ಎಂದರು.
ಗುತ್ತಿಗೆಯಲ್ಲಿ ದಲಿತರಿಗೆ ಮೀಸಲಾತಿ ತಂದಿದ್ದು ನಮ್ಮ ಕಾಂಗ್ರೆಸ್ ಸರ್ಕಾರ. ಮಂಡಲ್ ವರದಿಯನ್ನು ವಿರೋಧಿಸಿದ್ದು, ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ವಿರೋಧಿಸಿದ್ದು ಇದೇ ಬಿಜೆಪಿ ತಾನೇ? SCP/ TSP ಕಾಯ್ದೆಯನ್ನು ಜಾರಿ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಹೀಗಾಗಿ ನಿಮ್ಮನ್ನು ಭಾವನಾತ್ಮಕವಾಗಿ ಕೆರಳಿಸಿ, ನಿಮ್ಮ ಬದುಕಿಗೆ ಕೊಳ್ಞಿ ಇಡುವವರ ಜತೆ ಸೇರದೆ, ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರನ್ನು ಗೆಲ್ಲಿಸಿ ಎಂದು ಕರೆ ನೀಡಿದರು.
ಸಮಾಜಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ತನ್ವೀರ್ ಸೇಠ್ ಮತ್ತು ಲೋಕಸಭಾ ಅಭ್ಯರ್ಥಿ ಲಕ್ಷ್ಮಣ್ ಸೇರಿ ಹಲವು ನಾಯಕರು, ಕೆಪಿಸಿಸಿಯ ಎಸ್.ಸಿ/ಎಸ್.ಟಿ ವಿಭಾಗದ ಮುಖಂಡರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.