ರಾಯಚೂರು ಜಿಲ್ಲೆಯಲ್ಲಿ ೪೪ ಡಿಗ್ರಿ ದಾಟಿದ ಉಷ್ಣಾಂಶ

Advertisement

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ತಾಪಮಾನ ೩೭ ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಬಿಸಿಲ ನಾಡು ಎಂದೇ ಕರೆಯಲಾಗುವ ರಾಯಚೂರು ಜಿಲ್ಲೆಯ ಹಡಗನಾಳ್ ಎಂಬಲ್ಲಿ ಅತ್ಯಧಿಕ ೪೪.೩ ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಕಲಬುರಗಿಯಲ್ಲಿ ವ್ಯಕ್ತಿಯೋರ್ವರು ಬಿಸಿಲಿನ ತಾಪದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ದಣ್ಣೂರ ಗ್ರಾಮದಲ್ಲಿ ೪೨ ವರ್ಷ ಶರಣಪ್ಪ ಸಮಗಾರ ಎಂಬುವರು ಬಿಸಿಲಿನ ಝಳದಿಂದ ಕುಸಿದು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಪಾರ್ಥಿವ ಶರೀರವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಬೆಂಗಳೂರಿನಲ್ಲಿ ಇದು ಕಳೆದ ೧೫ ವರ್ಷಗಳಲ್ಲೇ ದಾಖಲೆಯ ತಾಪಮಾನ ಏರಿಕೆಯಾಗಿದೆ. ಮಾ. ೨೨, ೧೯೩೧ ರಂದು ಬೆಂಗಳೂರಿನ ಸಾರ್ವಕಾಲಿಕ ದಾಖಲೆ ೩೮.೯ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ೧೯೯೬ರಲ್ಲಿ ೩೭.೩ ಗರಿಷ್ಠ ತಾಪಮಾನ ದಾಖಲಾಗಿತ್ತು. ಇನ್ನು ೧೯೯೬ರಲ್ಲಿ ರಾಜ್ಯದ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ೪೪.೬ ಡಿಗ್ರಿ ಸೆಲ್ಷಿಯಸ್ ದಾಖಲಾಗಿತ್ತು. ಈಗ ಅದರ ಸಮೀಪವೇ ಉಷ್ಣಾಂಶ ದಾಖಲಾಗುತ್ತಿದ್ದು, ಮೇ ತಿಂಗಳಲ್ಲಿ ದಾಖಲೆ ಮುರಿಯುವ ಸಾಧ್ಯತೆ ಇದೆ.
ರಾಯಚೂರು ಜಿಲ್ಲೆಯಲ್ಲಿ ೧೮ ಸ್ಥಳಗಳು, ಕಲಬುರಗಿ ಜಿಲ್ಲೆಯಲ್ಲಿ ೧೬ ಸ್ಥಳಗಳು, ಬಳ್ಳಾರಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ತಲಾ ೫ ಸ್ಥಳಗಳು, ವಿಜಯಪುರ ಜಿಲ್ಲೆಯಲ್ಲಿ ೩ ಸ್ಥಳಗಳು, ಬೀದರ್ ಜಿಲ್ಲೆಯಲ್ಲಿ ೨ ಸ್ಥಳಗಳು, ಕೊಪ್ಪಳ ಮತ್ತು ಬಾಗಲಕೋಟೆಯಲ್ಲಿ ತಲಾ ೧ ಸ್ಥಳಗಳಲ್ಲಿ ತಾಪಮಾನ ೪೨ ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ದಾಖಲಾಗಿದೆ. ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ, ಬಾಗಲಕೋಟೆ ಮತ್ತು ಕೊಪ್ಪಳದಲ್ಲಿ ಬಿಸಿಗಾಳಿ ಎಚ್ಚರಿಕೆ ಘೋಷಿಸಲಾಗಿದೆ.
ಮುಂದಿನ ದಿನದಲ್ಲಿ ಕರ್ನಾಟಕದ ಒಳನಾಡಿನಾದ್ಯಂತ ೨ರಿಂದ ೩ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಏರಿಕೆಯಾಗಲಿದೆ ಮತ್ತು ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಉಷ್ಣ ಹವೆ ಎಚ್ಚರಿಕೆ ಸಹ ನೀಡಲಾಗಿದೆ ಎಂದು ಹವಾಮಾನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹುಬ್ಬಳ್ಳಿ ಭಾಗದಲ್ಲೂ ತಾಪಮಾನ ವಿಪರೀತವಾಗಿದ್ದು, ಸೆಖೆಯ ಹೊಡೆತಕ್ಕೆ ನಲುಗಿ ಹೋಗಿದ್ದಾರೆ. ೩೯ ಡಿಗ್ರಿ ದಾಟಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚುವಂತೆ ಕಾಣುತ್ತಿದೆ.

ಸನ್ ಸ್ಟ್ರೋಕ್‌ಗೆ ಒಳಗಾದರೆ
ಸನ್ ಸ್ಟ್ರೋಕ್‌ಗೆ ಒಳಗಾದ ವ್ಯಕ್ತಿಯನ್ನು ನೆರಳಿನ ಪ್ರದೇಶಕ್ಕೆ ಅಥವಾ ಒಳಾಂಗಣಕ್ಕೆ ಕರೆದುಕೊಂಡು ಹೋಗಿ. ನಂತರ ತುರ್ತು ವೈದ್ಯಕೀಯ ಸಹಾಯಕ್ಕಾಗಿ ಕರೆ ಮಾಡಿ. ವ್ಯಕ್ತಿಯನ್ನು ಮೇಲ್ಮುಖವಾಗಿ ಮಲಗಿಸಿ. ಪ್ರಜ್ಞೆ ಇದ್ದಲ್ಲಿ ಅವರಿಗೆ ತಂಪಾದ ನೀರನ್ನು ಕುಡಿಸಿ. ತಂಪಾದ ನೀರನ್ನು ಸಿಂಪಡಿಸಿ ಮಣಿಕಟ್ಟುಗಳು, ಕೈ-ಕಾಲುಗಳಿಗೆ ಒದ್ದೆಯಾದ ಬಟ್ಟೆಯಿಂದ ಒರೆಸಬೇಕು. ಗಾಳಿ ಆಡುವಂತೆ ನೋಡಿಕೊಳ್ಳಬೇಕು.

ಹೆಚ್ಚು ನೀರು ಸೇವನೆಯೇ ಪರಿಹಾರ
ಈಗಿನ ಉಷ್ಣ ಹವೆ ಸಂದರ್ಭದಲ್ಲಿ ಪ್ರತಿಯೊಬ್ಬರು ಆಗಾಗ ನೀರು ಸೇವನೆ ಮಾಡುತ್ತಿರಬೇಕು. ತೆಳುವಾದ ಹಾಗೂ ಪ್ರಮುಖವಾಗಿ ಬಿಳಿ ವಸ್ತ್ರ ಧರಿಸಬೇಕು.