ರಾಜಕೀಯ ಜೀವನದಲ್ಲಿ ಕಾನೂನಿನ ಅರಿವು ಮುಖ್ಯ

CM Bommai
Advertisement

ಹಾವೇರಿ(ಹಿರೇಕೆರೂರು): ರಾಜಕೀಯ ಜೀವನದಲ್ಲಿ ಕಾನೂನಿನ ಅರಿವು ಅತ್ಯಂತ ಮುಖ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅವರು ಇಂದು ಹಿರೆಕೆರೂರಿನ ವಕೀಲರ ಸಂಘದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ನಾನು ವಕೀಲರ ಮಗನಾಗಿದ್ದು ನಮ್ಮ ತಂದೆ ವಕೀಲಿ ವೃತ್ತಿಯನ್ನು ಮಾಡುತ್ತಿದ್ದರು. ನಾನು ವಕೀಲನಾಗಬೇಕಿತ್ತು. ಎಂಜನೀಯರ್ ಆದೆ, ನಾನು ಕಾನೂನು ಸಚಿವನಾಗಿ ಕಾನೂನಿನಲ್ಲಿ ಸ್ಪಷ್ಟತೆ ಇರಬೇಕು ಎಂದು ಹೇಳುತ್ತಿದ್ದೆ. ನಾನು ಕಾನೂನು ಸಚಿವನಾಗಿದ್ದರಿಂದ ಸೋಲಿ ಸೊರಾಬ್ಜಿ, ಫಾಲಿ ನಾರಿಮನ್, ಮುಕುಲ್ ರೊಹಟಗಿ, ರಾಮ್ ಜೇಠ್ಮಲಾನಿ ಅವರ ಸಂಪರ್ಕ ಪಡೆಯಲು ಅನುಕೂಲವಾಯಿತು. ದೇಶದ ಇತಿಹಾಸದಲ್ಲಿ ಶಾಸನ ಸಭೆಯ ಅಧಿಕಾರದ ಕುರಿತು ನಮ್ಮ ತಂದೆಯ ಕಾಲದಲ್ಲಿ ಐತಿಹಾಸಿಕ ತೀರ್ಪು ಬಂದಿದೆ. ನಾವು ಯಾವಾಗಲೂ ಕಾನೂನು ಪಾಲಿಸಿಕೊಂಡು ಬಂದಿದ್ದೇವೆ ಎಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ವಕೀಲರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಹಾತ್ಮಾ ಗಾಂಧೀಜಿ, ಅಂಬೇಡ್ಕರ್ ಸೇರಿದಂತೆ ಅನೇಕ ವಕೀಲರು ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದರು. ಸ್ವಾತಂತ್ರ್ಯ ಭಾರತದ ಆರಂಭದಲ್ಲಿ ಶೇ. 60ರಷ್ಟು ವಕೀಲರು ಸಂಸತ್ತಿಗೆ ಆಯ್ಕೆಯಾಗುತ್ತಿದ್ದರು. ಕ್ರಮೇಣ ಶಾಸನ ಸಭೆಗಳಲ್ಲಿ ವಕೀಲರ ಸಂಖ್ಯೆ ಕಡಿಮೆಯಾಗುತ್ತ ಬಂದಿದೆ ಎಂದು ಹೇಳಿದರು.
ಹಳೆ ಧಾರವಾಡ ಜಿಲ್ಲೆಯಲ್ಲಿ ಹಿರೇಕೆರೂರು ವಕೀಲರ ಸಂಘ ಅತ್ಯಂತ ಸಕ್ರೀಯ ಸಂಘವಾಗಿದೆ. ಹಿರೇಕೆರೂರಿನ ರಾಜಕಾರಣ ಬಹಳ ವರ್ಷಗಳ ಕಾಲ ವಕೀಲರ ಕೈಯಲ್ಲಿ ನಡೆದಿದೆ. ಎಲ್ಲ ಕಡೆ ಬದಲಾದಂತೆ ಇಲ್ಲಿಯೂ ಬದಲಾಗಿದೆ ಎಂದು ಹೇಳಿದರು.