ಮೋದಿ ಸುಳ್ಳುಗಳಲ್ಲೇ ಹತ್ತು ವರ್ಷ ಕಳೆದರು

Advertisement

ಆನೇಕಲ್(ಹೆಬ್ಬಗೋಡಿ): ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯವನ್ನು ಪ್ರಶ್ನಿಸಿದ ಏಕೈಕ ಸಂಸದ ಡಿ.ಕೆ.ಸುರೇಶ್. ಉಳಿದ ಯಾವ ಸಂಸದರೂ ನೆಪಕ್ಕೂ ಪ್ರಶ್ನಿಸಲಿಲ್ಲ. ಹೀಗಾಗಿ ಇವರಿಗೆ ಆಶೀರ್ವದಿಸಿ ಲೋಕಸಭೆಗೆ ಕಳುಹಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಹೆಬ್ಬಗೋಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರ ಪರವಾಗಿ ಜನಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಡಿ.ಕೆ.ಸುರೇಶ್ ಅವರು ಜನಸಾಮಾನ್ಯರ ಜತೆ ಬೆರೆತು ಹಳ್ಳಿ ಹಳ್ಳಿಗೂ ಚಿರಪರಿಚಿತರು. ದೇವೇಗೌಡರ ಅಳಿಯ ಮಂಜುನಾಥ್ ರನ್ನು ಬಿಜೆಪಿಯಿಂದ ಇಲ್ಲಿ ಕಣಕ್ಕೆ ಇಳಿಸಿದ್ದಾರೆ. ಮಗನನ್ನು ಮಂಡ್ಯದಿಂದ, ಮೊಮ್ಮಗನನ್ನು ಹಾಸನದಿಂದ ನಿಲ್ಲಿಸಿದ್ದಾರೆ. ಕೋಲಾರ ದಲಿತ ಮೀಸಲು ಕ್ಷೇತ್ರ ಆಗದೇ ಇದ್ದಿದ್ದರೆ ಅಲ್ಲಿಂದಲೂ ಇವರ ಕುಟುಂಬದವರನ್ನೇ ಕಣಕ್ಕೆ ಇಳಿಸುತ್ತಿದ್ದರು ಎಂದು ವ್ಯಂಗ್ಯವಾಡಿದರು.
ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಎಂದು ಮೋದಿ ಹೇಳಿದರು. 10 ವರ್ಷಕ್ಕೆ 20 ಕೋಟಿ ಉದ್ಯೋಗ ಸೃಷ್ಟಿಸಬೇಕಿತ್ತು.‌ ಈ ಮಾತು ನಂಬಿದ್ದ ವಿದ್ಯಾವಂತ ಯುವ ಸಮೂಹ ಕೆಲಸ ಕೇಳಿದರೆ “ಹೋಗಿ ಪಕೋಡ ಮಾರಾಟ ಮಾಡಿ” ಎಂದರು. ಇದನ್ನು ಹೇಳೋಕೆ ನೀವು ಹತ್ತತ್ತು ವರ್ಷ ಪ್ರಧಾನಿ ಆದ್ರಾ ಮೋದಿಯವರೇ ಎಂದು ಸಿ.ಎಂ ಪ್ರಶ್ನಿಸಿದರು.
ವಿದೇಶದಿಂದ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕ್ತೀವಿ ಅಂದ್ರು. 15 ಪೈಸೆ ಕೂಡ ಹಾಕಲಿಲ್ಲ. ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಅಂದ್ರು. ಆದರೆ ರೈತರ ಖರ್ಚು ಮೂರು ಪಟ್ಟು ಹೆಚ್ಚಾಯಿತು. ಕೈಗೆಟುಕುವ ಬೆಲೆಯಲ್ಲಿ ಪೆಟ್ರೋಲ್, ಡೀಸೆಲ್, ಗ್ಯಾಸ್ ಕೊಡುತ್ತೇವೆ ಎಂದರು. ಆದರೆ ಇವೆಲ್ಲದರ ಬೆಲೆಯನ್ನು ಗಗನಕ್ಕೆ ಏರಿಸಿದರು. ಹೀಗೆ ಮೋದಿಯವರು ಸುಳ್ಳುಗಳಲ್ಲೇ ಹತ್ತು ವರ್ಷ ಕಳೆದರು ಎಂದು ಟೀಕಿಸಿದರು. ಸುಳ್ಳು ಹೇಳುವುದರಲ್ಲಿ ಹಾಲಿ ಪ್ರಧಾನಿ ನರೇಂದ್ರ ಮೋದಿಯವರ ಜೊತೆ, ಮಾಜಿ ಪ್ರಧಾನಿ ದೇವೇಗೌಡರು ಪೈಪೋಟಿಗೆ ಬಿದ್ದಿದ್ದಾರೆ ಎಂದು ಟೀಕಿಸಿದರು.
ಮೋದಿಯವರು ರಾಜ್ಯದ ಜನತೆಯ ಕೈಗೆ ನೀಡಿರುವ ಖಾಲಿಚೊಂಬು ದೇವೇಗೌಡರ ಕಣ್ಣಿಗೆ ಅಕ್ಷಯಪಾತ್ರೆಯಂತೆ ಕಾಣಿಸುತ್ತಿದೆಯಂತೆ. ಮೋದಿ ಪ್ರಧಾನಿಯಾದ ಹತ್ತು ವರ್ಷದಲ್ಲಿ 124 ಲಕ್ಷ ಕೋಟಿ ದೇಶದ ಸಾಲ ಹೆಚ್ಚಿಸಿದ್ದಾರೆ. ಇದನ್ನು ದೇವೇಗೌಡರು ಏಕೆ ಪ್ರಶ್ನಿಸುತ್ತಿಲ್ಲ:
ದೇಶದ ಭವಿಷ್ಯ ರೂಪಿಸಲು, ಭಾರತೀಯರ ಮುಂದಿನ ಪೀಳಿಗೆಯ ಭವಿಷ್ಯ ರೂಪಿಸುವ ಈ ಚುನಾವಣೆ ಅತ್ಯಂತ ಮಹತ್ವದ್ದು. ಹೀಗಾಗಿ ಪ್ರಜ್ಞಾಪೂರ್ವಕವಾಗಿ ಮತ ಚಲಾಯಿಸಿ, ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ, ಪಾರ್ಲಿಮೆಂಟಿಗೆ ಕಳುಹಿಸಿ ಎಂದು ಕರೆ ನೀಡಿದರು.