ಮೇ ೨೭ ರಿಂದ ಹುಬ್ಬಳ್ಳಿಯಲ್ಲಿ ‘ಹಲಸು ಹಬ್ಬ’

Advertisement

ಹುಬ್ಬಳ್ಳಿ: ಈಗ ಹಲಸು ಘಮ್ಮೆನ್ನುತ್ತಿರುವ ಕಾಲ! ದಾರಿಯಲ್ಲಿ ಹೋಗುವಾಗ, ಪಕ್ಕದ ಮನೆಯಲ್ಲಿ ಹಲಸು ಬಿಡಿಸಿದಾಗ, ಆ ಹಣ್ಣಿನ ಘಮಲು ಮೂಗಿಗೆ ತಾಗಿ, ಕೂಗಿ ಕರೆಯುವ ಹಲಸು ಈ ನೆಲದ ಎಲ್ಲರ ಹಣ್ಣು. ನಿಜವಾದ ಸಾವಯವ ಹಣ್ಣು! ಈ ಹಿಂದೆ, ಮನೆ ಮಂದಿಯೆಲ್ಲಾ ಒಟ್ಟಿಗೆ ಕುಳಿತು ಹಲಸು ಬಿಡಿಸಿ ತಿನ್ನುವಾಗ ಇದ್ದ ಸಂಭ್ರಮ ಇತ್ತೀಚಿಗೆ ಕಡಿಮೆಯಾಗಿದೆ.
ನಗರದ ಮೂರುಸಾವಿರ ಮಠದ ಮೂಜಗಂ ಸಭಾಭವನದಲ್ಲಿ ಮೇ ೨೭ ಮತ್ತು ೨೮ರಂದು ನಡೆಯಲಿರುವ ‘ಹಲಸಿನ ಹಬ್ಬ’ವು, ಹಲಸು ಸವಿಯುವ ಮತ್ತು ಹಲಸಿನ ಬಗ್ಗೆ ಅರಿಯುವ ಅವಕಾಶ ಒದಗಿಸಲಿದೆ. ಬಾಯಿಗಿಟ್ಟರೆ ಜೇನು ಸವಿದಂತೆನಿಸುವ ಹಲಸಿನದು ವಿಸ್ಮಯ ಲೋಕ! ಹಣ್ಣು ಮತ್ತು ಬೀಜದಲ್ಲಿರುವ ಅಪಾರವಾದ ಪೈಟೋ ಕೆಮಿಕಲ್ಸ್, ಪೋಷಕ ನಾರು, ಪ್ರೋಟೀನ್, ವಿಟಮಿನ್, ಖನಿಜಗಳು ಸೇರಿದಂತೆ ಅನೇಕ ಪೋಷಕಾಂಶಗಳು ನಮ್ಮ ಆರೋಗ್ಯಕ್ಕೆ ಸಂಜೀವಿನಿಯೇ ಸೈ. ದೇಹದ ಆರೋಗ್ಯಕ್ಕೆ ಹಲಸು ಅನೇಕ ರೀತಿಯಲ್ಲಿ ಮಹತ್ವದ್ದಾಗಿದೆ.
ಬಯಲು ಸೀಮೆಯ ಜನರು ಹಲಸಿನ ಪದಾರ್ಥ, ಪಲ್ಯ ಹಣ್ಣಿನ ರಸಾಯನ ಮಾಡಲು ಸಿದ್ಧಹಸ್ತರಾದರೆ, ಮಲೆನಾಡಿಗರದ್ದು ಹಲಸಿನ ಖಾದ್ಯಗಳ ತಯಾರಿಕೆಯಲ್ಲಿ ಎತ್ತಿದ ಕೈ. ಕರ್ನಾಟಕದಾದ್ಯಂತ ಹಲಸಿನಿಂದ ತಯಾರಿಸುವ ಖಾದ್ಯಗಳಾದ ಹಲಸಿನ ಹಪ್ಪಳ, ಚಿಪ್ಸ್, ಸಿಹಿಕಡುಬು, ಪಾಯಸ, ಹಲಸಿನ ಹಲ್ವ, ಹಣ್ಣಿನ ದೋಸೆ, ಹಲಸಿನ ಹೋಳಿಗೆ, ಪಲಾವ್, ಹಲಸಿನ ಬೀಜಗಳ ವಡೆ, ಬಿರಿಯಾನಿ… ಹಲಸಿನ ಬೋಂಡ, ಹಲಸಿನ ಕೇಕ್, ಹಲಸಿನ ಪಕೋಡ, ಹಲಸಿನ ಐಸ್ ಕ್ರೀಂ ಇಂತಹ ಕಂಡು ಕೇಳರಿಯದ ಎಷ್ಟೋ ವಿಶೇಷ ಹಲಸಿನ ಖಾದ್ಯಗಳು ‘ಹಲಸಿನ ಹಬ್ಬ’ದಲ್ಲಿ ಸಿಗಲಿವೆ.
ಹಲಸು ಮೇಳವನ್ನು ಕೇಂದ್ರವಾಗಿಟ್ಟುಕೊAಡು, ಹುಬ್ಬಳ್ಳಿಯ ಜಗದ್ಗುರು ಮೂರು ಸಾವಿರ ಮಠದ ಮೂಜಗಂ ಸಭಾಭವನದಲ್ಲಿ ಮೇ ೨೭ ಮತ್ತು ೨೮ರಂದು ‘ಸಾವಯವ ಮೇಳ ಮತ್ತು ಹಲಸಿನ ಹಬ್ಬ’ವನ್ನು ಸಹಜ ಸಮೃದ್ಧ ಸಂಸ್ಥೆಯು ಆಯೋಜಿಸಿದೆ. ಹಲಸಿನ ವಿಶೇಷ ತಳಿಗಳ ಮಾರಾಟ, ಮಹಿಳಾ ಸ್ವಸಹಾಯ ಸಂಘಗಳು ತಯಾರಿಸಿದ ಹಲಸಿನ ವಿವಿಧ ಖಾದ್ಯಗಳ ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನ, ಕೆಂಪು ಹಲಸು, ಸಿದ್ದು ಹಲಸಿನ ಗಿಡ ಮತ್ತು ಹಣ್ಣಿನ ಮಾರಾಟ ಇರುತ್ತದೆ. ಸಾವಯವ ಮೌಲ್ಯವರ್ಧಿತ ಉತ್ಪನ್ನಗಳು ಹಾಗೂ ಸಿರಿಧಾನ್ಯಗಳ ಮಾರಾಟ ಇರಲಿದೆ.
ವಿಶೇಷ ಕೆಂಪು ಹಲಸು:
ತುಮಕೂರಿನ ವಿಶಿಷ್ಟ ಕೆಂಪು ಹಲಸು ಈ ಮೇಳಕ್ಕೆ ಬರಲಿದೆ. ರಾಷ್ಟ್ರೀಯ ಮನ್ನಣೆ ಗಳಿಸಿರುವ ಗಾಢ ಕೆಂಪು ವರ್ಣದ ‘ಸಿದ್ದು ಹಲಸು’ ಗಿಡಗಳು ಆಸಕ್ತರಿಗೆ ಲಭ್ಯವಾಗಲಿವೆ. ಮೇಳದಲ್ಲಿ ಕೆಂಪು, ಹಳದಿ ಮತ್ತು ಬಿಳಿ ಹಲಸಿನ ತಳಿ ಹಣ್ಣುಗಳು ತಿನ್ನಲು ಸಿಗಲಿವೆ. ಹಲಸಿನ ಚಿಪ್ಸ್, ಚಾಕೊಲೇಟ್, ಹಪ್ಪಳ, ಹಲ್ವ, ಹಲಸಿನ ಬೀಜದ ಪುಡಿ, ಹಣ್ಣಿನ ಪುಡಿ ಮಾರಾಟಕ್ಕೆ ಬರಲಿವೆ. ಹಲಸಿನ ಬೀಜದ ಪೇಯ ‘ಜಾಫಿ’ ಗ್ರಾಹಕರ ಮನತಣಿಸಲಿದೆ. ಹಲಸಿನ ಸಾಗುವಳಿ ಮತ್ತು ಮೌಲ್ಯವರ್ಧನೆ ಕುರಿತ ಪುಸ್ತಕಗಳು ಸಹ ಲಭ್ಯವಾಗಲಿವೆ.
ಅಡುಗೆ, ಹಲಸು ತಿನ್ನುವ ಸ್ಪರ್ಧೆ:
ಹಲಸಿನ ಅಡುಗೆ ಸ್ಪರ್ಧೆ ಶನಿವಾರ ಮಧ್ಯಾಹ್ನ ೩.೩೦ಕ್ಕೆ ಏರ್ಪಡಾಗಿದೆ. ನಿಗದಿತ ಅವಧಿಯಲ್ಲಿ ಹಲಸಿನ ಹಣ್ಣು ತಿನ್ನುವ ಸ್ಪರ್ಧೆ ಭಾನುವಾರ ಮಧ್ಯಾಹ್ನ ೧೨.೩೦ಕ್ಕೆ ನಡೆಯಲಿದೆ. ಸಾವಯವ ಮೇಳ ಮತ್ತು ಹಲಸಿನ ಹಬ್ಬ ಕುರಿತ ಹೆಚ್ಚಿನ ಮಾಹಿತಿಗೆ ಸಂಯೋಜಕ ಶಾಂತಕುಮಾರ್ ಸಿ. ಅವರನ್ನು ೯೪೪೮೭೭೪೮೭೧ ಸಂಪರ್ಕಿಸಲು ಕೋರಲಾಗಿದೆ.