ಮಾಧ್ಯಮ ಸ್ವಾತಂತ್ರ್ಯ ಮತ್ತು ಸ್ವೇಚ್ಛಾಚಾರ

ಸಂಪಾದಕೀಯ
Advertisement

ಮಾಧ್ಯಮ ಕ್ಷೇತ್ರವೆಂಬುದು ವರ್ತಮಾನದ ನಿಲುವುಗನ್ನಡಿ; ತಂತ್ರಜ್ಞಾನದ ದುರ್ವಿನಿಯೋಗದಿಂದಲೋ ಇಲ್ಲವೇ ಪಟ್ಟಭದ್ರರ ಕೈವಾಡದಿಂದಲೋ ಏನೋ ಇಂತಹ ನಿಲುವುಗನ್ನಡಿಯಲ್ಲಿ ವಕ್ರಬಿಂಬಗಳು ಕಾಣುತ್ತಿರುವುದನ್ನು ಒಪ್ಪಿಕೊಂಡರೂ ಕೂಡಾ ಸಾರಾಸಗಟಾಗಿ ಮಾಧ್ಯಮ ಕ್ಷೇತ್ರದ ಸತ್ಯ ಸಂಗತಿಯನ್ನು ನಿರಾಕರಿಸುವುದು ಸಾಧುವಲ್ಲ. ಸತ್ಯ ಎಂಬುದು ಒಪ್ಪುವ ಮಾತು. ಪರಮ ಸತ್ಯ ಎನ್ನುವುದು ವ್ಯಕ್ತಿಗತ ಕೈಗನ್ನಡಿಯ ಮಾತು. ನೊಬೆಲ್ ಪ್ರಶಸ್ತಿ ಪುರಸ್ಕೃತ ನಾಟಕಕಾರ ಹೆರಾಲ್ಡ್ ಪಿಂಟರ್ ಪ್ರತಿಪಾದಿಸುವಂತೆ `ಪರಮಸತ್ಯ ಎಂಬುದು ಜಗತ್ತಿನಲ್ಲಿ ಎಲ್ಲಿಯೂ ಇಲ್ಲ. ನಾನು ಕಂಡ ಸತ್ಯ ಅವನು ಕಂಡ ಸತ್ಯ. ಇವನು ಕಂಡ ಸತ್ಯ ಇರಬಹುದು. ಇವೆಲ್ಲವೂ ಕೂಡಾ ಸತ್ಯದ ದೃಷ್ಟಿಗಳು. ಆದರೆ, ಇದೆಲ್ಲವನ್ನೂ ಕ್ರೋಡೀಕರಿಸಿ ಪರಮಸತ್ಯ ಎಂದು ನಿರ್ಣಯಿಸಲು ಬರುವುದಿಲ್ಲ’ ಎಂಬ ಮಾತುಗಳಲ್ಲಿ ಎದ್ದು ಕಾಣುವುದು ಚಲನಶೀಲ ಸಮಾಜದ ವಸ್ತುನಿಷ್ಠ ನಿಲುವು. ಇಂತಹ ವಸ್ತುನಿಷ್ಠ ನಿಲುವಿಗೆ ಮಾಧ್ಯಮ ಕ್ಷೇತ್ರದಲ್ಲಿ ಮನ್ನಣೆ ಕಡಿಮೆಯಾಗಲು ಅದರ ಸ್ವಾತಂತ್ರ್ಯ ಕಡಿಮೆಯಾಗುತ್ತಿರುವುದು ಕಾರಣ ಎಂಬುದು ತಜ್ಞರ ನಂಬಿಕೆ. ಭಾರತದ ಮಟ್ಟಿಗೆ ಹೇಳುವುದಾದರೆ ಪತ್ರಿಕಾ ಸ್ವಾತಂತ್ರ್ಯ ಜಗತ್ತಿನಲ್ಲಿ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಜಗತ್ತಿನಲ್ಲಿ ಪತ್ರಿಕಾ ಸ್ವಾತಂತ್ರ್ಯ ಕುಸಿಯುತ್ತಿರುವ ದಿಕ್ಸೂಚಿಗೆ ಭಾರತ ೧೫೯ನೆಯ ಸ್ಥಾನದಲ್ಲಿದೆ ಎಂಬುದು ಒಂದು ಆಧಾರ. ಪ್ಯಾರಿಸ್ ಮೂಲದ ರಿಪೋಟರ‍್ಸ್ ವಿತೌಟ್ ಬಾಡರ‍್ಸ್ ಎಂಬ ಸಂಸ್ಥೆ ೨೦೨೪ರ ಸಾಲಿಗೆ ಸಂಬಂಧಿಸಿದಂತೆ ಬಿಡುಗಡೆ ಮಾಡಿರುವ ಅಂತರರಾಷ್ಟ್ರೀಯ ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕದ ಸಮೀಕ್ಷೆಯಲ್ಲಿ ೧೮೦ ದೇಶಗಳ ಪೈಕಿ ಭಾರತ ೧೫೯ನೆಯ ಸ್ಥಾನದಲ್ಲಿದೆ ಎಂಬುದನ್ನು ಗುರುತಿಸಿದಾಗ ದೇಶದಲ್ಲಿ ಮಾಧ್ಯಮದ ಅಸಲಿ ಸ್ಥಿತಿಗತಿ ಏನು ಎಂಬುದು ಗೊತ್ತಾಗುತ್ತದೆ. ನೆರೆಯ ಪಾಕಿಸ್ತಾನ ೧೫೨ನೆಯ ಸ್ಥಾನದಲ್ಲಿದೆ. ಕಳೆದ ವರ್ಷ ಇದೇ ಸಮೀಕ್ಷೆಯಲ್ಲಿ ಭಾರತ ೧೬೧ನೆಯ ಸ್ಥಾನದಲ್ಲಿತ್ತು. ನಾರ್ವೆ ದೇಶದಲ್ಲಿ ಉತ್ತಮ ಪತ್ರಿಕಾ ಸ್ವಾತಂತ್ರ್ಯ ಇದೆ ಎಂಬುದಕ್ಕೆ ಆಧಾರವಾಗಿರುವುದು ಸಮೀಕ್ಷೆಯಲ್ಲಿ ಅದಕ್ಕೆ ಪ್ರಾಪ್ತವಾಗಿರುವ ಮೊದಲ ಸ್ಥಾನ. ಸಮೀಕ್ಷೆಗಳಲ್ಲಿ ಸತ್ಯಸಂಧತೆ ಸಂಪೂರ್ಣವಾಗಿದೆ ಎಂಬುದನ್ನು ಹೇಳಲಾಗದಿದ್ದರೂ ಸತ್ಯಾಂಶವೇ ಇಲ್ಲ ಎನ್ನಲಾಗುವುದಿಲ್ಲ. ಭಾರತದಲ್ಲಿ ಹಲವಾರು ಸಂದರ್ಭದಲ್ಲಿ ಸಾರ್ವಜನಿಕ ವಲಯದಿಂದ ವ್ಯಕ್ತವಾಗುವ ಅಭಿಪ್ರಾಯಗಳು ಹಾಗೂ ಟೀಕೆ ಟಿಪ್ಪಣಿಗಳನ್ನು ಆಧರಿಸಿ ಹೇಳುವುದಾದರೆ ಮಾಧ್ಯಮ ಕ್ಷೇತ್ರಕ್ಕೆ ಹಿಂದೆ ಇದ್ದ ವಿಶ್ವಾಸಾರ್ಹತೆ ಹಾಗೂ ಸಮಾಜಮುಖಿ ದೃಷ್ಟಿ ಬದಲಾಗಿದೆ ಎಂದಂತೂ ಖಂಡಿತವಾಗಿಯೂ ಹೇಳಬಹುದು.
ನಿಜ. ಮಾಧ್ಯಮ ಕ್ಷೇತ್ರ ಸರ್ವತಂತ್ರ ಸ್ವತಂತ್ರವಲ್ಲ. ಅದೂ ಕೂಡಾ ಉಳಿದ ಕ್ಷೇತ್ರಗಳಂತೆ ಸಮಾಜದ ಸೃಷ್ಟಿ. ಸಮಾಜದಲ್ಲಿ ಇರುವ ಸಬಲ ಹಾಗೂ ದುರ್ಬಲ ಅಂಶಗಳು ಸಹಜವಾಗಿಯೇ ಅದರಲ್ಲಿಯೂ ಕೂಡಾ ಪ್ರತಿಧ್ವನಿಸುವುದು ಸ್ವಾಭಾವಿಕ ಎಂದು ಪ್ರತಿಪಾದಿಸಿದಾಕ್ಷಣ ಮಾಧ್ಯಮದ ಇಳಿಮುಖದ ಕಾರಣವನ್ನು ಒಪ್ಪಿಕೊಂಡಂತಲ್ಲ. ಇಳಿಮುಖಕ್ಕೆ ಕಾರಣಗಳು ಹಲವಾರು. ಇಂಟರ್‌ನೆಟ್ ಯುಗ ಆರಂಭಕ್ಕಿಂತಲೂ ಮೊದಲು ಜನರಿಗೆ ಸುದ್ದಿ ಸಮಾಚಾರದ ಕುತೂಹಲವನ್ನು ಇಂಗಿಸಲು ಮುದ್ರಣ ಹಾಗೂ ಆಕಾಶವಾಣಿ ಮಾಧ್ಯಮಗಳಷ್ಟೆ ಲಭ್ಯವಿದ್ದವು. ಇಂಟರ್‌ನೆಟ್ ಯುಗ ಆರಂಭವಾದ ಮೇಲೆ ಮುದ್ರಣ ಮಾಧ್ಯಮವನ್ನು ಹಿಂದಕ್ಕೆ ಹಾಕುವ ರೀತಿಯಲ್ಲಿ ತಂತ್ರಜ್ಞಾನ ವಿಶ್ವಾಮಿತ್ರ ಸೃಷ್ಟಿಯಾದ ಮಾಧ್ಯಮಗಳು ನಾಗಾಲೋಟದಲ್ಲಿ ಹೊರಟ ನಂತರ ಅದರ ಹಿಂದೆ ಬಿದ್ದದ್ದು ಸಾಮಾಜಿಕ ಜಾಲತಾಣ ಹಾಗೂ ಡಿಜಿಟಲ್ ಮಾಧ್ಯಮದ ಆಕರ್ಷಣೆ. ಬದಲಾದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸುದ್ದಿ ಸಮಾಚಾರಗಳನ್ನು ಗಂಭೀರವಾಗಿ ನೋಡುವ ಜನವರ್ಗ ಅದರಲ್ಲಿ ಮಾಹಿತಿಗಿಂತಲೂ ಮನರಂಜನೆಗೆ ಮನಸೋತ ಪರಿಣಾಮವೆಂದರೆ ಸಣ್ಣ ಪುಟ್ಟ ಸಂಗತಿಗಳು ವೈಭವದಿಂದ ಜನರಿಗೆ ಮುಟ್ಟುವಂತಾದ ಮೇಲೆ ಸತ್ಯಕ್ಕೆ ಮಾತ್ರ ಬೆಲೆ ಕೊಡುವ ಮಾಧ್ಯಮಗಳು ಹಿಂದೆ ಬಿದ್ದದ್ದು ನಿಜಕ್ಕೂ ಬೇಸರದ ಸಂಗತಿ. ಇದು ಸಾಲದು ಎಂಬಂತೆ ಸಮಾಜಮುಖಿ ಚಿಂತನೆ ಹಾಗೂ ದೇಶದ ಪ್ರಗತಿಯ ವೈಚಾರಿಕತೆಗೆ ಬದ್ಧವಾಗಿದ್ದ ವ್ಯಕ್ತಿಗಳು ಹಾಗೂ ಸಂಸ್ಥೆಗಳು ನಡೆಸುತ್ತಿದ್ದ ಮಾಧ್ಯಮ ಸಂಸ್ಥೆಗಳಲ್ಲಿ ರಾಜಕೀಯ ವ್ಯಕ್ತಿಗಳ ಕೈವಾಡ ಆರಂಭವಾಗುತ್ತಿದ್ದಂತೆಯೇ ನಿಷ್ಪಕ್ಷಪಾತದ ಧೋರಣೆಯ ಬದಲು ಪಕ್ಷಪಾತದ ಧೋರಣೆಯ ಮಾಧ್ಯಮಗಳ ಭರಾಟೆ ಆರಂಭವಾದದ್ದು ಭಾರತದ ಮಟ್ಟಿಗೆ ದೊಡ್ಡ ಕಪ್ಪುಚುಕ್ಕೆ.
ಇಂತಹ ದುಸ್ಥಿತಿಯಿಂದ ಪಾರಾಗಲು ಕೊರೊನಾ ವಿರುದ್ಧದ ರೀತಿಯ ಸಂಘಟಿತ ಸಮರ ಅತ್ಯಗತ್ಯ. ಕೊರೊನಾ ಜಾಡ್ಯದಿಂದ ಪಾರಾಗಲು ಪ್ರತಿಯೊಬ್ಬ ಭಾರತೀಯರು ಲಸಿಕೆಯನ್ನು ಹಾಕಿಸಿಕೊಂಡರು. ಅದೇ ರೀತಿಯಲ್ಲಿ ಮಾಧ್ಯಮದ ರಕ್ಷಣೆಗಾಗಿ ಲಸಿಕೆ ರೀತಿಯ ಮನೋಧರ್ಮವನ್ನು ವೈಯಕ್ತಿಕವಾಗಿ ಅಳವಡಿಸಿಕೊಂಡರೆ ಆಗ ಮಾಧ್ಯಮ ಸ್ವಾತಂತ್ರ್ಯಕ್ಕೆ ಹಿಂದಿನ ವೈಭವ ಬರುವುದು ಖಂಡಿತ. ಸಾಮೂಹಿಕವಾಗಿ ಲಸಿಕೆಯನ್ನು ಹಾಕಿಸಿಕೊಂಡರೆ ಕೊರೊನಾ ರೋಗವನ್ನು ತಡೆಗಟ್ಟಲು ಹೇಗೆ ಅಸಾಧ್ಯವೋ ಹಾಗೆಯೇ ವೈಯಕ್ತಿಕವಾಗಿ ಲಸಿಕೆ ಪಡೆದುಕೊಂಡು ಸಾಮೂಹಿಕವಾಗಿ ಸಮರ ಸಾರುವಂತೆ ಇಂತಹ ತಪ್ಪು ಬೆಳವಣಿಗೆಯನ್ನು ಸರಿಪಡಿಸಿಕೊಳ್ಳುವ ಮದ್ದು ಜನರ ಕೈಯ್ಯಲ್ಲಿಯೇ ಇದೆ. ಅಂಗೈಯ್ಯಲ್ಲಿ ಬೆಣ್ಣೆ ಇರುವಾಗ ತುಪ್ಪಕ್ಕೆ ಪರದಾಡುವುದು ಜಾಣತನವಾಗಲಾರದು.