ಮನುಕುಲದ ಆರಾಧ್ಯದೈವ ಸಿದ್ಧಾರೂಢರು

Advertisement

ಶ್ಯಾಮಾನಂದ ಬಾಳಪ್ಪ ಪೂಜೇರಿ
ಭುವಿಗೆ ಗುರುವಾಗಿ ಬಂದ ಶ್ರೀ ಸಿದ್ಧಾರೂಢರು ಸಾಕ್ಷಾತ್ ಪರಶಿವನ ಅವತಾರ. ಶ್ರೀ ಸಿದ್ಧಾರೂಢರ ರೂಪದಿಂದ, ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಚಳಕಾಪುರ ಗ್ರಾಮದಲ್ಲಿ ಶ್ರೀ ಗುರುಶಾಂತಪ್ಪ ಹಾಗೂ ದೇವಮಲ್ಲಮ್ಮ ದಂಪತಿಗೆ ಜನಿಸಿದ ಸಿದ್ಧಾರೂಢರು ಸಮಾಜಕ್ಕೆ ಸನ್ಮತಿ ನೀಡಿದ ಚೇತನ.
ಬಾಲ್ಯದಲ್ಲಿಯೇ ಸಿದ್ಧಾರೂಢರ ಆಧ್ಯಾತ್ಮ ಮುಖ ಪರಿಚಯವಾಗಿತ್ತು. ನಿತ್ಯವೂ ಅವರ ಮನೆಯ ಕುಲಗುರುಗಳಾದ ಶ್ರೀ ವೀರಭದ್ರಸ್ವಾಮಿಯವರು ಪ್ರವಚನ ಮಾಡುತ್ತಿದ್ದರು. ಒಂದು ದಿನ ಗುರುಗಳು ಎಲ್ಲವೂ ಒಂದು ದಿನ ಪ್ರಳಯವಾಗುತ್ತದೆ ಎಂದು ಬೋಧಿಸುತ್ತಿರುವಾಗ, ಶ್ರೀ ಸಿದ್ಧಾರೂಢರು ಚಿಕ್ಕವರಿರುವಾಗಲೇ ಆಕಾಶವು ಹೇಗೆ ಪ್ರಳಯವಾಗುತ್ತದೆ ಎಂದು ಗುರುಗಳಿಗೆ ಪ್ರಶ್ನಿಸಿದರು. ಆಗ ಗುರುಗಳು ಈ ಪ್ರಶ್ನೆಗೆ ಉತ್ತರವನ್ನು ಶ್ರೋತ್ರಿಯ ಬ್ರಹ್ಮನಿಷ್ಠ ಸದ್ಗುರುಗಳಿಂದಲೇ ಕೇಳಿ ತಿಳಿಯಬೇಕೆಂದು ಹೇಳಿದರು.
ತಕ್ಷಣ ಶ್ರೀ ಸಿದ್ಧಾರೂಢರು ಗುರು, ತಂದೆ, ತಾಯಿಗಳ ಅಪ್ಪಣೆ ಪಡೆದುಕೊಂಡು ಗುರು ಶೋಧನೆಗಾಗಿ ಮನೆಯನ್ನು ತೊರೆದರು. ಕಾಡು-ಮೇಡುಗಳನ್ನು ಅಲೆದಾಡಿ ಕೊನೆಗೆ ಗುಡಗುಂಟಿ ಪರಮ ಪೂಜ್ಯ ಶ್ರೀ ಗಜದಂಡ ಶಿವಯೋಗಿಗಳಲ್ಲಿ ಶಿಷ್ಯತ್ವವನ್ನು ಸ್ವೀಕರಿಸಿ ಆಪ್ತ, ಅಂಗ, ಸ್ಥಾನ, ಸದ್ಭಾವ ಚತುರ್ವಿಧ ಸೇವೆಗಳನ್ನು ಮಾಡುತ್ತ ಶಾಸ್ತ್ರ ಅಧ್ಯಯನದಲ್ಲಿ ನಿರತರಾಗಿದ್ದರು. ಹೀಗಿರುವಾಗ ಒಂದು ದಿನ ಸುರಪುರದ ಸುಬ್ಬಯ್ಯ ಶಾಸ್ತ್ರಿಗಳು ಶ್ರೀ ಗಜದಂಡ ಶಿವಯೋಗಿಗಳ ಹತ್ತಿರ ಬಂದು ನಿಮ್ಮ ಶಿಷ್ಯರಿಗೆ ಯಾವ ಶಾಸ್ತ್ರವನ್ನು ಬೋಧಿಸುತ್ತೀರಿ ಎಂದು ಕೇಳಿದಾಗ ಉಪನಿಷತ್‌ನ್ನು ಹೇಳುತ್ತಿದ್ದೇನೆ ಎಂದು ಶ್ರೀ ಗಜದಂಡ ಗುರುಗಳು ಹೇಳಿದರು. ಆಗ ಸುಬ್ಬಯ್ಯ ಶಾಸ್ತ್ರಿಗಳು ಉಪನಿಷತ್ ವಿದ್ಯೆಯನ್ನು ಬ್ರಾಹ್ಮಣ ಅಲ್ಲದವರಿಗೆ ಹೇಳುವ, ಕೇಳುವ ಅಧಿಕಾರವಿಲ್ಲ. ಆದರೆ, ನೀವು ಹೇಗೆ ಇವರಿಗೆ ಉಪನಿಷತ್ ಹೇಳುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಆಗ ಶ್ರೀ ಸಿದ್ಧಾರೂಢರು ಗುರುಗಳ ಅಪ್ಪಣೆ ಪಡೆದು ಸುಬ್ಬಯ್ಯ ಶಾಸ್ತ್ರಿಗಳ ಪ್ರಶ್ನೆಗೆ ಉತ್ತರಿಸಿ, ನಿಜವಾದ ಬ್ರಾಹ್ಮಣರ ಲಕ್ಷಣವನ್ನು ತಿಳಿಸಿ ಬ್ರಹ್ಮಜ್ಞಾನಿಯೇ ನಿಜವಾದ ಬ್ರಾಹ್ಮಣನು ಎಂದು ವಜ್ರ ಸೂಚಿಕೋಪನಿಷತ್ತಿನ ಪ್ರಮಾಣ ಸಹಿತವಾಗಿ ಪ್ರತಿಪಾದಿಸುವುದರೊಂದಿಗೆ ಉಪನಿಷತ್ ಅರ್ಥವನ್ನು ಕೂಡ ಸಕ್ರಮವಾಗಿ ವಿವರಿಸಿದರು. ಅಲ್ಲದೇ ಜಾತ್ಯಾದಿ ನಿರ್ಬಂಧವಿಲ್ಲದೇ ಪರಿಪಕ್ವ ಅಂತಃಕರಣವುಳ್ಳ ಪ್ರತಿಯೊಬ್ಬರೂ ಈ ವೇದಾಂತ ವಿದ್ಯೆಗೆ ಅಧಿಕಾರಿಗಳಾಗಿದ್ದಾರೆ ಎಂದು ಪ್ರತಿಪಾದಿಸಿದರು.
ಇದನ್ನು ಕೇಳಿದ ಸುಬ್ಬಯ್ಯ ಶಾಸ್ತ್ರಿಗಳು, ಈತನು ಸಾಮಾನ್ಯ ಬಾಲಕನಲ್ಲ. ಸಾಕ್ಷಾತ್ ಪರಶಿವನೇ ಈ ರೂಪದಲ್ಲಿ ಅವತರಿಸಿದ್ದಾನೆಂದು ಸಿದ್ಧಾರೂಢರನ್ನು ಕೊಂಡಾಡುತ್ತ ಹೋದರು.
ಹುಬ್ಬಳ್ಳಿಗೆ ಬಂದು ನೆಲೆ ನಿಂತಿದ್ದು
ಶ್ರೀ ಸಿದ್ಧಾರೂಢರು ಕೆಲವು ಕಾಲ ಅಲ್ಲಿಯೇ ಇದ್ದು ಗುರುಸೇವಾ ಶಾಸ್ತ್ರ ಚಿಂತನೆಯನ್ನು ಮಾಡಿ ಜಗದಂಡ ಶಿವಯೋಗಿಗಳಿಂದ ಶ್ರೀ ಸಿದ್ಧಾರೂಢ ಭಾರತಿ ಎಂಬ ನಾಮಕರಣವನ್ನು ಪಡೆದುಕೊಂಡು ಕೊರಳಲ್ಲಿಯ ಲಿಂಗವನ್ನು ತೆಗೆದು ಅವರಿಗೆ ಅರ್ಪಿಸಿ ಜಾತಿಸೂಚಕವಾದ ಯಾವುದೇ ಲಾಂಛನವನ್ನು ಧರಿಸದೆ ಲೋಕ ಕಲ್ಯಾಣಾರ್ಥವಾಗಿ ದೇಶ ಸಂಚಾರ ಕೈಕೊಂಡರು. ಅಲ್ಲಲ್ಲಿ ಅಜ್ಞಾನ ಅಂಧಕಾರದಲ್ಲಿ ಇರುವ ಜನರಿಗೆ ಸುಜ್ಞಾನವನ್ನು ಬೋಧಿಸುತ್ತಾ, ಅದರ ಜೊತೆಗೆ ಸಂಗೀತ, ಯೋಗ, ಆಯುರ್ವೇದ ಮೊದಲಾದ ಕ್ಷೇತ್ರದ ಸಾಧಕರಿಗೆ ಮಾರ್ಗದರ್ಶನ ಮಾಡುತ್ತಾ ಸುಮಾರು ೨೦ ವರ್ಷಗಳ ಕಾಲ ನೇಪಾಳ, ಟಿಬೆಟ್, ಪಾಕಿಸ್ತಾನದ ಕೆಲ ಭಾಗಗಳನ್ನೊಳಗೊಂಡಂತೆ ಅಖಂಡ ಭಾರತವನ್ನು ಕಾಲ್ನಡಿಗೆಯಿಂದ ಸಂಚರಿಸಿ ೪೨ನೇ ವಯಸ್ಸಿನಲ್ಲಿ ಹುಬ್ಬಳ್ಳಿಗೆ ಬಂದು ನೆಲೆಸಿದರು.
ಕಲಿಯುಗದ ನಿಜವಾದ ಜಗದ್ಗುರು
ಸದ್ಗುರು ಶ್ರೀ ಸಿದ್ಧಾರೂಢರ ಬಿಳಿಯ ಬಣ್ಣದ ಸರಳ ಉಡುಗೆ, ಆಡಂಬರವಿಲ್ಲದ ಸಹಜ ಬದುಕು, ಭೇದವರಿಯದ ಮಾತೃಹೃದಯ, ಉದಾತ್ತವಾದ ವಿಚಾರಧಾರೆ ಹಾಗೂ ನಡೆ-ನುಡಿಗಳಲ್ಲಿನ ಏಕತೆ ಜನರ ಮನಸೂರೆಗೊಂಡವು. ಸಮಸ್ತ ಜನಾಂಗದವರೂ ಅವರನ್ನು ಸಹಜವಾಗಿ ಗುರುಗಳೆಂದು ಸ್ವೀಕರಿಸಿದರು.
ಸದ್ಗುರು ಶ್ರೀ ಸಿದ್ಧಾರೂಢರು ಸರ್ವರ ಭಾವನೆಗಳಿಗೆ ಸ್ವಂದಿಸಿ, ನೊಂದ ಹೃದಯಗಳಿಗೆ ಸಾಂತ್ವನ ನೀಡಿದರು. ಜಾತ್ಯಾದಿ ನಿರ್ಬಂಧವಿಲ್ಲದೇ ಸಮಸ್ತ ಮನುಕುಲಕ್ಕೆ ಅದ್ವೈತ ಸಿದ್ಧಾಂತವನ್ನು ಬೋಧಿಸಿದರು. ಗುಪ್ತವಾಗಿದ್ದ ಶಿವ ಪಂಚಾಕ್ಷರಿ ಮಹಾಮಂತ್ರವನ್ನು ಸಾರ್ವತ್ರಿಕವಾಗಿ ಮತ್ತು ಬಹಿರಂಗವಾಗಿ ಉಪದೇಶಿಸಿ ಪ್ರತಿಯೊಬ್ಬರಿಗೂ ಅದನ್ನು ಜಪಿಸಲಿಕ್ಕೆ ಕರೆ ನೀಡಿದರು.
ಕನ್ನಡದ ಉಪನಿಷತ್ತುಗಳೆಂದು ಪ್ರಖ್ಯಾತಿ ಹೊಂದಿದ ಶ್ರೀಮನ್ನಿಜಗುಣ ಶಿವಯೋಗಿಗಳ ವೇದಾಂತ ಶಾಸ್ತ್ರದ ಗ್ರಂಥಗಳನ್ನು ಬೆಳಕಿಗೆ ತಂದರು. ಅಷ್ಟೇ ಅಲ್ಲದೇ ಬ್ರಹ್ಮಸೂತ್ರ, ಉಪನಿಷತ್, ಭಗವದ್ಗೀತೆ, ಭಾಗವತ, ಯೋಗವಾಶಿಷ್ಟ, ಪಂಚದಶಿ, ವಿಚಾರ ಸಾಗರ, ತತ್ವಾನುಸಂಧಾನ ಮೊದಲಾದ ಗ್ರಂಥಗಳ ಕುರಿತು ಪ್ರವಚನ ನೀಡಿದರು. ಅವರ ಪ್ರವಚನ ಕೇಳಲು ಹಾಗೂ ಅವರ ದರ್ಶನಾಶೀರ್ವಾದ ಪಡೆಯಲು ಅಸಂಖ್ಯಾತ ಜನ ಮುಮುಕ್ಷಗಳು, ಸಾಧು ಸಂತರು, ರಾಜ ಮಹಾರಾಜರು ಆಗಮಿಸುತ್ತಿದ್ದರು.
ಅಲ್ಲದೇ, ಅನೇಕ ಜನ ಮುಮುಕ್ಷಗಳು, ಸಾಧು ಸಂತರು ಅವರ ಬಳಿಯಲ್ಲಿಯೆ ವಾಸಿಸುತ್ತಿದ್ದರು. ಅವರಲ್ಲಿ ಪ್ರಮುಖರಾದ ಶಿಷ್ಯರೆಂದರೆ ಗುರುನಾಥಾರೂಢರು, ಆರೂಢ ಜ್ಯೋತಿ ಶ್ರೀ ಶಿವಪುತ್ರ ಸ್ವಾಮಿಗಳು, ಐರಣಿಯ ಮುಪ್ಪಿನಾರ್ಯರು, ಕಬೀರದಾಸರು, ಗೋಕಾಕದ ಶ್ರೀ ಶಾಮಾನಂದರು, ಅಕ್ಕಲಕೋಟೆಯ ಶಿವಶರಣರು, ನಾಶಿಕ ಶರಣಪ್ಪನವರು, ಗೋವಿಂದ ಸ್ವಾಮಿಗಳು, ದೇವರ ಹುಬ್ಬಳ್ಳಿಯ ನಾಗಭೂಷಣ ಸ್ವಾಮಿಗಳು, ಚಿತ್ರದುರ್ಗದ ಶ್ರೀ ಕಬೀರಾನಂದರು, ಉಗುರಗೋಳದ ನಿರ್ವಾಣಪ್ಪನವರು, ಗೋಪನಕೊಪ್ಪದ ಸಿದ್ದವೀರಪ್ಪನವರು, ಬೆಳ್ಳಿಗಟ್ಟಿ ಬಸವಂತಾಚಾರ್ಯರು, ತಮ್ಮಣ್ಣ ಶಾಸ್ತ್ರಿಗಳು, ಮುಕ್ತಾನಂದ ಸ್ವಾಮಿಗಳು, ಬಾಂಬೆ, ಬಾಗಲಕೋಟೆಯ ರಾಮಾರೂಢರು, ಶಿವರಾಮ ಚಂದ್ರಗಿರಿಯವರು ಮೊದಲಾದವರು.
ಶ್ರೀ ಸಿದ್ಧಾರೂಢರ ಜನಪ್ರಿಯತೆಯನ್ನು ಸಹಿಸದ ಕೆಲವು ಜಾತಿವಾದಿಗಳು ಅವರಿಗೆ ಹಿಂಸೆ ನೀಡಿದರು. ಆದರೆ, ಅವರು ಅದನ್ನು ಶರೀರ ಪ್ರಾರಬ್ಧವೆಂದು ತಿಳಿದು ಸಮಾಧಾನದಿಂದ ಸ್ವೀಕರಿಸಿದರು. ಅವರ ತಲೆಯ ಮೇಲೆ ಬೆಂಕಿ ಇಟ್ಟಾಗ ಇಟ್ಟವರ ಮೇಲೆ ಸಿಟ್ಟಾಗಲಿಲ್ಲ. ಅವರ ಶಾಂತಿ ಎಂದಿಗೂ ಕದಡಲಿಲ್ಲ. ನಂತರ ಬಂಗಾರದ ಕಿರೀಟ ತೊಡಿಸಿ ಗುರುರಾಜ ಸಿದ್ಧಾರೂಢ ಸಮರ್ಥಾ ಎಂದು ಹಾಡುವಾಗ ಹಿಗ್ಗಲಿಲ್ಲ. ದೇಶಪ್ರೇಮಿಗಳಾಗಿದ್ದ ಶ್ರೀ ಸಿದ್ಧಾರೂಢರು ಹುಬ್ಬಳ್ಳಿಯಲ್ಲಿ ನಡೆದ ಸ್ವಾತಂತ್ರ್ಯ ಚಳವಳಿಯ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ಈ ಅಧಿವೇಶನದಲ್ಲಿ ಭಾಗವಹಿಸಿದ್ದ ಲೋಕಮಾನ್ಯ ಬಾಲಗಂಗಾಧರ ತಿಲಕ ಹಾಗೂ ಮಹಾತ್ಮ ಗಾಂಧೀಜಿಯವರು ಶ್ರೀ ಸಿದ್ಧಾರೂಢರ ವ್ಯಕ್ತಿತ್ವಕ್ಕೆ ಮಾರು ಹೋದರು.
೧೯೨೯ರಲ್ಲಿ ಬ್ರಹ್ಮೈಕ್ಯ
ಸದ್ಗುರು ಸಿದ್ಧಾರೂಢರು ತಮ್ಮ ಪ್ರೀತಿಯ ಶಿಷ್ಯರಾದ ಶ್ರೀ ಗುರುನಾಥಾರೂಢರನ್ನು ತಮ್ಮ ದಿವ್ಯ ದೃಷಿಯಿಂದ ನೋಡಿ ಅವರಲ್ಲಿಯೇ ಒಂದಾಗಿ ೧೯೨೯ರಲ್ಲಿ ಬ್ರಹ್ಮೈಕ್ಯರಾದರು.
ಶ್ರೀ ಸಿದ್ಧಾರೂಢರು ಹೇಳಿಕೊಟ್ಟ ಮಹಾಮಂತ್ರ ಹಾಗೂ ಅವರ ಅದ್ವೈತ ತತ್ವ ಸಂದೇಶ ಜಾತಿ, ಮತ, ಪಂಥ, ವರ್ಣಾಶ್ರಮಗಳ ಭೇದವಿಲ್ಲದೆ ಲಕ್ಷಾಂತರ ಜನರ ಬಾಳಿಗೆ ಬಾಳದೀವಿಗೆಯಾಗಿ ಬೆಳಕು ನೀಡುತ್ತಿವೆ.

(ಲೇಖಕರು ಸದ್ಗುರು ಶ್ರೀ ಸಿದ್ಧಾರೂಢ ಮಠದ ಧರ್ಮದರ್ಶಿಗಳು.)