ಮನಿ ಮನಿ ಪವರ್, ಮಸಲ್ ಪವರ್‌: ಮತದಾರರಿಂದ ತಕ್ಕ ಉತ್ತರ

Advertisement

ಚಾಮರಾಜನಗರ : ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹತಾಶೆಗೊಂಡು ಗೂಂಡಾ ವರ್ತನೆ ತೋರುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಕೊಳ್ಳೇಗಾಲದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಡಾ.ಸಿ.ಎನ್‌.ಮಂಜುನಾಥ್ ಅಭ್ಯರ್ಥಿ ಆಗಿರುವುದನ್ನು ತಡೆಯಲಾರದೇ ಕಾಂಗ್ರೆಸ್ ಪಕ್ಷದ ಮುಖಂಡರು ಹತಾಶೆಯಿಂದ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಮನಿ ಮನಿ ಪವರ್, ಮಸಲ್ ಪವರ್‌ನಿಂದ ಚುನಾವಣೆ ಗೆಲ್ಲಬಹುದು ಎಂದುಕೊಂಡಿದ್ದು, ಇದಕ್ಕೆ ಮತದಾರರು ತಕ್ಕ ಉತ್ತರ ಕೊಡಲಿದ್ದಾರೆ ಎಂದು ಹೇಳಿದರು. ಹಣ, ಹೆಂಡ ಹಾಗೂ ತೋಳ್ಬಲದ ಗೂಂಡಾಗಿರಿ ರಾಜಕೀಯಕ್ಕೆ ಹೆಸರಾಗಿರುವ ಕಾಂಗ್ರೆಸ್‌ ಬೆಂಗಳೂರು ಗ್ರಾಮಾಂತರದಲ್ಲಿ ಬಂಡೆ ಪುಡಿ ಪುಡಿಯಾಗುವ ವಾತಾವರಣ ಉದ್ಭವಿಸಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ಸಿಗರು ಹತಾಶರಾಗಿದ್ದಾರೆ. ಇವರಿಗೆ ವಿರುದ್ಧವಾಗಿ ನಿಂತಿರುವ ಮತದಾರರು ಹಾಗೂ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಮೇಲೆ ಅಮಾನುಷ ಹಲ್ಲೆ ನಡೆಸಿ ಕ್ಷೇತ್ರದಲ್ಲಿ ಭಯ ಮೂಡಿಸುವ ಕೃತ್ಯ ಆರಂಭಿಸಿದ್ದಾರೆ. ರೇಷ್ಮೆ ಬೆಳೆಗಾರ ಹಾಗೂ ಬಿಜೆಪಿ ಕಾರ್ಯಕರ್ತ‌ ನವೀನ್ ಅವರ ಮೇಲೆ ಕಾಂಗ್ರೆಸ್ಸಿನ ಗೂಂಡಾ ವ್ಯಕ್ತಿಯೊಬ್ಬ ಮಾರಣಾಂತಿಕ ಹಲ್ಲೆ ಮಾಡಿದ್ದರೂ ಆತನನ್ನು ಬಂಧಿಸದೇ ಇರುವುದು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದೆ.
ಜಿಲ್ಲೆಯನ್ನು ತಮ್ಮ ಕಪಿಮುಷ್ಠಿಯಲ್ಲಿಡಿದಿಟ್ಟುಕೊಂಡಿರುವ ಡಿ.ಕೆ.ಬ್ರದರ್ಸ್ ಅಧಿಕಾರ ದರ್ಪ ನೆತ್ತಿಗೇರಿದಂತಿದ್ದು, ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿ ಮತದಾರರನ್ನು ಬೆದರಿಸುವ ಕೆಲಸ ಮುಂದಾಗಿರುವುದು ಅಕ್ಷಮ್ಯ ಅಪರಾಧ. ಕೂಡಲೇ ಚುನಾವಣಾ ಆಯೋಗ ಹಾಗೂ ಪೊಲೀಸ್ ಇಲಾಖೆ ಕಾಂಗ್ರೆಸ್ ಗೂಂಡಾಗಳ ವಿರುದ್ಧ ಕ್ರಮ ಕೈಗೊಂಡು ನಿಷ್ಪಕ್ಷಪಾತ ತನಿಖೆ ನಡೆಸಿ, ಶಾಂತಿಯುತ ಮತದಾನ ನಡೆಸಲು ಅಗತ್ಯವಿರುವ ಎಲ್ಲಾ ರೀತಿಯ ಕ್ರಮಗಳನ್ನು ಜರುಗಿಸಲಿ ಹಾಗೂ ಗ್ರಾಮಾಂತರ ಮತದಾರರ ರಕ್ಷಣೆಗೆ ಮುಂದಾಗಬೇಕೆಂದು ಆಗ್ರಹಿಸುತ್ತೇನೆ ಎಂದಿದ್ದಾರೆ.