ಮನಾಲಿ ಮಂಜಿನಲ್ಲಿ ಸತೀಶ್, ಅದಿತಿ ಡುಯೆಟ್: ಮ್ಯಾಟ್ನಿ ಹಾಡಿಗೆ ಶಿವಣ್ಣ ಸಾಥ್

Advertisement

ಸತೀಶ್ ನೀನಾಸಂ, ರಚಿತಾ ರಾಮ್ ಹಾಗೂ ಅದಿತಿ ಪ್ರಭುದೇವ ಅಭಿನಯಿಸಿರುವ ಮ್ಯಾಟ್ನಿ ಸಿನಿಮಾ ಬಿಡುಗಡೆಯ ಸನ್ನಾಹದಲ್ಲಿದೆ. ಸತೀಶ್ ಮತ್ತು ರಚಿತಾ ಎರಡನೇ ಬಾರಿ ಜೊತೆಯಾಗಿದ್ದು, ಅಯೋಗ್ಯ ನಂತರ ಮತ್ತೆ ಈ ಜೋಡಿ ತೆರೆಯ ಮೇಲೆ ಒಟ್ಟಿಗೆ ಮೋಡಿ ಮಾಡಲಿದೆ. ಈಗಾಗಲೇ ಹಾಡಿನ ಮೂಲಕ ಸದ್ದು ಮಾಡಿರುವ ಮ್ಯಾಟ್ನಿ ತಂಡ, ಈಗ ಮತ್ತೊಂದು ರೊಮ್ಯಾಂಟಿಕ್ ಹಾಡಿನ ಮೂಲಕ ಪ್ರೇಕ್ಷಕರ ಮುಂದೆ ಬಂದಿದೆ.

‘ನಿನಗಾಗಿ ಮಿಡಿಯುವುದು…’ ಎಂಬ ಹಾಡು ರಿಲೀಸ್ ಆಗಿದ್ದು, ಸತೀಶ್ ನೀನಾಸಂ ಹಾಗೂ ಅದಿತಿ ಪ್ರಭುದೇವ ಹೆಜ್ಜೆ ಹಾಕಿದ್ದಾರೆ. ಈ ಹಾಡನ್ನು ಮನಾಲಿಯಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಮಂಜಿನ ನಡುವೆ ಇಬ್ಬರೂ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಈ ಹಾಡನ್ನು ಬಿಡುಗಡೆ ಮಾಡುವ ಮೂಲಕ ಮ್ಯಾಟ್ನಿ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ನಿನಗಾಗಿ ಮಿಡಿಯುವುದು ಹಾಡಿನ ಜೊತೆಗೆ ಮೇಕಿಂಗ್ ಕೂಡ ಬಿಡುಗಡೆ ಮಾಡಲಾಗಿದ್ದು, ಮನಾಲಿಯಲ್ಲಿ ನಡೆಸಿದ ಚಿತ್ರೀಕರಣದ ಹೇಗಿತ್ತು ಅದರ ಜೊತೆಗೆ ಚಿತ್ರತಂಡ ಮನಾಲಿಯಲ್ಲಿ ಏನೆಲ್ಲಾ ಸಾಹಸ ಮಾಡಿ ಚಿತ್ರೀಕರಣ ಮಾಡಿದೆ ಎಂಬುದನ್ನು ಮೇಕಿಂಗ್ ವೀಡಿಯೋ ಮೂಲಕ ತಿಳಿಸಿದೆ.

ಮ್ಯಾಟ್ನಿ ಸಿನಿಮಾವನ್ನು ಮನೋಹರ್ ಕಾಂಪಲ್ಲಿ ನಿರ್ದೇಶನ ಮಾಡಿದ್ದು, ಪಾರ್ವತಿ ಎಸ್ ಗೌಡ ಬಂಡವಾಳ ಹೂಡಿದ್ದಾರೆ. ಈ ಹಾಡನ್ನು ಹೇಮಂತ್ ಕುಮಾರ್ ಗಂಜಂ ಬರೆದಿದ್ದು, ಸಾದ್ವಿನಿ ಕೊಪ್ಪ ಹಾಡಿದ್ದಾರೆ. ಕೀರ್ತನ್ ಪೂಜಾರಿ ಕ್ಯಾಮೆರಾ, ಸಂತು ನೃತ್ಯ ನಿರ್ದೇಶನ ಮಾಡಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

ಮ್ಯಾಟ್ನಿಯ ಮತ್ತೊಂದು ಪ್ರೇಮಗೀತೆ! ನಿಮಗಾಗಿ ಕೇಳಿ ಆನಂದಿಸಿ…