ಮನರಂಜನೆಯೇ ಉಪಾಧ್ಯಕ್ಷನ ಮೂಲಮಂತ್ರ

Advertisement

ಸಿನಿಮಾ: ಉಪಾಧ್ಯಕ್ಷ
ನಿರ್ದೇಶನ: ಅನಿಲ್ ಕುಮಾರ್
ತಾರಾಗಣ: ಚಿಕ್ಕಣ್ಣ, ಮಲೈಕಾ, ರವಿಶಂಕರ್, ಸಾಧುಕೋಕಿಲ, ವೀಣಾ ಸುಂದರ್, ಧರ್ಮಣ್ಣ, ಕರಿಸುಬ್ಬು ಮೊದಲಾದವರು.
ರೇಟಿಂಗ್ಸ್: 3.5

  • ಗಣೇಶ್ ರಾಣೆಬೆನ್ನೂರು

ಶರಣ್ ಹಾಗೂ ಚಿಕ್ಕಣ್ಣ ಪ್ರಮುಖ ಭೂಮಿಕೆಯಲ್ಲಿದ್ದ ಅಧ್ಯಕ್ಷ ಸಿನಿಮಾ ಮನರಂಜಿಸುವಲ್ಲಿ ಯಶಸ್ವಿಯಾಗಿತ್ತು. ಅಧ್ಯಕ್ಷನಾಗಿ ಶರಣ್, ಉಪಾಧ್ಯಕ್ಷನಾಗಿ ಚಿಕ್ಕಣ್ಣ ನಗುವಿನ ಅಲೆಯಲ್ಲಿ ತೇಲುವಂತೆ ಮಾಡಿದ್ದರು. ಜತೆಗೆ ರವಿಶಂಕರ್, ಕರಿಸುಬ್ಬು ಸೇರಿದಂತೆ ಅನೇಕ ಕಲಾವಿದರ ದಂಡು ನಕ್ಕು ನಗಿಸುವಲ್ಲಿ ಯಶಸ್ವಿಯಾಗಿತ್ತು. ತಾಂತ್ರಿಕವಾಗಿಯೂ ಅಧ್ಯಕ್ಷ ಸೌಂಡು ಮಾಡಿತ್ತು. ಇದೀಗ ಅದರ ಮುಂದುವರಿದ ಭಾಗವಾಗಿ ‘ಉಪಾಧ್ಯಕ್ಷ’ ತೆರೆಕಂಡಿದೆ.
ಈ ಚಿತ್ರವೂ ಮನರಂಜನೆಯನ್ನೇ ಮೂಲಮಂತ್ರವನ್ನಾಗಿಸಿಕೊಂಡಿದೆ. ಹೀಗಾಗಿ ನಗುವಿಗೆ ಬರವಿಲ್ಲ. ಆಗಾಗ ಅಧ್ಯಕ್ಷ ಸಿನಿಮಾ ನೆನಪಿಸುತ್ತಾ, ಅದರ ಗುಂಗಿನಲ್ಲೇ ಉಪಾಧ್ಯಕ್ಷ ಸಿನಿಮಾ ಸಾಗುತ್ತದೆ. ಕಲಾವಿದರ ದಂಡು, ತಾಂತ್ರಿಕ ಬಳಗ, ಕರ್ನಾಟಕದ ಹಲವು ಪ್ರಮುಖ ಸ್ಥಳಗಳು, ಅದ್ಧೂರಿ ಮೇಕಿಂಗ್ ‘ಉಪಾಧ್ಯಕ್ಷ’ನ ಬಲವನ್ನು ಹೆಚ್ಚಿಸಿದೆ.
ಚಿಕ್ಕಣ್ಣ ಪೂರ್ಣ ಪ್ರಮಾಣದ ನಾಯಕನಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದನ್ನು ಯಾವುದೇ ಬಿಲ್ಡಪ್ ಇಲ್ಲದೇ ಸಹಜವಾಗಿಯೇ ಸಿನಿಮಾದುದ್ದಕ್ಕೂ ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೋಗಿರುವ ಪರಿ ಮೆಚ್ಚುಗೆಗೆ ಅರ್ಹ. ಸಾಧುಕೋಕಿಲ, ರವಿಶಂಕರ್, ಕರಿಸುಬ್ಬು, ಧರ್ಮಣ್ಣ, ವೀಣಾ ಸುಂದರ್ ಪಾತ್ರಗಳು ನಾಯಕನ ಪಾತ್ರವನ್ನು ಮತ್ತೊಂದು ಹಂತಕ್ಕೆ ಲಿಫ್ಟ್ ಮಾಡುವಲ್ಲಿ ಸಹಕಾರಿಯಾಗಿದೆ.
ಕಾಮಿಡಿ ಸಿನಿಮಾದಲ್ಲಿ ಲಾಜಿಕ್ ಹುಡುಕಬಾರದು ಎಂಬುದನ್ನು ಪದೇ ಪದೇ ನೆನಪಿಸುತ್ತಲೇ ಉಪಾಧ್ಯಕ್ಷ ಮನರಂಜಿಸುತ್ತಾ ಹೋಗುವುದು ಗಮನಾರ್ಹ. ಸರಳ ಕಥೆ, ಅಷ್ಟೇ ಸರಳ ನಿರೂಪಣೆ, ನಟನೆಯಲ್ಲಿ ಸಹಜತೆ, ಕಲಾವಿದರ ಕಾಮಿಡಿ ಟೈಮಿಂಗ್ ಸಿನಿಮಾದ ಪ್ಲಸ್ ಪಾಯಿಂಟ್‌ಗಳಲ್ಲೊಂದು. ಗ್ರಾಮೀಣ ಭಾಗದ ಕಥೆಯಾದರೂ, ಹಳ್ಳಿ ಬಿಟ್ಟು ಊರೆಲ್ಲ ರೌಂಡು ಹಾಕಿರುವುದು ಚಿತ್ರದ ವಿಶೇಷ.
ಚಿಕ್ಕಣ್ಣ ನಾಯಕನಾಗಿ ಮನರಂಜಿಸಬೇಕು ಎಂದು ತೀರ್ಮಾನಿಸಿದಂತಿದೆ. ಹೀಗಾಗಿ ಅವರದದು ಪೈಸಾ ವಸೂಲ್ ಅಭಿನಯ. ನಾಯಕಿ ಮಲೈಕಾ ಸಿನಿಪ್ರೇಮಿಯಾಗಿ ಕಂಗೊಳಿಸಿದ್ದಾರೆ. ರವಿಶಂಕರ್, ಸಾಧುಕೋಕಿಲ, ವೀಣಾ ಸುಂದರ್, ಧರ್ಮಣ್ಣ, ಕರಿಸುಬ್ಬು ಮೊದಲಾದವರು ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಅರ್ಜುನ್ ಜನ್ಯ ಹಾಡುಗಳು, ಶೇಖರ್ ಚಂದ್ರ ಕ್ಯಾಮೆರಾ ಕೈಚಳಕ ಸಿನಿಮಾಕ್ಕೆ ಪೂರಕವಾಗಿದೆ.