ಮತ್ತೆ ಮತ ಯಂತ್ರದ ಗುಮ್ಮ

Advertisement

ಜನಾದೇಶದ ಪ್ರಕ್ರಿಯೆಯಲ್ಲಿ ಮತದಾನವೇ ಸರ್ವಸ್ವ. ಸ್ವಾತಂತ್ರ್ಯ ಪೂರ್ವದಿಂದಲೂ ಚುನಾವಣೆಯಲ್ಲಿ ಮತಪತ್ರಗಳ ಮೂಲಕವೇ ನಡೆಯುತ್ತಿದ್ದ ಮತದಾನದ ಮಾರ್ಗವನ್ನು ೧೯೮೦-೯೦ರ ಸುಮಾರಿಗೆ ಮತಯಂತ್ರಗಳ ಮೂಲಕ ನಿರ್ವಹಿಸುವ ಪದ್ಧತಿ ಜಾರಿಗೆ ಬಂದ ಮೇಲೆ ಚುನಾವಣೆ ಪ್ರಕ್ರಿಯೆಯ ಸ್ವರೂಪವೇ ಬದಲು. ಮತಪತ್ರಗಳನ್ನು ಮತ ಎಣಿಕೆ ಕೇಂದ್ರಗಳಿಗೆ ರವಾನಿಸಿ ಒಂದೊಂದಾಗಿ ಎಣಿಸುವ ಪ್ರಕ್ರಿಯೆಯಿಂದ ಫಲಿತಾಂಶದ ಪ್ರಕಟಣೆ, ಹಲವಾರು ಸಂದರ್ಭದಲ್ಲಿ ಒಂದು ವಾರ ಹಿಡಿದಿರುವ ಸಂದರ್ಭಗಳು ಉಂಟು. ಜಾಗತಿಕವಾಗಿ ಮನ್ನಣೆ ಪಡೆಯುತ್ತಿದ್ದ ಮತಯಂತ್ರಗಳ ಬಳಕೆಯನ್ನು ಆರಂಭಿಸುವ ಬಗ್ಗೆ ಕೇಂದ್ರ ಸರ್ಕಾರವು ಹಲವು ಹತ್ತು ರೀತಿಗಳಲ್ಲಿ ಪರ್ಯಾವಲೋಕಿಸಿ ಚುನಾವಣಾ ಆಯೋಗದ ಸಮ್ಮತಿಯೊಂದಿಗೆ ಅದನ್ನು ಜಾರಿಗೆ ತರುವ ಮುನ್ನ ಪ್ರಾಯೋಗಿಕ ಹಂತದಲ್ಲಿ ಕಾರ್ಯರೂಪಕ್ಕೆ ತಂದದ್ದು ೧೯೮೩ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಎಂಬುದು ಗಮನಾರ್ಹ.
ಬೆಂಗಳೂರಿನ ಶಾಂತಿನಗರ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಳಕೆಯಾದ ಮತಯಂತ್ರಗಳ ಕಾರ್ಯಕ್ಷಮತೆಯ ಬಗ್ಗೆ ತಜ್ಞರಿಂದ ಮೆಚ್ಚುಗೆ ವ್ಯಕ್ತವಾದ ನಂತರ ರಕ್ಷಣಾ ಖಾತೆಯ ವ್ಯಾಪ್ತಿಗೆ ಬರುವ ಬೆಂಗಳೂರಿನ ಬಿಇಎಲ್ ಕಾರ್ಖಾನೆ ಮೂಲಕ ಮತಯಂತ್ರಗಳ ಉತ್ಪಾದನೆ ಕಾರ್ಯ ಆರಂಭವಾಗುವುದಕ್ಕೂ ನಿರ್ದಾಕ್ಷಿಣ್ಯ ಹಾಗೂ ನಿಷ್ಠುರ ಸ್ವಭಾವಕ್ಕೆ ಮತ್ತೊಂದು ಹೆಸರಾಗಿದ್ದ ಐಎಎಸ್ ಅಧಿಕಾರಿ ಟಿ.ಎನ್.ಶೇಷನ್ ಚುನಾವಣಾ ಆಯೋಗದ ಮುಖ್ಯಸ್ಥರಾಗುವುದಕ್ಕೂ ಒಂದು ರೀತಿಯಲ್ಲಿ ಪೂರಕ ಬೆಳವಣಿಗೆ ಜರುಗಲು ಕಾರಣವಾಯಿತು.
ಇದಾದ ನಂತರ ರಾಷ್ಟ್ರಾದ್ಯಂತ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಮತಯಂತ್ರಗಳ ಬಳಕೆ ಆರಂಭವಾದ ಮೇಲೆ ಎಲ್ಲ ಬಗೆಯ ಚುನಾವಣೆಗಳಲ್ಲೂ ಮತ ಯಂತ್ರಗಳ ಬಳಕೆ ನಿರಾಂತಕವಾಗಿ ನಡೆಯಲು ಆರಂಭವಾದುದು ಮಾತ್ರ ತಂತ್ರಜ್ಞಾನಕ್ಕೆ ಭಾರತೀಯರು ಕೊಟ್ಟ ಸಹಕಾರದ ಕೊಡುಗೆ ಎಂದೇ ಹೇಳಬಹುದು.
ಅದ್ಯಾಕೋ ಏನೋ ಚುನಾವಣೆಯ ಫಲಿತಾಂಶ ತಮ್ಮ ನಿರೀಕ್ಷೆಯಂತೆ ಹೊರಹೊಮ್ಮಲಿಲ್ಲ ಎಂಬ ಕಾರಣಕ್ಕೆ ಏನೋ ಈ ಮತಯಂತ್ರಗಳ ಬಳಕೆಯಲ್ಲಿ ಅಕ್ರಮಗಳು ಜರುಗಿವೆ ಎಂಬ ಕೂಗು ಎಲ್ಲೆಡೆ ಪ್ರತಿಧ್ವನಿಗೊಳ್ಳಲು ಕಾರಣವಾಯಿತು. ಮತಯಂತ್ರಗಳನ್ನು ತಮಗೆ ಬೇಕಾದ ರೀತಿಯಲ್ಲಿ ತಿರುಚಿ ಫಲಿತಾಂಶದ ಲೆಕ್ಕಚಾರವನ್ನೇ ಬದಲಾಯಿಸುವ ಪಟಿಂಗರ ಕೈಚಳಕಕ್ಕೆ ತಡೆಹಾಕಲು, ಮತ್ತೆ ಮತಪತ್ರಗಳ ಪದ್ಧತಿಯನ್ನೇ ಜಾರಿಗೆ ತರುವಂತೆ ಕೆಲವರು ಸುಪ್ರೀಂಕೋರ್ಟ್ ಮೆಟ್ಟಿಲನ್ನು ೨೦೧೯ರ ಚುನಾವಣೆ ಸಂದರ್ಭದಲ್ಲಿ ಏರಿದ್ದುಂಟು. ಈಗಲೂ ಅದೇ ರೀತಿಯ ಅಹವಾಲನ್ನು ಮುಂದೆ ಮಾಡಿ ನ್ಯಾಯಾಲಯದ ಮೆಟ್ಟಿಲನ್ನು ಹತ್ತಿರುವವರಿಗೆ ಸಿಕ್ಕಿರುವ ಪರಿಹಾರ ಯಥಾಸ್ಥಿತಿಯೇ ವಿನಃ ಮತಪತ್ರಗಳ ಬಳಕೆಗೆ ಅನುಮತಿ ದೊರಕಿಲ್ಲ.
ಜಗತ್ತಿನ ಹಲವು ದೇಶಗಳಲ್ಲಿ ಮತಪತ್ರಗಳ ಮೂಲಕವೇ ಚುನಾವಣೆ ನಡೆಯುತ್ತಿದೆ. ಮುಂದುವರಿದ ಅನೇಕ ರಾಷ್ಟ್ರಗಳಲ್ಲೂ ಇದೇ ಪದ್ಧತಿ ಜಾರಿಯಾಗಿದೆ. ಹೀಗಿರುವಾಗ ಭಾರತದಲ್ಲಿ ಯಾವ ಪುರುಷಾರ್ಥಕ್ಕಾಗಿ ಮತಯಂತ್ರಗಳ ಬಳಕೆ ಮಾಡಬೇಕು ಎಂಬ ಪ್ರಶ್ನೆಗೆ ಉತ್ತರ ಕೊಡುವುದು ಕಷ್ಟವೇ. ಏಕೆಂದರೆ ಉತ್ತರದ ರೂಪದಲ್ಲಿ ಬರುವ ಸತ್ಯ ಹಾಗೂ ಸತ್ಯದ ಕಥಾನಕವನ್ನ ಆಲಿಸುವುದು ಪ್ರಸ್ತಾಪ ಮಾಡಿರುವವರಿಗೆ ಬೇಕಾಗಿಲ್ಲ. ಅವರಿಗೆ ಬೇಕಾಗಿರುವುದು ವಿವಾದಕ್ಕೆ ಹೊಸತಿರುವು ತಂದುಕೊಡುವ ಆಸೆ ಮಾತ್ರ. ಅನೇಕ ಐಎಎಸ್ ಅಧಿಕಾರಿಗಳು ಕೂಡ ಮತಯಂತ್ರಗಳ ಬಳಕೆಯಲ್ಲಿ ಅಕ್ರಮ ನಡೆಸುವುದು ಅಸಾಧ್ಯ ಎಂಬುದನ್ನು ಖಚಿತ ಮಾಹಿತಿಯೊಂದಿಗೆ ಸಾದರಪಡಿಸುತ್ತಿದ್ದಾರೆ. ತಜ್ಞರು ಕೂಡ ಇದರ ಬಗ್ಗೆ ಖಚಿತ ಸ್ವರೂಪದಲ್ಲಿ ವಿವರಣೆ ನೀಡಿದ್ದಾರೆ. ಸಂಸತ್ತಿನಲ್ಲಿಯೂ ಈ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಆದರೂ ಈ ವಿವಾದದ ಕಾವು ತಗ್ಗಿಲ್ಲ.
ಇದರ ಜೊತೆಗೆ ಎಲ್ಲ ಮತಯಂತ್ರಗಳ ಜೊತೆ ಸ್ಪಷ್ಟೀಕರಣ ಬಯಸುವವರಿಗೆ ವಿವಿ ಪ್ಯಾಟ್ ಸೌಲಭ್ಯದ ಸಾಧನವನ್ನು ಎಲ್ಲ ಮತಗಟ್ಟೆಗಳಲ್ಲಿ ಒದಗಿಸಬೇಕು ಎಂಬುದು ಹೊಸ ಹಕ್ತೊತ್ತಾಯ. ಕಳೆದ ಬಾರಿ ವಿವಿ ಪ್ಯಾಟ್ ಸೌಲಭ್ಯ ಒದಗಿಸುವ ತೀರ್ಮಾನವನ್ನು ಚುನಾವಣಾ ಆಯೋಗ ಕೈಗೊಂಡು ಕೆಲವೆಡೆ ಜಾರಿಗೊಳಿಸಿ ಭಾರತದಂತಹ ಸುಮಾರು ೬೦ ಕೋಟಿ ಮತದಾರರು ಪಾಲ್ಗೊಳ್ಳುವ ಲೋಕಸಭಾ ಚುನಾವಣೆಯಲ್ಲಿ ಮತಯಂತ್ರಗಳ ಜೊತೆ ವಿವಿ ಪ್ಯಾಟ್ ಒದಗಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಪಾಶ್ಚಾತ್ಯ ರಾಷ್ಟ್ರಗಳು ಈ ವಿಚಾರಕ್ಕೆ ಎಲ್ಲದರಲ್ಲೂ ಮಾದರಿ ಅಲ್ಲ.
ಜರ್ಮನಿಯಲ್ಲಿ ವಿವಿ ಪ್ಯಾಟ್ ಸೌಲಭ್ಯ ಇದೆ. ಆ ದೇಶದ ಮತದಾರರ ಸಂಖ್ಯೆ ೬ ಕೋಟಿಯನ್ನು ದಾಟಲಾರದು. ೬ ಕೋಟಿ ಜನರ ನ್ಯಾಯ ೬೦ ಕೋಟಿ ಜನರ ಸಮೂಹಕ್ಕೆ ಅನ್ವಯಿಸಿ ಹೇಳುವುದು ಸತ್ಯ ಪ್ರತಿಪಾದನೆಯ ಮಾರ್ಗವಾಗಲಾರದು. ಇಂತಹ ಜಿಜ್ಞಾಸೆಗೆ ಮಂಗಳ ಹಾಡಲು ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತಜ್ಞರು ಹಾಗೂ ರಾಜಕೀಯ ಪಕ್ಷಗಳ ಸದಸ್ಯತ್ವದ ಸತ್ಯಶೋಧನಾ ಸಮಿತಿ ರಚಿಸಿ ಖಚಿತ ನಿಲುವನ್ನು ಕೈಗೊಳ್ಳವುದು ನಿಜವಾದ ರಾಜಮಾರ್ಗ. ಆದರೆ ಈಗ ಚುನಾವಣೆಯ ಸಮಯ. ಈಗಿನ ಸಂದರ್ಭದಲ್ಲಿ ಅದನ್ನು ಅಳವಡಿಸಲು ಸಕಾಲವಲ್ಲ ಕನಿಷ್ಠ ಪಕ್ಷ ಮುಂದೆ ಬರುವ ಚುನಾವಣೆಗೆ ಅನ್ವಯವಾಗುವ ರೀತಿಯಲ್ಲಿ ಸತ್ಯಶೋಧನಾ ಸಮಿತಿಗಳ ಶಿಫಾರಸು ಜಾರಿಗೆ ತರುವುದು ದೇಶವನ್ನು ವಿಶ್ವಾಸದ ಮಾರ್ಗದಲ್ಲಿ ಒಯ್ಯುವ ಅಸಲಿ ರಾಜಮಾರ್ಗ.