ಮತ್ತೆ ಕೊರೊನಾ ಕರಾಳ ನೆರಳು

Advertisement

ಕೊರೊನಾ ವ್ಯಾಧಿ ಒಂದು ರೀತಿಯ ಮಾಯಾವಿ ರೋಗ. ಒಂದೊಂದು ಋತುವಿನಲ್ಲಿ ಒಂದೊಂದು ವೇಷವನ್ನು ಧರಿಸಿ ಬರುವ ಈ ರೋಗದ ಪರಿಣಾಮ ಏನೆಂಬುದನ್ನು ಅಳೆಯಲು ತಜ್ಞರಿಗೂ ಸಾಧ್ಯವಾಗುತ್ತಿಲ್ಲ.

ಎರಡು ವರ್ಷಗಳ ನಂತರ ದೇಶದಲ್ಲಿ ಮತ್ತೆ ಜೀವರಾಶಿಗಳ ಹಂತಕ ಕೊರೊನಾ ರೋಗದ ಕರಾಳ ನೆರಳು ಹಬ್ಬುತ್ತಿರುವ ಪರಿಣಾಮವಾಗಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ. ೧೯೧೯ರಲ್ಲಿ ಮೊದಲ ಬಾರಿಗೆ ಭುಗಿಲೆದ್ದ ಈ ರೋಗ ಮೂರು ವರ್ಷಗಳ ಕಾಲ ಇಡೀ ಜಗತ್ತನ್ನೇ ನಡುಗಿಸಿ ಲಕ್ಷಾಂತರ ಜೀವಗಳ ನಿರ್ನಾಮ ಮಾಡುವುದರ ಜೊತೆಗೆ ಲೆಕ್ಕಕ್ಕೆ ಸಿಗದ ಕೋಟ್ಯಂತರ ಮೌಲ್ಯದ ನಾನಾ ರೀತಿಯ ನಷ್ಟಗಳಿಗೂ ಕಾರಣವಾಗಿರುವುದನ್ನು ಮರೆಯುವಂತಿಲ್ಲ. ಈ ಭೀಕರ ಅನುಭವ ಇನ್ನೂ ಸಂಪೂರ್ಣವಾಗಿ ಮರೆಯುವ ಮುನ್ನವೇ ಅರಬ್ಬಿ ಸಮುದ್ರಕ್ಕೆ ತಾಗಿಕೊಂಡಿರುವ ಕೇರಳ ರಾಜ್ಯದಲ್ಲಿ ಕಾಣಿಸಿಕೊಂಡ ಈ ಪೀಡುಗಿನ ಪರಿಣಾಮ ಕರ್ನಾಟಕಕ್ಕೂ ತಗುಲಿ ರಾಜಧಾನಿ ಬೆಂಗಳೂರಿನ ಚಾಮರಾಜಪೇಟೆಯ ವ್ಯಕ್ತಿಯೊಬ್ಬರು ಇದೇ ಕಾರಣದಿಂದ ಸತ್ತಿರುವುದು ನಿಜವಾಗಿದ್ದರೆ ನಿಜಕ್ಕೂ ಇದೊಂದು ಗಂಭೀರವಾದ ಬೆಳವಣಿಗೆ. ಹೀಗಾಗಿ ಕೇಂದ್ರ ಸರ್ಕಾರದಿಂದ ಹಿಡಿದು ಬೆಂಗಳೂರು ಮಹಾನಗರ ಪಾಲಿಕೆಯವರೆಗೆ ಎಲ್ಲಾ ಸರ್ಕಾರಗಳ ಆಡಳಿತಾಧಿಕಾರಿಗಳು ಮಾರಣಾಂತಕ ಈ ರೋಗದ ನಿಗ್ರಹಕ್ಕೆ ಹೊಸ ಸೂತ್ರಗಳನ್ನು ರೂಪಿಸಲು ಮುಂದಾಗುತ್ತಿವೆ. ಈ ಸಂದರ್ಭದಲ್ಲಿ ಸಹಜವಾಗಿಯೇ ಸಾರ್ವಜನಿಕರಲ್ಲಿ ಕಳವಳದ ಸ್ಥಿತಿ ತಲೆದೋರುವುದು ಸ್ವಾಭಾವಿಕ. ಆದರೆ ಮೊದಲ ಬಾರಿಗೆ ನಾಲ್ಕು ವರ್ಷಗಳ ಹಿಂದೆ ಎರಗಿದ ಈ ಮಾರಕ ರೋಗದ ಅನುಭವದ ಹಿನ್ನೆಲೆಯಲ್ಲಿ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮನಸ್ಥಿತಿಗೆ ಬರುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ.
ಕೊರೊನಾ ವ್ಯಾಧಿ ಒಂದು ರೀತಿಯ ಮಾಯಾವಿ ರೋಗ. ಒಂದೊಂದು ಋತುವಿನಲ್ಲಿ ಒಂದೊಂದು ವೇಷವನ್ನು ಧರಿಸಿ ಬರುವ ಈ ರೋಗದ ಪರಿಣಾಮ ಏನೆಂಬುದನ್ನು ಅಳೆಯಲು ತಜ್ಞರಿಗೂ ಸಾಧ್ಯವಾಗುತ್ತಿಲ್ಲ. ಮೊದಲ ಬಾರಿಗೆ ಎರಗಿದ ವೈರಾಣುಗಳಲ್ಲಿದ್ದ ಮಾರಕ ಅಂಶ ನಂತರದ ಶ್ರೇಣಿಯ ವೈರಾಣುಗಳಲ್ಲಿ ಕಾಣುತ್ತಿಲ್ಲವೆಂಬುದು ಕೊಂಚ ನೆಮ್ಮದಿ ತರುವ ವಿಚಾರ. ವೈದ್ಯರು ಅಭಿಪ್ರಾಯ ಪಡುವಂತೆ ಈಗಿನ ಕೊರೊನಾ ರೂಪಾಂತರಿ ವ್ಯಾಧಿ ಮಾರಣಾಂತಿಕವಲ್ಲ. ಮೊದಲೇ ಅನಾರೋಗ್ಯ ಸ್ಥಿತಿಯಲ್ಲಿದ್ದು ಹಲವು ರೋಗಗಳಿಂದ ಬಳಲುತ್ತಿದ್ದವರಿಗೆ ಈ ವೈರಾಣುಗಳ ಶಾಖ ತಗುಲಬಹುದು. ಆರೋಗ್ಯವಂತರಿಗೆ ಪ್ರಾಣಭಯವಿಲ್ಲ ಎಂಬುದು ವೈದ್ಯರ ಪ್ರಾಥಮಿಕ ವಿವರಣೆ. ಆದರೂ ಈ ವಿಚಾರವನ್ನು ಲಘುವಾಗಿ ತೆಗೆದುಕೊಳ್ಳುವಂತಿಲ್ಲ. ಕರ್ನಾಟಕದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಈ ಸಂಬಂಧದಲ್ಲಿ ತಜ್ಞರ ಜತೆ ಸತತವಾಗಿ ಸಮಾಲೋಚನೆ ನಡೆಸಿ ಜನರ ನೆಮ್ಮದಿಯ ಬದುಕಿಗೆ ಸೂತ್ರಗಳನ್ನು ರೂಪಿಸಲು ಮುಂದಾಗಿರುವುದು ಸಮಾಧಾನದ ಸಂಗತಿ. ವೈದ್ಯರ ಶಿಫಾರಸ್ಸಿನಂತೆ ಸರ್ಕಾರ ರೂಪಿಸಿರುವ ನೀತಿ ಸೂತ್ರದ ಪ್ರಕಾರ ೬೦ ವರ್ಷ ಮೇಲ್ಪಟ್ಟವರೆಲ್ಲ ಮಾಸ್ಕ್ ಧರಿಸುವುದು ಕಡ್ಡಾಯ. ಹಾಗೆಯೇ ಬಸ್ ಪ್ರಯಾಣಿಕರಿಗೂ ಈ ನಿಯಮ ಕಡ್ಡಾಯ. ಸ್ವಯಂ ಪ್ರೇರಣೆ ಸ್ವಾನುಭವದಿಂದ ಸಾರ್ವಜನಿಕರು ಅನುಸರಿಸಬಹುದಾದ ಕ್ರಮವೆಂದರೇ ಆರೋಗ್ಯದ ರಕ್ಷಣೆಗೆ ಅನುಗುಣವಾದ ಜೀವನ ಪದ್ಧತಿಯ ಪಾಲನೆ. ಸ್ವಚ್ಚತೆಗೆ ಆದ್ಯತೆ ಕೊಡುವುದು ಎಲ್ಲರ ಮೊದಲ ಕರ್ತವ್ಯ. ಸರ್ಕಾರವೇ ಎಲ್ಲವನ್ನು ಮಾಡಬೇಕು ಎನ್ನುವ ನಿಲುವನ್ನು ಬದಿಗೊತ್ತಿ `ನಮ್ಮ ಆರೋಗ್ಯ ನಮ್ಮ ಕೈಯಲ್ಲಿ’ ಎಂಬಂತ ನಿಯಮವನ್ನು ಅಳವಡಿಸಿಕೊಂಡರೆ ಈ ಮಾರಾಣಾಂತಿಕ ರೋಗವನ್ನು ಸುಲಭವಾಗಿ ನಿಗ್ರಹಿಸಬಹುದು.
ಈ ಹಿಂದೆಯೂ ಕೂಡಾ ಸರ್ಕಾರ ಈ ರೋಗದ ನಿಗ್ರಹಕ್ಕೆ ನಾನಾ ರೀತಿಯ ಕ್ರಮಗಳನ್ನು ರೂಪಿಸಿ ಹಲವಾರು ಸಂದರ್ಭಗಳಲ್ಲಿ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿತ್ತು. ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಪರದಾಡುವಂತಹ ಸ್ಥಿತಿಯ ಜೊತೆಗೆ ಲಸಿಕೆಯ ಪರೀಕ್ಷೆಗೂ ಊರಿಂದ ಊರಿಗೆ ಅಲೆಯಬೇಕಾಗಿತ್ತು. ರಾಜ್ಯದಲ್ಲಿ ಬಹುತೇಕ ಮಂದಿ ಈಗ ಲಸಿಕೆಯನ್ನು ತೆಗೆದುಕೊಂಡಿದ್ದಾರೆ. ಹೀಗಾಗಿ ಈಗ ಅಂತಹ ಒತ್ತಡ ಎದುರಾಗಲಾರದು. ಆದರೂ ಸಿದ್ಧತೆಗಳ ವಿಚಾರದಲ್ಲಿ ಮುಖನೋಡಿ ಮಣೆ ಹಾಕುವ ನೀತಿಯನ್ನು ಕೈಬಿಟ್ಟು ಎಲ್ಲಾ ಶಂಕಿತರಿಗೂ ಉಚಿತ ಚಿಕಿತ್ಸೆ ದೊರೆಯುವಂತಹ ಸ್ಥಿತಿ ನಿರ್ಮಾಣವಾಗಬೇಕು.
ಕಡೆಯದಾಗಿ ಸಾರ್ವಜನಿಕರು ಯಾವುದೇ ಕಾರಣಕ್ಕೆ ಹೆದರಿ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬಾರದು. ಅಂತೆ ಕಂತೆಗಳ ಸುದ್ದಿಗಳಿಗೆ ಹಾಗೂ ಕಟ್ಟು ಕಥೆಗಳಿಗೆ ಕಂಗೆಟ್ಟು ಭಯಭೀತರಾಗಬಾರದು. ಈಸಬೇಕು ಇದ್ದು ಜಯಿಸಬೇಕು ಎಂಬುದು ಜೀವನ ಮಂತ್ರವಾದರೆ ಆಗ ಕೊರೊನಾ ರೋಗ ಉತ್ತರಕುಮಾರನ ಪೌರುಷದಂತೆ ಪರಾರಿಯಾಗದೇ ಬೇರೆ ಮಾರ್ಗ ಇರಲಾರದು.