ಮಂಡ್ಯಕ್ಕೆ ಕಡೆಗೂ ಬರಲೇ ಇಲ್ಲ ಸೊಸೆ

Advertisement

ರಾಜು ಮಳವಳ್ಳಿ
ಮಂಡ್ಯದ ಸೊಸೆ, ಹಾಲಿ ಸಂಸದೆ ಸುಮಲತಾ ಅಂಬರೀಶ್ ಮಂಡ್ಯ ಲೋಕ ಕಣದಲ್ಲಿ ಎನ್‌ಡಿಎ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪರ ಕಡೆಗೂ ಮತಪ್ರಚಾರ ನಡೆಸಲೇ ಇಲ್ಲ..!
ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಬುಧವಾರ ಸುಮಲತಾ ಅವರು ಮಂಡ್ಯದಲ್ಲಿ ಚುನಾವಣಾ ಪ್ರಚಾರ ನಡೆಸುವರೆಂಬ ನಿರೀಕ್ಷೆ ದಟ್ಟವಾಗಿತ್ತಾದರೂ ಸಂಜೆಯ ಹೊತ್ತಿಗೆ ಎಲ್ಲವೂ ಹುಸಿಯಾಗಿದೆ. ಹಠ ಬಿಡದ ಸುಮಲತಾರ ನಡೆ ಹೊಸ ರಾಜಕೀಯ ಆಟಕ್ಕೆ ನಾಂದಿ ಹಾಡುವುದೇ ಎಂಬ ಕುತೂಹಲಕ್ಕೂ ಕಾರಣವಾಗಿದೆ.
೨೦೧೯ರ ಲೋಕ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿ ಬೆಂಬಲದೊಂದಿಗೆ ಸಂಸತ್ ಪ್ರವೇಶಿಸಿದ್ದ ಸುಮಲತಾ ಮರು ಆಯ್ಕೆಗಾಗಿ ಈ ಬಾರಿ ಬಿಜೆಪಿಯಿಂದ ಟಿಕೆಟ್ ಬಯಸಿದ್ದರು. ಎನ್‌ಡಿಎ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಣಕ್ಕಿಳಿಯುವುದರೊಂದಿಗೆ ಸುಮಲತಾರ ಟಿಕೆಟ್ ಹೋರಾಟ ನಿಷ್ಫಲವಾಗಿತ್ತು. ಆನಂತರದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಸುಮಲತಾ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಳ್ಳುತ್ತಿದ್ದಂತೆಯೇ ಸುಮಲತಾ ರಾಜಕೀಯ ಭಿನ್ನಾಭಿಪ್ರಾಯವುಳ್ಳ ಕುಮಾರಸ್ವಾಮಿ ಪರ ಮಂಡ್ಯದಲ್ಲಿ ಮತಪ್ರಚಾರ ನಡೆಸುವರೇ? ಇಲ್ಲವೆ? ಎಂಬ ಪ್ರಶ್ನೆ ಹುಟ್ಟುಕೊಂಡಿತ್ತು.
ಮೊದಲ ಹಂತದ ಲೋಕ ಚುನಾವಣೆಯ ಪ್ರಚಾರದುದ್ದಕ್ಕೂ ಇಂದು ಅಥವಾ ನಾಳೆ ಸುಮಲತಾ ಮಂಡ್ಯದ ಅಖಾಡಕ್ಕೆ ಇಳಿಯುವರೆಂಬ ಮಾತುಗಳು ಕೇಳಿಬಂದಿದ್ದವು. ಬಹಿರಂಗ ಪ್ರಚಾರ ಕೊನೆಗೊಳ್ಳಲಿರುವ ಬುಧವಾರ ಸುಮಲತಾ ಅವರು ಮಂಡ್ಯದಲ್ಲಿ ಪ್ರಚಾರ ನಡೆಸುವರೆಂಬ ಗುಸುಗುಸು ಹಬ್ಬಿತ್ತು. ಆದರೆ, ರಾಜಕೀಯ ಪಡಸಾಲೆಯಲ್ಲಿ ಭುಗಿಲೆದಿದ್ದ ಈ ಕುತೂಹಲಕ್ಕೆ ತೆರೆಬಿದ್ದಿದ್ದು ಸುಮಲತಾ ಕಡೆಗೂ ಮಂಡ್ಯದತ್ತ ಸುಳಿಯಲೇ ಇಲ್ಲ..!
ಏಪ್ರಿಲ್ ೨೧ರಂದು ಮೈಸೂರಿನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಪ್ರಧಾನಿ ಮೋದಿ ಜತೆ ವೇದಿಕೆ ಹಂಚಿಕೊಂಡು ಮೈಸೂರು-ಕೊಡಗು ಕ್ಷೇತ್ರದ ಹುರಿಯಾಳು ಯದುವೀರ್ ಒಡೆಯರ್ ಪರ ಪರೋಕ್ಷವಾಗಿ ಪ್ರಚಾರ ನಡೆಸಿದ್ದ ಸುಮಲತಾ ನೆರೆಜಿಲ್ಲೆ
ಮಂಡ್ಯದತ್ತ ಸುಳಿಯದಿರುವುದು ಈಗಾಗಲೇ ಹಬ್ಬಿದ್ದ ಊಹಾಪೋಹಗಳನ್ನು ಮತ್ತಷ್ಟು ದೃಢೀಕರಿಸಿದೆ. ಒಂದೆಡೆ ಸುಮಲತಾ ಬೆಂಬಲಿಗರಾದ ಇಂಡುವಾಳು ಸಚ್ಚಿದಾನಂದ, ಶಶಿಕುಮಾರ್ ಮತ್ತಿತರರು ಬಹಿರಂಗವಾಗಿಯೇ ಕುಮಾರಸ್ವಾಮಿ ಪರ ಪ್ರಚಾರ ನಡೆಸಿದರೆ, ಮತ್ತೊಂದೆಡೆ ಸುಮಲತಾರ ಮಾನಸಪುತ್ರರೆಂದೇ ಹೆಸರಾದ ನಟ ದರ್ಶನ್ ಮಂಡ್ಯದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡರ ಪರ ಕ್ಷೇತ್ರದ ಹಲವೆಡೆ ಪ್ರಚಾರ ನಡೆಸಿದ್ದು ರಾಜಕೀಯ ವಲಯದಲ್ಲಿ ಬಿತ್ತರಿಸಿರುವ ಸಂದೇಶವೇ ಬೇರೆ..!
ಮಂಡ್ಯವನ್ನು ಲೋಕಸಭೆಯಲ್ಲಿ ಪ್ರತಿನಿಧಿಸಿದ್ದ ಸುಮಲತಾ ಅವರು ಕ್ಷೇತ್ರದಲ್ಲಿ ತಮ್ಮದೇ ಪ್ರಭಾವ-ಬೆಂಬಲಿಗರ ಪಡೆಯನ್ನು ಹೊಂದಿರುವುದು ನಿಜ. ಸುಮಲತಾ ಅವರು ಹಳೆ ಮುನಿಸು ತೊರೆದು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರೆ ಎನ್‌ಡಿಎ ಮೈತ್ರಿಕೂಟಕ್ಕೆ ಅನುಕೂಲವಾಗುತ್ತಿದ್ದುದು ನಿಶ್ಚಿತ. ಮತಗಳ ಗಳಿಕೆಯ ಪ್ರಮಾಣ ಹೆಚ್ಚಾಗುತ್ತಿದ್ದುದು ನಿಜವೇ. ಆದರೆ, ಆಗಿದ್ದೇ ಬೇರೆ. ಮಂಡ್ಯದಲ್ಲಿ ಪ್ರಚಾರ ನಡೆಸುವ ಕುರಿತು ಬಿಜೆಪಿ ವರಿಷ್ಠರ ಸೂಚನೆಯಂತೆ ನಡೆದುಕೊಳ್ಳುತ್ತೇನೆಂದು ಹೇಳಿದ್ದ ಸುಮಲತಾ ಅವರಿಗೆ ಬಿಜೆಪಿ ನಾಯಕರು ಅಂತಹ ಯಾವುದೇ ಸೂಚನೆ ಕೊಡಲಿಲ್ಲವೇ? ಎಂಬ ಪ್ರಶ್ನೆ ಸಹಜ. ಬಿಜೆಪಿ ವರಿಷ್ಠರು ಸೂಚನೆಯೇನೇ ಇರಲಿ. ಸುಮಲತಾ ಮಾತ್ರ ತಮ್ಮ ಹಠ ಬಿಡದೇ ತಟಸ್ಥವಾಗಿ ಉಳಿದದ್ದು ಮಂಡ್ಯದ ಪಾಲಿಗೆ ಅಚ್ಚರಿಯ ನಡೆ. ಅಷ್ಟಕ್ಕೂ ಸುಮಲತಾ ಅವರಷ್ಟೇ ಅಲ್ಲದೆ, ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಬಿಟ್ಟರೆ ಬರ‍್ಯಾವ ಬಿಜೆಪಿ ನಾಯಕರು ಮಂಡ್ಯದತ್ತ ಸುಳಿದೇ ಇಲ್ಲ..!
ಎಚ್ಡಿಕೆ ನಾಮಪತ್ರ ಸಲ್ಲಿಕೆ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆಗಿದ್ದು ಸಮಾವೇಶದಲ್ಲಿ ಪಾಲ್ಗೊಂಡಿದ್ದು ಆನಂತರ ಕೆ.ಆರ್.ಪೇಟೆಗೆ ಬಂದಿದ್ದು ಬಿಟ್ಟರೆ ಮತ್ತೆ ಮಂಡ್ಯದತ್ತ ಬಂದೇ ಇಲ್ಲ. ಪರಿಣಾಮ ಮೇಲ್ನೋಟಕ್ಕೆ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದರೂ ಮಂಡ್ಯ ಚುನಾವಣಾ ಕಣದಲ್ಲಿ ಎಚ್ಡಿಕೆ ಏಕಾಂಗಿಯಾಗಿ ಪ್ರಚಾರ ನಡೆಸಿದ್ದು ಫಲಿತಾಂಶವೂ ಅವರ ವರ್ಚಸ್ಸಿನ ಮೇಲೆಯೇ ಅವಲಂಬಿತವಾಗಿರುವುದು ಸುಸ್ಪಷ್ಟ.