ಬಿಜೆಪಿ ೨೮ ಸ್ಥಾನ ಗೆದ್ದರೆ ತಿಂಗಳಲ್ಲಿ ರಾಜ್ಯ ಸರ್ಕಾರ ಮನೆಗೆ

Advertisement

ಕೋಲಾರ: ರಾಜ್ಯದಲ್ಲಿ ೨೮ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ ಈ ಸರ್ಕಾರವನ್ನು ಒಂದು ತಿಂಗಳಲ್ಲಿ ಮನೆಗೆ ಕಳುಹಿಸುವ ಗ್ಯಾರೆಂಟಿ ನಾವು ಕೊಡುತ್ತೇವೆ. ಕಾಂಗ್ರೆಸ್‌ನ ಐದು ಗ್ಯಾರೆಂಟಿಗೆ ನಮ್ಮದು ಒಂದೇ ಗ್ಯಾರೆಂಟಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಬಿಜೆಪಿ ವತಿಯಿಂದ ಕೋಲಾರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯ ಸರ್ಕಾರ ಅನ್ನಭಾಗ್ಯದ ಬಗ್ಗೆ ಮಾತನಾಡುತ್ತದೆ. ಆದರೆ, ಅನ್ನ ಕೊಡುವಂತ ರೈತನ ಬಗ್ಗೆ ಯಾವುದೇ ರೀತಿಯ ಕಾಳಜಿ ಇಲ್ಲ. ಗ್ಯಾರೆಂಟಿಗಳ ಬಗ್ಗೆ ಹೇಳಿದ್ದೇ ಹೇಳಿದ್ದು, ಚುನಾವಣೆಗೂ ಮುನ್ನ ೧೦ ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದರು. ಈಗ ಕೊಡುತ್ತಿರುವ ಐದು ಕೆಜಿ ಕೂಡ ಕೇಂದ್ರದಿಂದ ಬರುತ್ತಿದೆ. ಇದು ಜನರಿಗೆ ಮಾಡುತ್ತಿರುವ ಮೋಸ. ಹೊಸ ರೇಷನ್ ಕಾರ್ಡ್ ಕೊಡುತ್ತಿಲ್ಲ. ರೇಷನ್ ಕಾರ್ಡ್ ಇಲ್ಲದಿದ್ದರೆ ಗೃಹ ಲಕ್ಷ್ಮೀ ಇಲ್ಲ ಎಂದು ಹೇಳಿದರು.
೨೦೦ ಯುನಿಟ್ ಫ್ರಿ ವಿದ್ಯುತ್ ಅಂತ ಹೇಳಿದ್ದರು. ಆದರೆ, ರಾಜ್ಯದಲ್ಲಿ ಒಬ್ಬರಿಗೆ ೨೦೦ ಯುನಿಟ್ ವಿದ್ಯುತ್ ನೀಡಿರುವ ದಾಖಲೆ ಇದ್ದರೆ ಕೊಡಿ, ಎಲ್ಲ ಬೆಲೆ ಹೆಚ್ಚಳ ಮಾಡಿದ್ದಾರೆ. ಸಾರಾಯಿ ಬೆಲೆ ಹೆಚ್ಚಳ ಮಾಡಿ, ಅವರ ದುಡ್ಡಿನಿಂದ ಸರ್ಕಾರ ನಡೆಸುತ್ತಿದ್ದಾರೆ. ಗ್ಯಾರೆಂಟಿ ಹೆಸರಿನಲ್ಲಿ ಮೋಸ ಮಾಡುತ್ತಿದ್ದಾರೆ. ಬಸ್‌ನಲ್ಲಿ ವಿದ್ಯಾರ್ಥಿಗಳಿಗೆ ಕೂಡಲು ಸೀಟ್ ಇಲ್ಲ. ಸರ್ಕಾರ ದಿವಾಳಿಯಾಗಿದೆ. ನಾವು ಇದ್ದಾಗ ಸರಪ್ಲಸ್ ಬಜೆಟ್ ನೀಡಿದ್ದೇವು. ಇವರು ಬಂದ ಮೇಲೆ ೮ ಸಾವಿರ ಕೋಟಿ ಹೆಚ್ಚುವರಿ ಸಾಲ ಮಾಡಿದ್ದಾರೆ. ಈಗ ಪ್ರತಿಯೊಬ್ಬರ ತಲೆಯ ಮೇಲೆ ಒಂದು ಲಕ್ಷ ರೂ. ಸಾಲ ಇದೆ. ಅಧಿಕಾರಿಗಳ ವರ್ಗಾವಣೆ ಹರಾಜು ಆಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಪೊಲಿಸರು ಹಣ ಕೊಟ್ಟು ಬಂದಿರುವುದರಿಂದ ಅವರು ಹಣ ವಸೂಲಿಗೆ ನಿಂತಿದ್ದಾರೆ. ದಲಿತ ಮಹಿಳೆಯನ್ನು ಬೆತ್ತಲೆ ಮಾಡಲಾಗಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ನೀಡಲಿಲ್ಲ. ಅಲ್ಪ ಸಂಖ್ಯಾತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದರೂ ಅದೇ ಜಿಲ್ಲೆಗೆ ಭೇಟಿ ನೀಡಿದರೂ, ಅವಳಿಗೆ ಸಿಎಂ ಸಾಂತ್ವನ ಕೂಡ ಹೇಳಲಿಲ್ಲ. ಇದೇನಾ ಇವರ ಅಲ್ಪ ಸಂಖ್ಯಾತ, ದಲಿತರಿಗೆ ಕೊಡುವ ಗೌರವ ಎಂದು ಪ್ರಶ್ನಿಸಿದರು.
ಹಿಂದುಳಿದವರ ಸಮಾವೇಶ ಮಾಡುತ್ತಾರೆ. ಅವರಿಗೆ ಏನು ಕೊಟ್ಟಿದ್ದೇವೆ ಎಂದು ಹೇಳುವುದಿಲ್ಲ. ನಾವು ಎಸ್ಸಿ ಎಸ್ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿದ್ದೇವೆ. ದಲಿತರಿಗೆ ಮೀಸಲಿಟ್ಟಿದ್ದ ಹಣವನ್ನು ಇವರು ಗ್ಯಾರೆಂಟಿಗಳಿಗೆ ನೀಡಿದ್ದಾರೆ. ಇವರು ದಲಿತರಿಗೆ ಅನ್ಯಾಯ ಮಾಡಿದ್ದಾರೆ. ದಲಿತ ನಾಯಕರಾದ ಬಸಲಿಂಗಪ್ಪ, ಖರ್ಗೆಯವರನ್ನು ಸಿಎಂ ಮಾಡಲಿಲ್ಲ. ದಲಿತರ ವಿರೋಧಿ ಇರುವ, ಜನಸಾಮಾನ್ಯರ ವಿರೋಧಿಯಾಗಿರುವ ಈ ಸರ್ಕಾರ ಕಿತ್ತು ಹಾಕಬೇಕೆಂದರೆ ಬರುವಂಥ ಲೋಕಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಬಾವುಟ ಹಾರಿಸಬೇಕು.
ಪ್ರಧಾನಿ ನರೇಂದ್ರ ಮೋದಿಯವರ ಗ್ಯಾರೆಂಟಿ ಶಾಸ್ವತವಾದ ಮನೆ, ಶೌಚಾಲಯ, ಉಜ್ವಲಾ, ಮುದ್ರಾ ಯೋಜನೆ, ಬೀದಿ ಬದಿ ವ್ಯಾಪಾರಿಗಳಿಗೆ ಹಣಕಾಸಿನ ನೆರವು, ಕುಡಿಯುವ ನೀರು ಒದಗಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೋಲಾರಕ್ಕೆ ಕೆಸಿ ವ್ಯಾಲಿ ಯೋಜನೆ ಮಾಡಿ, ಕೊಳಚೆ ನೀರನ್ನು ಕೆರೆಗೆ ತುಂಬಿಸಿ, ಅಂತರ್ಜಲ ಸಂಪೂರ್ಣ ವಿಷವಾಗಿದ್ದು, ಜನರಿಗೆ ಕುಡಿಯಲು ಜಮೀನಿಗೂ ಬಳಕೆ ಮಾಡಲು ಬರುತ್ತಿಲ್ಲ. ಕೆಸಿ ವ್ಯಾಲಿ ಮಾಡಿ ಕೋಲಾರ ಜಿಲ್ಲೆಗೆ ಶಾಸ್ವತವಾಗಿ ತೊಂದರೆ ಮಾಡಿರುವ ಕಾಂಗ್ರೆಸ್ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ನಾನು ಸಿಎಂ ಆಗಿದ್ದಾಗ ಕೇವಲ ಮೂರು ವರ್ಷದಲ್ಲಿ ೩೦ ಲಕ್ಷ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಇದೇ ನರೇಂದ್ರ ಮೋದಿಯವರ ಗ್ಯಾರೆಂಟಿ, ಭಾರತವನ್ನು ಸುಭದ್ರವಾಗಿಡುವ ಕೆಲಸವನ್ನು ಮೋದಿ ಸರ್ಕಾರ ಮಾಡುತ್ತಿದೆ. ಈ ಸರ್ಕಾರ ದಪ್ಪ ಚರ್ಮದ ಸರ್ಕಾರ. ಈ ಸರ್ಕಾರವನ್ನು ತೊಲಗಿಸಲು ರೈತರು ಬಾರಕೋಲ ತೆಗೆದುಕೊಂಡು ಓಡಿಸಬೇಕು ಎಂದು ಹೇಳಿದರು.