ಬಿಜೆಪಿಯ ಒಬ್ಬ ದೇಶಕ್ಕಾಗಿ ಹುತಾತ್ಮರಾಗಿದ್ರೆ ತೋರಿಸಿ, ನಾನು ರಾಜಕೀಯ ಬಿಟ್ಟು ಬಿಡ್ತೀನಿ

ಸಿದ್ದು
Advertisement

ನಂಜನಗೂಡು: ಬಾಂಡ್ ಮೂಲಕ ನೀವು ಸಂಗ್ರಹಿಸಿದ 7,600 ಕೋಟಿ ಹಣಕ್ಕೆ ತೆರಿಗೆ ಕಟ್ಟಿದ್ದೀರಾ ಮೋದಿಯವರೇ? ಈಗ ಯಾರನ್ನು ಜೈಲಿಗೆ ಕಳುಹಿಸಬೇಕು ಮೋದಿಯವರೇ ಹೇಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರು.
ಚಾಮರಾಜನಗರ ಲೋಕಾಭಾ ಕ್ಷೇತ್ರದ ನಂಜನಗೂಡಿನಲ್ಲಿ ನಡೆದ ಬೃಹತ್ ಜನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಭ್ರಷ್ಟರನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಮೋದಿಯವರು ನೆನ್ನೆ ಭಾಷಣ ಮಾಡಿದ್ದಾರೆ. ಆದರೆ ದೇಶದಲ್ಲಿದ್ದ ಭ್ರಷ್ಟರೆಲ್ಲಾ ಈಗ ಯಾವ ಪಕ್ಷದಲ್ಲಿದ್ದಾರೆ ಮೋದಿಯವರೇ ಎಂದು ಮತ್ತೊಂದು ಪ್ರಶ್ನೆ ಹಾಕಿದರು.
ಐಟಿ, ಸಿಬಿಐ ದುರುಪಯೋಗ ಪಡೆಸಿಕೊಂಡು ಇಬ್ಬರು ಮುಖ್ಯಮಂತ್ರಿಗಳಾದ ಕೇಜ್ರಿವಾಲ್ ಮತ್ತು ಹೇಮಂತ್ ಸುರೇನ್ ಅವರನ್ನು ಜೈಲಿಗೆ ಕಳುಹಿಸಿದ ಮೋದಿಯವರೇ BJP ಸಂಗ್ರಹಿಸಿದ 7600 ಕೋಟಿ ಹಣಕ್ಕೆ ಒಂದು ಪೈಸೆ ತೆರಿಗೆ ಕಟ್ಟಿಲ್ಲವಲ್ಲಾ ಈ ಹಗರಣಕ್ಕಾಗಿ ಯಾರನ್ನು ಜೈಲಿಗೆ ಕಳುಹಿಸಬೇಕು ಹೇಳಿ ಎಂದು ಮೋದಿಯವರನ್ನು ಪ್ರಶ್ನಿಸಿದರು.
ಮೋದಿಯವರಾಗಲೀ, ಬಿಜೆಪಿಯವರಾಗಲೀ ಇವತ್ತಿನವರೆಗೂ ಯುವಕರು, ಉದ್ಯೋಗ, ಮಹಿಳೆಯರು, ಶೂದ್ರರು, ದಲಿತರು, ಶ್ರಮಿಕರು, ದುಡಿಯುವವರ ಪರವಾಗಿ ಇವತ್ತಿನವರೆಗೂ ಒಂದೂ ಸರಿಯಾದ ಕಾರ್ಯಕ್ರಮ ಮಾಡಲಿಲ್ಲವಲ್ಲಾ ಇದೇನಾ ಅಚ್ಛೆ ದಿನ್ ಎಂದು ಪ್ರಶ್ನಿಸಿದರು.
ಡೀಸೆಲ್, ಪೆಟ್ರೋಲ್, ಗ್ಯಾಸ್, ರಸಗೊಬ್ಬರ, ಬೇಳೆ ಕಾಳು, ಅಡುಗೆ ಎಣ್ಣೆ ಬೆಲೆ ಆಕಾಶಕ್ಕೆ ಏರಿಸಿದ್ದೀರಲ್ಲಾ ಮೋದಿಯವರೇ? ಇದಾ ನಿಮ್ಮ ಅಭಿವೃದ್ಧಿ ಎನ್ನುತ್ತಾ ಪ್ರಧಾನಿ ಮೋದಿಯವರ ಸಾಲು ಸಾಲು ಸುಳ್ಳುಗಳನ್ನು ಪಟ್ಟಿ ಮಾಡಿ ಪ್ರಶ್ನಿಸಿದರು.

ನೀವು ದೇಶ ಭಕ್ತರಾ? ಮುಖ ನೋಡಿಕೊಳ್ಳಿ
ನೀವು ದೇಶಭಕ್ತರಾಗಿದ್ರೆ, ಭಾರತ ಮಾತೆ ಬಗ್ಗೆ ಪ್ರೀತಿ ಇದ್ದಿದ್ರೆ ನೀವೇಕೆ ದೇಶದ ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಲಿಲ್ಲ? ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ನಮ್ಮ ಕಾಂಗ್ರೆಸ್ ಪಕ್ಷ. ಬ್ರಿಟೀಷರ ವಿರುದ್ಧ ಹೋರಾಟ ಮಾಡಿ ಹುತಾತ್ಮರಾದ ಸಂಘ ಪರಿವಾರದ ಒಬ್ಬೇ ಒಬ್ಬನನ್ನು, ಬಿಜೆಪಿಯ ಒಬ್ಬ ದೇಶಕ್ಕಾಗಿ ಹುತಾತ್ಮರಾಗಿದ್ರೆ ತೋರಿಸಿ, ನಾನು ರಾಜಕೀಯ ಬಿಟ್ಟು ಬಿಡ್ತೀನಿ ಎಂದು ಸಿ.ಎಂ. ನೇರ ಸವಾಲು ಹಾಕಿದರು. ದೇಶಕ್ಕಾಗಿ ಏನೇನೂ ಮಾಡದವರಿಂದ ನಾವು ದೇಶಭಕ್ತಿ ಪಾಠ ಕಲಿಯಬೇಕಾ ಎಂದು ಪ್ರಶ್ನಿಸಿದರು.