ಪ್ರಧಾನಿ ಮೋದಿ ಟೀಕಿಸುವುದು ಫ್ಯಾಷನ್

ಆರ್‌ಎಸ್ಎಸ್
Advertisement

ಹಾವೇರಿ: ನಮ್ಮ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವುದು ರಾಜಕಾರಣದ ಫ್ಯಾಷನ್ ಆಗಿದೆ. ಕಾಂಗ್ರೆಸ್‌ಗೆ ಮೋದಿ ಫೋಬಿಯಾ ಶುರುವಾಗಿದೆ‌ ಮೋದಿ ಟೀಕಿಸಿದರೆ ತಮ್ಮ ಪ್ರಚಾರ ಹೆಚ್ಚಾಗುತ್ತದೆ ಎಂದು ಕೊಂಡಿದ್ದಾರೆ. ಆದರೆ, ಮೋದಿಯವರನ್ನು ಟೀಕಿಸಿದಷ್ಟು ಮೋದಿಯವರ ವರ್ಚಸ್ಸು ಹೆಚ್ಚಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿಯಲ್ಲಿಂದು ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರ ಆಸ್ತಿ ಹಂಚಿಕೆ ಮಾಡುತ್ತೇವೆ ಎಂದು ಕಾಂಗ್ರೆಸ್‌ನವರು ಹೇಳಿದ್ದಾರೆ. ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ ಸರ್ವೆ ಮಾಡುತ್ತೇವೆ ಅಂತ ಹೇಳುತ್ತಿದ್ದಾರೆ. ಮೊದಲು ಕಾಂಗ್ರೆಸ್ ಪಕ್ಷದ ನಾಯಕರ ಬೇನಾಮಿ ಆಸ್ತಿ ಸರ್ವೆ ಆಗಬೇಕು. ನಮ್ಮ ಉಪ ಮುಖ್ಯಮಂತ್ರಿಗಳು ಬಹಳ ಹುಷಾರಿದ್ದಾರೆ. ಶಾಮ್ ಪಿತ್ರೊಡಾ ಹೇಳಿಕೆಗೂ ಪಕ್ಚಕ್ಕೂ ಸಂಬಂಧ ಇಲ್ಲ ಅಂತ ಹೇಳಿದ್ದಾರೆ ಎಂದರು.
ಇನ್ನು ಉದ್ಯಮಿಗಳಾದ ಅದಾನಿ ಅಂಬಾನಿಯನ್ನು ಕಾಂಗ್ರೆಸ್‌ನವರೇ ಬೆಳೆಸಿದ್ದಾರೆ. 1980ರ ದಶಕದಲ್ಲಿ ಯಾರು ಪ್ರಧಾನಿಯಾಗಿದ್ದರು. ಮನಮೋಹನ್ ಸಿಂಗ್ ಅವರು ಉದಾರಿಕರಣ, ಖಾಸಗೀಕರಣ ಮಾಡಿದರು. ಅದರ ಪರಿಣಾಮ ಖಾಸಗಿಯವರು ಶ್ರೀಮಂತರಾಗಿದ್ದಾರೆ.
ಯಾವಾಗ ತಳ ಹಂತದ ಜನರ ಆದಾಯ ಹೆಚ್ಚಳವಾಗುತ್ತದೆ ಆಗ ದೇಶ ಶ್ರೀಮಂತವಾಗುತ್ತದೆ. ಮೋದಿಯವರ ಅವಧಿಯಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಯುವಕರು ಕೊಟ್ಯಾದೀಶರಾಗಿದ್ದಾರೆ. 25 ಕೋಟಿ ಜನರ ಬಡತನ ನಿರ್ಮೂಲನೆ ಮಾಡಿ ಬಡವರನ್ನು ಶ್ರೀಮಂತರನ್ನಾಗಿ ಪ್ರಧಾನಿ ಮೋದಿ ಮಾಡಿದ್ದಾರೆ. ಶೇ 6.6 ಆರ್ಥಿಕ ಅಭಿವೃದ್ಧಿ ಆಗಿದೆ. ಬೇರೆ ಯಾವುದೇ ದೇಶ ಇಷ್ಟು ಅಭಿವೃದ್ಧಿಯಾಗುತ್ತಿಲ್ಲ ಎಂದು ಹೇಳಿದರು.
ಕೇಂದ್ರ ಸರ್ಕಾರ ಪರಿಹಾರ ನೀಡುವಲ್ಲಿ ವಿಳಂಬ ಮಾಡಿತು ಎನ್ನುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರ ಕೊಡುವ ವರದಿಗೂ ಕೇಂದ್ರದ ವರದಿಗೂ ವ್ಯತ್ಯಾಸ ಆದಾಗ ಅದನ್ನು ಪರಿಶಿಲನೆ ಮಾಡಲು ಸಮಯ ತೆಗೆದುಕೊಳ್ಳಬೇಕು. ಆಡಳಿತ ಪಕ್ಷ ಸರಿಯಾಗಿ ವರದಿ ಕೊಟ್ಟಿಲ್ಲ ಎಂದರು.