ಪ್ರತ್ಯೇಕ ಹಾಲು ಒಕ್ಕೂಟ ತಂದೇ ತರುತ್ತೇನೆ

Advertisement

ಬೆಂಗಳೂರು: ರಾಜಕೀಯ ಹೋರಾಟವಾದರೂ ಸರಿ ಚಿಕ್ಕಬಳ್ಳಾಪುರಕ್ಕೆ ಮತ್ತೂಮ್ಮೆ ಪ್ರತ್ಯೇಕ ಹಾಲು ಒಕ್ಕೂಟ ತಂದೇ ತರುತ್ತೇನೆ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್‌ ಮಾಡಿರುವ ಅವರು ಚಿಕ್ಕಬಳ್ಳಾಪುರದಲ್ಲಿ ಇಂದು ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು, ಸದಸ್ಯರು ಹಾಗೂ ಮುಖಂಡರೊಂದಿಗೆ ಸಭೆ ನಡೆಸಿ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಮರಳಿ ಪಡೆಯಲು ನಡೆಸಬೇಕಾದ ಹೋರಾಟದ ರೂಪುರೇಷೆಗಳು ಹಾಗೂ ಜಿಲ್ಲೆಯಲ್ಲಿ ಹೈನುಗಾರಿಕೆ ಇನ್ನಷ್ಟು ಅಭಿವೃದ್ಧಿ ಮಾಡಲು ಇಡಬೇಕಾದ ಹೆಜ್ಜೆಗಳು ಬಗ್ಗೆ ಚರ್ಚಿಸಲಾಯಿತು. ರಾಜ್ಯದಲ್ಲಿ ಹಾಲು ಉತ್ಪಾದನೆ ಮಾಡುವ ಪ್ರಮುಖ ಜಿಲ್ಲೆಗಳಲ್ಲಿ ಚಿಕ್ಕಬಳ್ಳಾಪುರ ಮುಂಚೂಣಿಯಲ್ಲಿದ್ದು ಹೈನುಗಾರಿಕೆಯಿಂದಲೇ ಲಕ್ಷಾಂತರ ರೈತ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಜಿಲ್ಲೆಯಲ್ಲಿ ಒಟ್ಟು ಸುಮಾರು 1.75 ಲಕ್ಷ ರಾಸುಗಳಿದ್ದು ಜಿಲ್ಲೆಯ ಐದು ತಾಲ್ಲೂಕುಗಳಿಂದ ಪ್ರತಿನಿತ್ಯ ಸುಮಾರು 5 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತದೆ. ಆಡಳಿತಾತ್ಮಕ ದೃಷ್ಟಿಯಿಂದ, ಜಿಲ್ಲೆಯ ರೈತರ ಹಿತಾಸಕ್ತಿ ಕಾಪಾಡಲು ಪ್ರತ್ಯೇಕ ಹಾಲು ಒಕ್ಕೂಟ ಅಗತ್ಯವಿದೆ ಎಂದು ಹೋರಾಟ ಮಾಡಿ, ಅಂದಿನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಸಂಪುಟದ ಸದಸ್ಯರನ್ನು ಮನವೊಲಿಸಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ತರುವಲ್ಲಿ ಯಶಸ್ವಿಯಾಗಿದ್ದೆ. ಆದರೆ ಕಾಂಗ್ರೆಸ್ ಸರ್ಕಾರ ಬಂದ ತಕ್ಷಣ ಬಿಜೆಪಿ ಸರ್ಕಾರದ ಆದೇಶವನ್ನು ಏಕಾಏಕಿ ರದ್ದು ಮಾಡಿ ಜಿಲ್ಲೆಯ ರೈತರ ಹಕ್ಕು ಕಸಿದುಕೊಳ್ಳುವ ಪಾಪದ ಕೆಲಸ ಮಾಡಿದೆ. ಇತ್ತೀಚಿನ ನೇಮಕಾತಿ ಹಗರಣ, ಅಕ್ರಮ ಟೆಂಡರ್ ಗಮನಿಸಿದರೆ, ಪ್ರತ್ಯೇಕ ಒಕ್ಕೂಟವನ್ನ ವಿರೋಧಿಸುವ ಕಾಣದ ಕೈಗಳು ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ದುರುದ್ದೇಶ ಏನೆಂದು ಅರ್ಥವಾಗುತ್ತಿದೆ. ನನ್ನ ಮೇಲಿನ ಸೇಡಿಗೆ ಚಿಕ್ಕಬಳ್ಳಾಪುರದ ರೈತರಿಗೆ ಅನ್ಯಾಯ ಮಾಡಿರುವ ಕಾಂಗ್ರೆಸ್ ಪಕ್ಷಕ್ಕೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ರೈತರು ತಕ್ಕ ಪಾಠ ಕಲಿಸಲಿದ್ದಾರೆ. ಏನೇ ಆಗಲಿ, ಅದು ಕಾನೂನು ಹೋರಾಟವಾದರೂ ಸರಿ, ರಾಜಕೀಯ ಹೋರಾಟವಾದರೂ ಸರಿ ಚಿಕ್ಕಬಳ್ಳಾಪುರಕ್ಕೆ ಮತ್ತೂಮ್ಮೆ ಪ್ರತ್ಯೇಕ ಹಾಲು ಒಕ್ಕೂಟ ತಂದೇ ತರುತ್ತೇನೆ.