ಪ್ಯಾನಲ್ ಡಿಸ್ಕಷನ್ ನಮ್ಮಲ್ಲಿ ಮಾತ್ರ…..

Advertisement

ಇದು ಚುನಾವಣೆ ಸಮಯ. ಈಗ ಬಿಟ್ಟರೆ ಮತ್ಯಾವಗಲೂ ಇಂಥ ಚಾನ್ಸ್ ಸಿಗುವುದಿಲ್ಲ ಎಂದು ಕಿವುಡನುಮಿ ಅವರಿವರ ಕೈಕಾಲು ಹಿಡಿದುಕೊಂಡು ಸೋದಿಮಾಮಾ.. ಮದ್ರಾಮಣ್ಣ… ಪಂ. ಲೇವೇಗೌಡರು.. ಕ್ರೇಜಿ ಬಾಯ್… ಸಮತಾದೀದಿ ಅವರನ್ನು ತನ್ನ ಚಾನಲ್‌ನಲ್ಲಿ ಡಿಸ್ಕಷನ್‌ಗೆ ಬರುವಂತೆ ವಿನಂತಿಸಿದಳು. ಅವರೆಲ್ಲ. ಆಕೆಯ ವಿನಂತಿಗೆ ಒಲ್ಲೆ ಅನ್ನದೇ ಎಸ್…ಎಸ್ ಅಂದರು. ದಿನಾಂಕ…ಸಮಯ ಫಿಕ್ಸಾಯಿತು. ಎಂಟಾನೆಂಟು ದಿನ ಗಂಟಲು ಹರಿಯುವ ಹಾಗೆ…ಕೇವಲ ನಮ್ಮಲ್ಲಿ ಮಾತ್ರ ಇಂಥ ದಿನ ಇಂಥ ಟೈಮಿಗೆ…ದೇಶದ ದಿಗ್ಗಜರ ಡಿಸ್ಕಷನ್ ಇದೆ…ನೋಡಲು ಮರೆಯದಿರಿ…ಮರೆತು ಬೇಸರವಾಗದಿರಿ ಎಂದು ಹಲುಬುತ್ತಿದ್ದಳು. ಜನರೂ ಸಹ ಕುತೂಹಲದಿಂದ ಆ ದಿನ..ಆ ಸಮಯಕ್ಕಾಗಿ ಕಾಯುತ್ತಿದ್ದಳು. ಅಂತೂ ಆ ದಿನ ಬಂತು. ಕಿವುಡನುಮಿ ಮಸ್ತ್ ರೆಡಿಯಾಗಿ ಕುಳಿತುಕೊಂಡು…ಪ್ರಿಯ ವೀಕ್ಸಕರೇ..ಹಿನ್ನೇನು ಅಂಥ ಸಮಯ ಹೀಗ ಬಂದಿದೆ…ಅವರು ಆಗಲೇ ಸಿಟಿ ಬಸ್ಸು ಹತ್ತಿದ್ದಾರೆ…ಬಂದು ಬಿಡ್ತಾರೆ ಎಂದು ಹೇಳುತ್ತಿದ್ದಳು. ಸ್ವಲ್ಪ ಹೊತ್ತಿನ ನಂತರ ಮದ್ರಾಮಣ್ಣೋರು ಬಂದು ಎಂಗೆ ಇದಿಯವ್ವ ಅನ್ಮವ್ವ ಅನ್ನುತ್ತಲೇ ಕುರ್ಚಿಯ ಮೇಲೆ ಕುಳಿತರು. ಅದಾದ ಐದು ನಿಮಿಷಕ್ಕೆ ಪಂ. ಲೇವೇಗೌಡರು ಬಂದರು. ಅವರನ್ನು ಕುರ್ಚಿಯ ಮೇಲೆ ಕೂಡಿಸಿ ವೀಕ್ಸಕರೇ ಇನ್ನೇನು ಸೋದಿ ಮಾಮಾ ಬರ್ತಾರೆ… ಸಿಟಿ ಬಸ್ಸಿನಲ್ಲೇನೋ ತಕರಾರು ಇರಬೇಕು ಅಂದಳು. ಅದಾದ ನಂತರ ಸಮತಾ ದೀದಿ ಬಂದರು. ಕಿವುಡನುಮಿ ಎದುರಿಗೆ ಹೋಗಿ ನಮಸ್ಕಾರ ಅಂತಿದ್ದಂತೇ…ಛೀ..ಛೀ ಏನಿದು ಬಿಸಿಲೂ…ಮೊದಲೇ ಹೇಳಿದ್ದರೆ ನಾನು ಬರುತ್ತಿರಲಿಲ್ಲ. ತಣ್ಣನೆ ನೀರುಕೊಡಿ ಎಂದು ಜಬರಿಸಿದಳು. ಇರಲಿ..ಇರಲಿ ಅನ್ನುತ್ತ ನೀರು ಕೊಟ್ಟು ಅವರನ್ನು ಕುರ್ಚಿಯ ಮೇಲೆ ಕೂಡಿಸಿದಳು. ಆಗಲೇ ಸಮಯವಾಗುತ್ತಿತ್ತು. ಚಡಪಡಿಸುತ್ತಿದ್ದ ಕಿವುಡನುಮಿ ಅಗೋ ಬಂದೇ ಬಿಟ್ಟರು…ಬಂದೇ ಬಿಟ್ಟರು ಸೋದಿ ಮಾಮಾ ಬಂದೇ ಬಿಟ್ಟರು ಎಂದು ಜಿಗಿದಾಡಿ…ಅವರನ್ನು ಕರೆದುಕೊಂಡು ಬಂದು ಕುರ್ಚಿಯ ಮೇಲೆ ಕೂಡಿಸಿ..ಕ್ರೇಜಿ ಬಾಯ್ ಒಂದು ಬರಬೇಕು ಅಂದಳು. ಅವನೆಲ್ಲಿ ಬರ್ತಾನಮ್ಮ….ನಾ ಹೊರಗೆ ಬಿಡಬೇಡ ಅಂತ ಹೇಳೀನಿ ಎಂದು ಸೋದಿ ಮಾಮಾ ಅಂದರು. ಅದಕ್ಕೆ ಮದ್ರಾಮಣ್ಣ…ಓಓ…ಬರೀ ಇದೇ ಆಯ್ತು ನಿಮದು ಅಂದಾಗ…ಪಂ.ಲೇವೇಗೌಡರು..ಅದರಲ್ಲಿ ತಪ್ಪೇನು ಅಂದರು. ನೀವು ಸುಮ್ಗಿರಿ…ಈಗ ಅವರೋ ಅಂತ ಮದ್ರಾಮಣ್ಣ ಹೇಳುತ್ತಲೇ….ಹೌದೌದು ನೀವೆಲ್ಲ ಅವರೇ ಇದೀರಿ ನಂಗೆ ಗೊತ್ತಾಯ್ತು ಎಂದು ಅಮತಾ ದೀದಿ ಎದ್ದು ನಿಂತಳು…ದೇಖಿಯೇ ಎಂದು ಸೋದಿಮಾಮಾ ಎದ್ದು ನಿಲ್ಲುತ್ತಿದ್ದಂತೆ. ನಮಗೆ ದೇಖ್..ದೇಕೆ ಸಾಕಾಗಿದೆ ಎಂದು ಮದ್ರಾಮಣ್ಣೋರು ಎದ್ದು ನಿಂತರು…ಲೇವೇಗೌಡರು…ನಿಮಗೇನು ಬುದ್ಧಿ ಇದೆಯೇನ್ರಿ? ಅಂತ ಅವರೂ ಟೇಬಲ್ ಕುಟ್ಟಿ ನಿಂತರು…ಸಮತಾದೀದಿ…ಏನ್ರೀ ಈ ಬಿಸಿಲಲ್ಲಿ ತಲೆನೋವು ಬಂತು ನಂಗೆ..ಅಂದಳು. ಕಕ್ಕಾಬಿಕ್ಕಿಯಾದ ಕಿವುಡನುಮಿ ಸುಮ್ನಿರಿ..ಸುಮ್ಕಿರಿ ಅಂತ ಹೇಳಿ…ವೀಕ್ಸಕರೇ ನೋಡಿದ್ರೆಲ್ಲ ಡಿಸ್ಕಷನ್ನು….ಇದು ನಮ್ಮಲ್ಲಿ ಮಾತ್ರ ಎಂದು ಹೇಳಿ ಕೈ ಮುಗಿದಳು. ಡಿಸ್ಕಷನ್‌ಗೆ ಬಂದವರೆಲ್ಲ ಒಂದೇ ಕಾರಿನಲ್ಲಿ ಹೊರಟು ಹೋದರು.