ಪದಾರ್ಥ ಮತ್ತು ಪ್ರಸಾದ

Advertisement

ನೀವು ದೇವಸ್ಥಾನಕ್ಕೆ ಹೊರಟಿರುವಿರಿ. ಬರಿಗೈಯಿಂದ ದೇವಸ್ಥಾನಕ್ಕೆ ಹೋಗಬಾರದೆಂಬ ವಾಡಿಕೆಯಂತೆ ಹಣ್ಣು, ಕಾಯಿ, ಕರ್ಪೂರ ಕೂಡ ನಿಮ್ಮ ಜೊತೆಯಲ್ಲಿದೆ. ದಾರಿಯಲ್ಲಿ ನಿಮ್ಮ ಸ್ನೇಹಿತ ಭೇಟಿಯಾದ. ನಿಮ್ಮನ್ನು ಕಂಡು ಸಂತಸದಿಂದ “ಏನ್ರಿ ಎಲ್ಲಿ ಹೊರಟಿರುವಿರಿ” ಎಂದು ಕೇಳಿದ “ಇಲ್ಲೇ ದೇವಸ್ಥಾನಕ್ಕೆ” ಇದು ನಿಮ್ಮ ಉತ್ತರ. ಕೈಯಲ್ಲಿ ಏನೋ ಹಿಡಿದಂತಿದೆ, ಏನದು? ಮತ್ತೆ ಪ್ರಶ್ನೆ ಮಾಡಿದನವನು. ಆಗ ನೀವು “ಹಣ್ಣು-ಕಾಯಿ, ಕರ್ಪೂರ ಇದೆ. ದೇವರಿಗೆ ಬೇಕಲ್ಲ! ಒಯ್ಯುತ್ತಿರುವೆ” ಎಂದೆನ್ನುವಿರಿ. ಇಷ್ಟಕ್ಕೆ ಸಮಾಧಾನಗೊಳ್ಳದ ಅವನು `ಯಾರದು ಇದೆಲ್ಲ?” ಎಂದು ಕೇಳಿದ ಆಗ ನೀವು ಎದೆ ಮುಟ್ಟಿ “ಇದೆಲ್ಲ ನನ್ನದೇ, ಬರುವಾಗ ಅಂಗಡಿಯಿಂದ ತಂದಿರುವೆ’ ಎನ್ನುವಿರಿ. ಇಷ್ಟಾದ ಮೇಲೆ ಗೆಳೆಯನಿಗೆ ವಿದಾಯ ಹೇಳಿ ದೇವಸ್ಥಾನಕ್ಕೆ ಬಂದು ನೀವು ತಂದ ಪದಾರ್ಥಗಳನ್ನು ಅರ್ಚಕನ ಕೈಯಲ್ಲಿ ಕೊಟ್ಟಾಗ ಅವನು ದೇವರಿಗೆ ಕಾಯಿ ಒಡೆದು ಕರ್ಪೂರ ಬೆಳಗಿ, ಹಣ್ಣು ನೈವೇದ್ಯ ತೋರಿಸಿ ನಿಮಗೆ ಅದರಲ್ಲಿಯ ಕೆಲಭಾಗವನ್ನು ಮರಳಿ ಕೊಡುತ್ತಾನೆ. ಅದನ್ನು ಕೈಯಲ್ಲಿ ಹಿಡಿದು ಮನೆಯ ದಾರಿ ಹಿಡಿಯುತ್ತೀರಿ. ಮಾರ್ಗಮಧ್ಯದಲ್ಲಿ ಆ ಗೆಳೆಯ ಇನ್ನೂ ನಿಂತೆ ಇದ್ದ, ನಿಮ್ಮನ್ನು ನೋಡಿ “ಎಷ್ಟು ಬೇಗ ದೇವಸ್ಥಾನದಿಂದ ಬಂದ್ರೀ! ಇರಲಿ ಈಗಲೂ ಕೈಯಲ್ಲಿ ಏನೋ ಕಾಣುತ್ತಿದೆ?” ಎಂದು ಕೇಳಿದ. “ಆಗ ನೀವು ಇದು ಪ್ರಸಾದ” ಎನ್ನುವಿರಿ. ಅವನು “ಯಾರದು?” ಎಂದು ಕೇಳಿದ. ಅದಕ್ಕೆ ನೀವು “ಇದು ದೇವರದು. ನೀನೂ ಸ್ವಲ್ಪ ಸ್ವೀಕರಿಸು” ಎಂದು ಹೇಳಿ ಪ್ರಸಾದ ಕೊಡುವಿರಿ. ನೀವು ದೇವಸ್ಥಾನಕ್ಕೆ ಹೋಗುವಾಗಲೂ ಅದೇ ಹಣ್ಣು, ಕಾಯಿ ಇರುತ್ತವೆ. ಬರುವಾಗಲೂ ಅದೇ ಹಣ್ಣು ಕಾಯಿ ಇರುತ್ತವೆ. ಆದರೆ ಹೋಗುವಾಗ ಅದಕ್ಕೆ ಹಣ್ಣು ಕಾಯಿ ಎನ್ನುವಿರಿ. ಮತ್ತು ಯಾರದು ಎಂದಾಗ ನನ್ನದು ಎನ್ನುವಿರಿ, ಬರುವಾಗ ಅದಕ್ಕೆ ಪ್ರಸಾದ ಎನ್ನುವಿರಿ. ಯಾರದು ಎಂದಾಗ ದೇವರದು ಎನ್ನುವಿರಿ. ಅಂದರೆ ನನ್ನದೆಂಬ ಭಾವ ದೂರಾಗಿ ದೇವರದೆಂಬ ಭಾವ ಬಲಿದಾಗ ಆ ಪದಾರ್ಥವೇ ಪ್ರಸಾದವಾಗುತ್ತದೆ. ಪದಾರ್ಥ ಸೇವನೆಯಿಂದ ಬಂಧನ, ಪ್ರಸಾದ ಸೇವನೆಯಿಂದ ಮೋಕ್ಷ. ಇದೂ ಅಲ್ಲದೇ ಹೋಗುವಾಗ ಗೆಳೆಯನಿಗೆ ಆ ಹಣ್ಣು ಕೊಡುವುದಿಲ್ಲ. ಆದರೆ ಬರುವಾಗ ಕೊಡುವಿರಿ. ವಸ್ತು ಪದಾರ್ಥವಿದ್ದಾಗ ತ್ಯಾಗಭಾವವಿರುವುದಿಲ್ಲ. ಪ್ರಸಾದವಾದಾಗ ತ್ಯಾಗಭಾವ ಅಳವಡುತ್ತದೆ. ಅನ್ನವನ್ನು ಭಗವಂತನಿಗೆ ಸಮರ್ಪಿಸಿ ಪ್ರಸಾದವನ್ನು ಉಪಯೋಗಿಸುವುದರಿಂದ ಮನುಷ್ಯನಲ್ಲಿ ನೆಲೆಸಿರುವ ಅನ್ನಕ್ಕೆ ಸಂಬಂಧಿಸಿದ ಭಾವನಾತ್ಮಕ ದೋಷಗಳೂ ಸಹ ದೂರವಾಗುತ್ತವೆ.
ಇಂತಹ ಪ್ರಸಾದವನ್ನು ಭೋಗಿಸುವುದರಿಂದ ಮನೋನೈರ್ಮಲ್ಯ ನೆಲೆಗೊಂಡು ಮಾನಸಿಕವಾದ ಶಾಶ್ವತ ಪ್ರಸನ್ನತೆ ಅಳವಡುವುದು. ಕಾರಣ ಪ್ರಸಾದಿಯಾಗಬೇಕಾದರೆ, ಚ ಸಾಧಕ ಪ್ರತಿದಿನವೂ ಪ್ರಸಾದವನ್ನೆ ಉಪಯೋಗಿಸುತ್ತಾ ಲಿಂಗಭೋಗೋಪಭೋಗಿಯಾಗಿರುತ್ತಾನೆ. ಅಂತೆಯೇ ಪಾರಮೇಶ್ವರಾಗಮದಲ್ಲಿ
ಯೋನರ್ಪಿತಂ ಮಹೇಶಾನಿ ನಾರ್ಚಯಿತ್ವಾಪಿ ಜಂಗಮಾನ್|
ನಾಶ್ನಾತಿ ನತ್ಯಜೇನ್ಮಹ್ಯಾಮರ್ಪಿತಂ ಕೃಚ್ಛಗೋಪಿ ವಾ |
ಸೋಯಂ ಪ್ರಸಾದೀ ಕಥಿತಃ ಸೋಹಮೇವ ನ ಸಂಶಯಃ ||

ಗುರು ಲಿಂಗ ಜಂಗಮರ ಪೂಜೆಯನ್ನು ಮಾಡದೇ ಮತ್ತು ಭಗವಂತನಿಗೆ ನೈವೇದ್ಯ ತೋರಿಸದೆ(ಅರ್ಪಿಸದೆ) ಯಾರು ಊಟ ಮಾಡುವುದಿಲ್ಲವೋ ಹಾಗೂ ಭಗವಂತನಿಗೆ ಅರ್ಪಿಸಲ್ಪಟ್ಟ ಅನ್ನ(ಪ್ರಸಾದ)ದಲ್ಲಿ ಸ್ವಲ್ಪ ಸಹ ಬಿಡದೇ ಎಲ್ಲವನ್ನು ಸೇವಿಸುವರೋ ಅವರು ಪ್ರಸಾದಿ ಎಂಬುದಾಗಿ ತಿಳಿಸಲಾಗಿದೆ. ತಾತ್ಪರ್ಯವಿಷ್ಟೇ, ಪ್ರಸಾದಿಯಾಗಬೇಕಾದರೆ, ಸಾಧಕನು ತಾನು ಉಪಯೋಗಿಸಬೇಕಾದ ಎಲ್ಲ ವಸ್ತುಗಳನ್ನೂ ಮೊದಲು ಲಿಂಗಕ್ಕೆ ಸಮರ್ಪಿಸಿ ನಂತರ ಲಿಂಗದ ಪ್ರಸಾದ ರೂಪದಲ್ಲಿ ಅವುಗಳನ್ನು ಸೇವಿಸಬೇಕು ಹಾಗೂ ಲಿಂಗಕ್ಕೆ ಸಮರ್ಪಿತವಾದ ಪ್ರಸಾದದಲ್ಲಿ ಒಂದು ಕಣವನ್ನು ಸಹ ಬಿಡದೇ ಉಪಯೋಗಿಸಬೇಕು. ಅರ್ಥಾತ್ ಪ್ರಸಾದವನ್ನು ಕೆಡಿಸಬಾರದು.