ನಿರಹಂಭಾವದ ನಿರಹಂಕೃತಿ ಸಿದ್ದೇಶ್ವರ ಶ್ರೀಗಳು

Advertisement

ಜನವರಿ ೨, ವಿಶ್ವಕಂಡ ಶ್ರೇಷ್ಠ ಸಂತರಾದ ವಿಜಯಪುರದ ಜ್ಞಾನಯೋಗಾಶ್ರಮದ ಪರಮಪೂಜ್ಯರಾದ ಸಿದ್ದೇಶ್ವರ ಶ್ರೀಗಳ ಪ್ರಥಮ ವರ್ಷದ ಪುಣ್ಯ ಸಂಸ್ಮರಣೆ. ಪರಮಾತ್ಮ ತತ್ತ್ವದೊಳಗಿನ ಅನುಭಾವದ ಸಾಕ್ಷಿ ಪ್ರಜ್ಞೆಯಂತಿದ್ದ ಶ್ರೀಗಳ ಆಧ್ಯಾತ್ಮ ತತ್ತ್ವಸಾಧನೆಯ ಕುರಿತ ಅವಲೋಕನ ಲೇಖನ ಇಲ್ಲಿದೆ.

ಹರಿವ ನದಿಯ ತೆರನಂತೆ ಆಧ್ಯಾತ್ಮಪೂರ್ಣ ತತ್ತ್ವಸಂದೇಶಗಳನ್ನು ವಿಶ್ವದಾದ್ಯಂತ ಪ್ರಸರಿಸುವ ಜಂಗಮ ಕಾಯಕ ಯೋಗದಲ್ಲಿ ತಪೋನಿಷ್ಠರಾಗಿದ್ದವರು ವಿಶ್ವಕಂಡ ಶ್ರೇಷ್ಠಸಂತ ವಿಜಯಪುರದ ಜ್ಞಾನಯೋಗಾಶ್ರಮದ ಗುರುವರ್ಯರಾದ ಪರಮಪೂಜ್ಯರಾದ ಸಿದ್ದೇಶ್ವರ ಶ್ರೀಗಳು. ಬಸವಾದಿ ಶರಣರ ತತ್ತ್ವ ಸಂದೇಶಗಳನ್ನು ಬದುಕಿನ ಉಸಿರನ್ನಾಗಿಸಿಕೊಂಡು ಬಾಳಿದ ಅವರು ಪರಮ ದಾರ್ಶನಿಕರು. ಜ್ಞಾನಮಯ ತತ್ತ್ವ ಸಂದೇಶಗಳನ್ನು ಜನಮಾನಸದ ಪ್ರಜ್ಞೆಗೆ ವೇದ್ಯವಾಗುವ ಹಾಗೇ ಉಪದೇಶಿಸುವುದರ ಮೂಲಕ ವಿಶ್ವ ಭ್ರಾತೃತ್ವ ತತ್ತ್ವಕ್ಕೆ ಭಾಷ್ಯ ಬರೆದ ಶ್ರೇಷ್ಠತೆ ಅವರದು. ಭಕ್ತರ ಮುಖದರ್ಪಣದಲ್ಲಿ ಲಿಂಗವ ಕಾಣಬಹುದು' ಎಂಬ ಗುರುಬಸವಣ್ಣನವರ ವಚನದ ಅನುಭಾವ ಸಂದೇಶದಂತೆ ಲಿಂಗತತ್ತ್ವದ ದಿವ್ಯತೆಯ ತತ್ತ್ವಗಳು ಅವರಲ್ಲಿ ಅನಾವರಣಗೊಂಡಿದ್ದವು.ಆಧ್ಯಾತ್ಮ ತತ್ತ್ವ ಸಂದೇಶಗಳು ಸರಳ ಮತ್ತು ಸಹಜ ಬದುಕಿಗೆ ದಿವ್ಯ ಮಾರ್ಗದರ್ಶನವಾಗಬೇಕು’ ಎಂದು ನಂಬಿ ಅದರಂತೆ ಬದುಕಿದ ಅವರ ಜೀವನಾದರ್ಶಗಳು ವಿಶ್ವಕ್ಕೆ ಆದರ್ಶನೀಯ. ಸತ್ಯದ ಪರಮತತ್ತ್ವದಲ್ಲಿ ನಿಶ್ಚಲತ್ವ ಕಂಡುಕೊಂಡಿದ್ದ ಅವರು ಶತಮಾನ ಕಂಡ ಜಗತ್ತಿನ ಶ್ರೇಷ್ಠ ಅನುಭಾವಿ ಸಂತರೆನಿಸಿಕೊಂಡಿದ್ದಾರೆ.
ಅನುಭಾವಿ ಶರಣ ಉರಿಲಿಂಗದೇವರು ತಮ್ಮ ವಚನ ಸಂದೇಶದಲ್ಲಿ ತಿಳಿಸುವಂತಹ ಈ ಅನುಭಾವದ ನುಡಿಗಳನ್ನು ಸಿದ್ಧೇಶ್ವರ ಶ್ರೀಗಳಿಗೆ ಅತ್ಯಂತ ಸಮರ್ಥವಾಗಿ ಅರ್ಥೈಸಬಹುದು. ಸಾಮಾನ್ಯವಾಗಿ ಎಲ್ಲರ ಹಾಗೇ ಜೀವನವನ್ನು ಸಾಗಿಸಿಕೊಂಡು ಹೋದವರಲ್ಲ. ಎಲ್ಲರ ಹಾಗೇ ಲೋಕದಲ್ಲಿ ಅಜ್ಞಾನದ ತೆರೆಯಲ್ಲಿ ಬಾಳಿದವರಲ್ಲ! ಎಲ್ಲರ ಹಾಗೇ ಇಹಲೋಕ ತ್ಯಜಿಸಿ ಹೋದವರಲ್ಲ ಸಿದ್ದೇಶ್ವರ ಶ್ರೀಗಳು. ಪುಣ್ಯದ ಸಂಸ್ಕಾರಗಳ ಸಾಧನೆಯ ಪ್ರತೀಕವಾಗಿ ಬಂದ ಶ್ರೀಗಳು ಅಜ್ಞಾನದ ತೆರೆಯನ್ನು ಕಳಚಿ ಬದುಕಿದವರು. ನಾನು ನನ್ನದೆಂಬ ಅಹಂಮಮಕಾರಗಳ ಬಂಧನದಿಂದ ಮುಕ್ತರಾದವರು. ಮಾನವ ಬದುಕಿನ ಪರಮಸತ್ಯವನ್ನು ಅರಿತು ಜ್ಞಾನಮಯ ಬದುಕಿನ ಕ್ಷಣಗಳನ್ನು ಸಾಕ್ಷಾತ್ಕರಿಸಿಕೊಂಡ ಶ್ರೇಷ್ಠ ಶರಣರಾಗಿ ಬದುಕು ಸಾಗಿಸಿದವರು.
ಲೋಕ ವ್ಯವಹಾರದ ಎಲ್ಲಾ ಆಸೆ ಆಕಾಂಕ್ಷೆಗಳ ಬಂಧನದಿಂದ ಮುಕ್ತರಾಗಿ, ಕಾಯ ಮತ್ತು ಮನೋವಿಕಾರಗಳಿಂದ ಮುಕ್ತರಾಗಿ, ಆತ್ಮತತ್ತ್ವದಲ್ಲಿ ಪರಿಪೂರ್ಣತೆಯ ಸಂತೃಪ್ತ ಭಾವವನ್ನು ಅನುಭಾವಿಸುವುದೇ ಮೋಕ್ಷ ಎನಿಸಿಕೊಳ್ಳುತ್ತದೆ. ಅದು ದೇಹ ಬಿಡುಗಡೆಯ ನಂತರ ಪಡೆಯುವಂತಹದ್ದುದಲ್ಲ. ಕಾಯದಲ್ಲಿದ್ದಾಗಲೇ ಅಂತಹ ಪರಮ ಸ್ಥಿತಿಯನ್ನು ಮುಟ್ಟುವುದು. ಅಂತಹ ಪರಮ ಯೋಗ ಸ್ಥಿತಿಯ ದಿವ್ಯತೆಯ ಅನುಭೂತಿ ಸಾಧಿಸಿದ ಪರಮ ಯೋಗಿಗಳಾಗಿದ್ದವರು ಶ್ರೀಗಳು.
ಶ್ರೇಷ್ಠ ಪ್ರವಚನ ತಪಸ್ವಿಗಳು
ಸಿದ್ದೇಶ್ವರ ಶ್ರೀಗಳು ಬದುಕಿನುದ್ದಕ್ಕೂ ಮಾಡಿದ್ದು ಜ್ಞಾನ ಪಡೆಯುವುದು ಮತ್ತು ಜ್ಞಾನ ಹಂಚುವುದು. ಇದುವೇ ಅವರ ಬದುಕಿನ ಮುಖ್ಯ ಉದ್ದೇಶ ಎನಿಸಿಕೊಂಡಿತ್ತು. ಪ್ರವಚನವೆಂಬ ಜಂಗಮ ಕಾಯಕವನ್ನು ಒಂದು ತಪಸ್ಸಿನಂತೆ ಅಚರಿಸಿಕೊಂಡು ಬಂದ ಅವರು ಜ್ಞಾನಮಯ ಸಂದೇಶಗಳ ಮೂಲಕ ಲಕ್ಷಾಂತರ ಜನತೆಯ ಮನಸ್ಸನ್ನು ಸಾತ್ವಿಕ ಪಥಕ್ಕೆ ಕರೆದೊಯ್ದರು. ಅಂತಹ ಮಾಂತ್ರಿಕ ಶಕ್ತಿ ಅವರ ಪ್ರವಚನಯೋಗದಲ್ಲಿ ಅಡಗಿದ್ದು ಒಂದು ವಿಸ್ಮಯದ ಸಂಗತಿ. ಪ್ರಶಾಂತತೆಯೆ ಚಿತ್ತ, ಶಾಂತತೆಯ ಮನಸ್ಸಿನ ಮೂಲಕ ಪರಮ ಸತ್ಯವನ್ನು ಅರಿಯುವಂತೆ ಸತ್ಪ್ರೇರಣೆ ನೀಡುತ್ತಿದ್ದ ಅವರ ಪ್ರವಚನ ಯೋಗ ಎಂದಿಗೂ ಯಾರ ಮನಸ್ಸನ್ನು ಪ್ರಲೋಭನೆಗೊಳಿಸುವ ಅಥವಾ ವಿಕಾರಗೊಳಿಸುವ ಸಂದರ್ಭಗಳಿಗೆ ಅವಕಾಶವೇ ನೀಡಲಿಲ್ಲ.
ವಿಶ್ವವೇ ಪರಮಾತ್ಮನ ಮಹಾಮನೆ ಎಂದು ಭಾವಿಸಿ, ಎಲ್ಲರಲ್ಲಿಯೂ ಆತ್ಮಸ್ವರೂಪ ತತ್ತ್ವವನ್ನು ಕಂಡಿದ್ದ ಶ್ರೀಗಳು ಎಂದಿಗೂ ಜಾತಿಯ ಹೆಸರಿನಲ್ಲಿ ಮಾತನಾಡಲಿಲ್ಲ. ವಿಶ್ವಮಾನವೀಯ ಪ್ರಜ್ಞೆಯ ಸಾಕ್ಷಿ ಪ್ರಜ್ಞೆಯಂತಿದ್ದ ಅವರು ಜಾತಿ, ಪಂಥ ಮತ್ತು ಧರ್ಮಗಳ ಸಂಕೋಲೆಗಳನ್ನು ದಾಟಿದವರು.
ಶುದ್ಧ ಅಂತಃಕರಣದ ನಿರ್ಭಾವದ ನಿರಹಂಕಾರತ್ವದಲ್ಲಿ ಪರಮಾತ್ಮ ತತ್ತ್ವ ಅಡಗಿರುವ ಪರಮ ಸತ್ಯವನ್ನು ಅರಿತು, ಅದರ ಸಾಕ್ಷಿ ಪ್ರಜ್ಞೆಯಂತಿದ್ದವರು ಶ್ರೀಗಳು. ಪರಮಾತ್ಮನ ಸಾಕಾರರೂಪವೇ ಈ ವಿಶ್ವ ಎಂದು ಭಾವಿಸಿ, ಪರಮಾತ್ಮ ತತ್ತ್ವ ತಿಳಿದ ಜ್ಞಾನಿಗಳೆಲ್ಲರೂ ಶಿವಭಕ್ತರೆಂದು ತಿಳಿದು, ಶಿವಭಕ್ತರೆ ಈ ವಿಶ್ವಕ್ಕೆ ಅಧಿಕರು, ಅರ್ಥಾತ್ ಪರಮಾತ್ಮನ ಸಾಕಾರ ರೂಪವಾದ ಈ ಜಂಗಮ, ಸಮಾಜವೇ ಅಧಿಕವೆಂದು ತಿಳಿದು ಜಂಗಮಮುಖಿ ಕಾಯಕವನ್ನು ಅತ್ಯಂತ ಭಕ್ತಿ ಶ್ರದ್ಧೆಯಿಂದ ಮಾಡಬೇಕೆಂಬ ಗುರುಬಸವಣ್ಣನವರ ಸಂದೇಶದ ಮಾರ್ಗದಲ್ಲಿ ಸಾಗಿ ಹೋದ ಅದಮ್ಯ ಚೇತನ ಪೂಜ್ಯ ಶ್ರೀಗಳು.
ಸರಳತೆಯ ಸಾಕ್ಷಿಪ್ರಜ್ಞೆ
ಸಿದ್ದೇಶ್ವರ ಶ್ರೀಗಳ ಗುರುಗಳಾದ ಪೂಜ್ಯ ಮಲ್ಲಿಕಾರ್ಜುನ ಸ್ವಾಮಿಗಳು ಗ್ರಾಮೀಣ ಪ್ರದೇಶದ ಮಕ್ಕಳು ವಿದ್ಯೆಗಾಗಿ ಕಷ್ಟ ಪಡುತ್ತಿದ್ದುದನ್ನು ಗಮನಿಸಿ ಅವರಿಗಾಗಿ ವಿದ್ಯಾ ಸಂಸ್ಥೆಗಳನ್ನು ಪ್ರಾರಂಭಿಸಿ, ಪ್ರಸಾದ ಮತ್ತು ವಸತಿ ವ್ಯವಸ್ಥೆ ಮಾಡುವುದರ ಮೂಲಕ ಸಾವಿರಾರು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಕಾರಣರಾದವರು. ಅವರು ಸಂಸ್ಥಾಪಿಸಿದ ನೂರಾರು ವಿದ್ಯಾಸಂಸ್ಥೆಗಳನ್ನು ಸಾರ್ಥಕ ಪಥದಲ್ಲಿ ಮುಂದುವರೆಸಿಕೊಂಡು ಹೋಗುವುದರ ಮೂಲಕ ಜಂಗಮಮುಖಿ ಎನಿಸಿಕೊಂಡವರು ಸಿದ್ದೇಶ್ವರ ಶ್ರೀಗಳು. ಸರ್ಕಾರದಿಂದ ಕೊಡಲ್ಪಡುವ ಎಲ್ಲಾ ಗೌರವ ಪ್ರಶಸ್ತಿಗಳನ್ನು ಸಹ ಸ್ವೀಕರಿಸದೆ ಸರಳತೆಯ ತತ್ತ್ವದ ಸಾಕ್ಷಿ ಪ್ರಜ್ಞೆ ಎನಿಸಿಕೊಂಡ ಧೀಮಂತ ವ್ಯಕ್ತಿತ್ವ ಅವರದು. ಅವರು ರಚಿಸಿದ ಪ್ರಮುಖ ಕೃತಿಗಳಾದ ಭಗವದ್‌ಚಿಂತನ, ಅಲ್ಲಮ ಪ್ರಭುವಿನ ವಚನ ನಿರ್ವಚನ, ದೇವರು, ಪ್ರಪಂಚ ಮತ್ತು ಆತ್ಮ, ನೀತಿ ಯೋಗ, ಬದುಕು ಹೂದೋಟ, ದೇವಮಂಡಲ, ಗುಣಸಂಪದ, ಪತಂಜಲಿ ಯೋಗ ಸೂತ್ರಗಳು, ನಾರದ ಭಕ್ತಿ ಸೂತ್ರ, ಶಿವಸೂತ್ರ ಮುಂತಾದವುಗಳು ಆಧ್ಯಾತ್ಮ ಸಾಹಿತ್ಯ ಲೋಕಕ್ಕೆ ನೀಡಿದ ಅತ್ಯುನ್ನತ ಕೊಡುಗೆಗಳಾಗಿವೆ.