ನಾ ನಿನಗಾದರೆ ನೀ ನನಗೆ

Advertisement

ಹೇಗಿದ್ದೀರಿ ಸೋದಿ ಮಾಮಾ ಅವರೇ. ನಾನು ನಿಮ್ಮ ನೆಚ್ಚಿನ ಟ್ರಂಪೇಸಿ. ನೀವು ನನಗೆ ಫೋನೇ ಮಾಡಲಿಲ್ಲ. ಮೆಸೇಜು ಮಾಡಲಿಲ್ಲ ಎಂದು ನಾನು ದೂರುವುದಿಲ್ಲ. ಯಾಕೆಂದರೆ ನೀವು ಚುನಾವಣೆಯಲ್ಲಿ ನೀವು ಬಿಜಿ ಅನ್ನುವುದು ನನಗೆ ತಿಳಿದಿದೆ. ಅದಕ್ಕೆ ಈಗ ಅರ್ಜಂಟಾಗಿ ಈ ಪತ್ರ ಬರೆಯಲು ಕಾರಣವೇನೆಂದರೆ…. ಈಗ ನಡೆಯುತ್ತಿರುವ ಚುನಾವಣೆಯಲ್ಲಿ ನಿಮ್ಮ ಪರವಾಗಿ ಪ್ರಚಾರ ಮಾಡಲು ನಾನೊಂದು ಬಾರಿ ಬರಲೇ? ನಿಮ್ಮಲ್ಲಿಯೂ ನನ್ನದು ಭಯಂಕರ ನಡೀತದೆ. ಎಲ್ಲ ರಾಜ್ಯಗಳಲ್ಲಿ ಬೀಗರು, ಬಿಜ್ಜರು, ಕುಲಸ್ತರು, ನನಗೆ ಸಾಲಕೊಟ್ಟವರು ಇದ್ದಾರೆ. ಅದರಲ್ಲೂ ಕರ್ನಾಟಕದಲ್ಲಂತೂ ಭಯಂಕರ ನಮ್ಮ ಮಂದಿ ಇದ್ದಾರೆ. ಲಾದುಂಚಿಯಲ್ಲಿ ನನ್ನ ಬೀಗರು ಇದ್ದಾರೆ. ವರ್ನಖ್ಯಾಡೆಯಲ್ಲಿ ನನ್ನ ಹೆಂಡತಿಯ ಚಿಕ್ಕಮ್ಮ ಆಡು ಮೇಯಿಸುತ್ತಾಳೆ. ಇರಪಾಪುರ ಮಾದೇವ ನನ್ನ ಹತ್ತಿರದ ಬಂಧು.
ಅಷ್ಟೆ ಅಲ್ಲ ಮದ್ರಾಮಣ್ಣ ನಮ್ಮ ಜ್ಯೂನಿಯರ್. ಇಬ್ಬರೂ ಒಂದೇ ಶಾಲೆಯಲ್ಲಿ ಕಲಿತಿದ್ದೇವೆ. ಏನೇನೋ ಭಯಂಕರ ಮಾತನಾಡುತ್ತಾನೆ. ನೀವೇನೂ ಗಾಬರಿ ಬೀಳಬೇಡಿ. ಬೇಕಾದರೆ ನಾನು ಹೇಳುತ್ತೇನೆ. ಒಬ್ಬರಿಗೊಬ್ಬರು ಬೇಕಲ್ಲವೇ? ನಾನು ನಿಮಗಾದರೆ ನೀವು ನಮಗೆ ನೀವು ಹೂಂ ಅಂದರೆ ಒಂದು ಬಾರಿ ನಾನು ಬಂದು ಹೋಗುತ್ತೇನೆ. ನವೆಂಬರ್‌ನಲ್ಲಿ ನನ್ನ ಚುನಾವಣೆಗೆ ನೀವು ಬೇಕಾದರೆ ಬಂದು ಹೋಗಿ. ನಾನೂ ಕೂಡ ಇಲ್ಲಿ ನಿಮ್ಮ ಹಾಗೆ ಮಾತನಾಡುವುದನ್ನು ಪ್ರಾಕ್ಟೀಸ್ ಮಾಡುತ್ತಿದ್ದೇನೆ. ೩೦-೪೦ ಆಫ್‌ಕೋಟ್‌ಗಳನ್ನು ಹೊಲಿಸಿ ಇಟ್ಟುಕೊಂಡಿದ್ದೇನೆ. ನೀವು ೩೬ ಇಂಚು ಅಂದರೆ ನಾನು ೬೪ ಎಂದು ಹೇಳುತ್ತಿದ್ದಾನೆ. ಈ ಬುಡ್ಡೇಸಾಬನ ಮೇಲೆ ನಿಮಗೆ ಬಲು ಪ್ರೀತಿ ಇದೆ ನನಗೆ ಗೊತ್ತು. ಅದರಲ್ಲಿ ಸ್ವಲ್ಪಾದರೂ ನನ್ನ ಮೇಲೆ ತೋರಿಸಲಾರಿರಾ? ನೀವು ಇಲ್ಲದ ಸಮಯದಲ್ಲಿ ಇದೇ ಬುಡ್ಡೇಸಾಬ ನಿಮ್ಮ ಬಗ್ಗೆ ಏನೇನು ಮಾತನಾಡುತ್ತಾನೆ ಗೊತ್ತ? ನಾನು ಹೇಳಲು ಹೋಗುವುದಿಲ್ಲ. ಆ ಮಾತುಗಳನ್ನು ಕೇಳಿದರೆ ನಿಮ್ಮ ಎದೆ ಝಲ್ ಅನ್ನಬಹುದು. ಅದೆಲ್ಲ ಇರಲಿ ಬಿಡಿ…ಮೊನ್ನೆ ಲೇವೇಗೌಡರು ಕರೆ ಮಾಡಿ ಹೇಗಿದ್ದೀರಿ ಟ್ರಂಪೇಸಿ ಅಂದರು. ನಾನೂ ಸಹ ಮಾಮೋರ ಜತೆ ಸೇರಿಕೊಂಡು ಬಿಟ್ಟೆ ಕಣಯ್ಯ…ಆವಾಗ ಏನೇನೋ ಅಂದಿದ್ದೆ. ಈಗ ಅವರೂ ಮನಸ್ಸಿನಲ್ಲಿ ಇಟ್ಟುಕೊಂಡಿಲ್ಲ, ನೀ ಒಂದ್ಸಲ ಬಂದೋಗು ಅನ್ನುತ್ತಿದ್ದಾರೆ. ನೀವು ಹೂಂ ಅಂದರೆ ಇವತ್ತೇ ಹೋಗುವುದು ಮತ್ತು ಬರುವುದು ಸೇರಿ ಎರಡೂ ಬುಕ್ ಮಾಡಿಸುತ್ತೇನೆ. ಬೇಗ ತಿಳಿಸಿರಿ…