ನಾನು ಅನುಷ್ಠಾನಕ್ಕೆ ಕುಳಿತಿದ್ದೇನೆ..

Advertisement

ಚುನಾವಣಾ ಭವಿಷ್ಯಗಾರ ಎಂದು ಪ್ರಸಿದ್ಧಿ ಪಡೆದಿದ್ದ ಕರಿಲಕ್ಷಂಪತಿಗೆ ಈಗಂತೂ ಭರ್ಜರಿ ಡಿಮ್ಯಾಂಡು. ಚುನಾವಣೆ ಇನ್ನೂ ಐದಾರು ತಿಂಗಳು ಇರುವಾಗಲೇ ಯಾವ ಪಕ್ಷಕ್ಕೆ ಏನು ಭವಿಷ್ಯ ಹೇಳಬೇಕು ಎಂದು ತಾಲೀಮು ಆರಂಭಿಸುತ್ತಿದ್ದ. ಪ್ರತಿದಿನ ಕನ್ನಡಿ ಮುಂದೆ ನಿಂತು ಪ್ರಾಕ್ಟೀಸ್ ಮಾಡುತ್ತಿದ್ದ. ಉಳಿದ ದಿನಗಳಲ್ಲಿ ಹೆಂಗೆಂಗೋ ಇರುತ್ತಿದ್ದ ಕ.ಲ. ದ್ದು ಇವಾಗ ಖರ‍್ರೇ ಬದಲಾಗಿದೆ. ಮೊದಲು ಎಲ್ಲರನ್ನೂ ಏನ್ರೀ ಎಂದು ಮಾತನಾಡಿಸುತ್ತಿದ್ದ. ಈಗ ಯಾರಾದರೂ ಎದುರಿಗೆ ಬಂದರೆ ಸಾಕು ಏನ್ರೋ ಪ್ರಚಾರಕ್ಕೆ ಹೋಗಿಲ್ವ? ಎಂದು ಏಕವಚನದಲ್ಲಿ ಮಾತನಾಡಿಸುತ್ತಿದ್ದ. ಎರಡೂ ಪಾರ್ಟಿಯ ನಾಯಕರು ಮುಂಜಾನೆದ್ದ ಕೂಡಲೇ ದೊಡ್ಡ ದೊಡ್ಡ ಕಾರುಗಳನ್ನು ತೆಗೆದುಕೊಂಡು ಆತನ ಮನೆಯ ಮುಂದೆ ನಿಲ್ಲಿಸಿ ಕಣಿ ಕೇಳಲು ಆರಂಭಿಸಿದ್ದಾರೆ.
ಒಂದು ಪಾರ್ಟಿಯವರಿಗೆ ಮುಂಜಾನೆ ಸಮಯ ಕೊಟ್ಟರೆ ಇನ್ನೊಂದು ಪಾರ್ಟಿಯವರಿಗೆ ಸಂಜೆ ಬಾ ಎಂದು ಹೇಳುತ್ತಾನೆ. ಒಂದೊಂದು ಸಲ ಎರಡೂ ಪಾರ್ಟಿಯವರು ಒಟ್ಟೊಟ್ಟಿಗೆ ಬಂದಾಗ.. ಹಿತ್ತಿಲ ಬಾಗಿಲಿನಿಂದ ಓಡಿ ಹೋಗುತ್ತಿದ್ದ. ಕರಿಲಕ್ಷಂಪತಿಗೆ ಹೇಗಾದರೂ ಪಾಠ ಕಲಿಸಬೇಕು ಎಂದು ಹೋಟ್ಲುದೊಡ್ಡಿ ದಾರಿ ಕಾಯುತ್ತಿದ್ದ. ಕೆಲವೊಂದು ಬಾರಿ ಎರಡೂ ಪಕ್ಷಗಳ ಮುಖಂಡರನ್ನು ಭೇಟಿಮಾಡಿ… ಕ.ಲ. ಭವಿಷ್ಯ ಏನು ನುಡಿದಿದ್ದಾರೆ ಎಂದು ಕೇಳುತ್ತಿದ್ದ. ಆಗ ಒಂದು ಪಕ್ಷದ ಮುಖಂಡರು ಇಲ್ಲಿಲ್ಲ..ನಿಮದೇ ಗ್ಯಾರಂಟಿ ಎಂದು ಕವಡೆ ಹಾಕಿ ಹೇಳಿದ್ದಾರೆ ಎಂದು ಹೇಳಿದರೆ. ಇನ್ನೊಂದು ಪಕ್ಷದ ಮುಖಂಡರು… ಅಯ್ಯೋ ಕರಿಲಕ್ಷಂಪತಿ ತಾಳೆಗರಿ ನೋಡಿ ಹೇಳಿದ್ದಾರೆ…ಏನೇ ಆಗಲಿ ನೀವೇ ಎಂದು ಹೇಳಿ ಮುಂಗೈಗೆ ಕೆಂಪುದಾರ ಕಟ್ಟಿದ್ದಾರೆ ಹಾಗಾಗಿ ನಾವೇ ಗೆಲ್ಲುತ್ತೇವೆ ಎಂದು ಹೇಳಿದರು.
ಅದಕ್ಕೆ ಹೋಟ್ಲುದೊಡ್ಡಿ ಅಯ್ಯೋ ನಿಮಗೂ ಅದನ್ನೇ ಹೇಳಿದ್ದಾನೆಯೇ? ನಿಮ್ಮ ಅಪೋಸಿಟ್‌ನವರಿಗೂ ಅದನ್ನೇ ಹೇಳಿ ನೀವು ಸೋಲೆ ಸೋಲುತ್ತೀರಿ ಎಂದು ಹೇಳಿದ್ದಾರೆ ಎಂದು ಹೇಳಿ ಅವರ ವಿರುದ್ಧ ಇದ್ದವರಿಗೂ ಬಂದು ಅದನ್ನೇ ಹೇಳಿದ. ಅವರಿಬ್ಬರೂ ಮಾತನಾಡಿಕೊಂಡು ರಾತ್ರೋ ರಾತ್ರಿ ಸೀದಾ… ಕರಿಲಕ್ಷಂಪತಿ ಮನೆಗೆ ಹೋಗಿ… ಏನು ಮಾಡಬೇಕೋ ಅದನ್ನು ಮಾಡಿ ಆತನಿಗೆ ಕೊಟ್ಟಿದ್ದ ಹಣವನ್ನು ವಾಪಸ್ ಕಸಿದುಕೊಂಡು ಬಂದರು. ಅಂದಿನಿಂದ ಕರಿಲಕ್ಷಂಪತಿ ಕಾಣಿಸುತ್ತಿಲ್ಲ. ನಾನು ಅನುಷ್ಠಾನಕ್ಕೆ ಕುಳಿತಿದ್ದೇನೆ ಚುನಾವಣೆ ಮುಗಿದ ನಂತರ ಊರಿಗೆ ಬರುತ್ತೇನೆ ಎಂದು ಕರಿಲಕ್ಷಂಪತಿ ಮುಂಡರಗಿ ಅಂಬ್ರಪ್ಪನಿಗೆ ಮೆಸೇಜ್ ಮಾಡಿದ್ದಾನೆ.