ನಮ್ಮಲ್ಲಿ ಪ್ರಧಾನಿಯಾಗುವ ಯೋಗ್ಯತೆ ಇರುವ ಬಹಳಷ್ಟು ಜನರಿದ್ದಾರೆ

Advertisement

ತುಮಕೂರು: ರಾಹುಲ್ ಗಾಂಧಿ, ನರೇಂದ್ರ ಮೋದಿಯವರಿಗಿಂತ ಕಡಿಮೆ ಏನಿಲ್ಲ. ನಮ್ಮಲ್ಲಿ ಪ್ರಧಾನಿಯಾಗುವ ಯೋಗ್ಯತೆ ಇರುವ ಬಹಳಷ್ಟು ಜನರಿದ್ದಾರೆ. ನರೇಂದ್ರ ಮೋದಿ ಬಿಟ್ಟರೆ ಪ್ರಧಾನಿಯಾಗಲು ಯಾರೂ ಇಲ್ಲ ಎಂದು ದೇವೇಗೌಡರು ಸ್ವಾರ್ಥಕ್ಕಾಗಿ ಹೇಳುವ ಮಾತುಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ತುಮಕೂರಿನಲ್ಲಿ ಆಯೋಜಿಸಲಾಗಿದ್ದ ಪ್ರಜಾಧ್ವನಿ-02 ಲೋಕಸಭೆ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಂದು ಕಾಲದಲ್ಲಿ ನೆಹರೂ ಅವರ ನಂತರ ಪ್ರಧಾನಿ ಯಾರು ಎಂಬ ಪ್ರಶ್ನೆಗೆ ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಮನ್‌ಮೋಹನ್ ಸಿಂಗ್ ಅವರು ಉತ್ತಮ ಕೆಲಸ ಮಾಡಲಿಲ್ಲವೇ? ಎಂದು ಪ್ರಶ್ನಿಸಿದರು. ನರೇಂದ್ರ ಮೋದಿ ಬಿಟ್ಟರೆ ಪ್ರಧಾನಿಯಾಗಲು ಯಾರೂ ಇಲ್ಲ ಎಂದು ದೇವೇಗೌಡರು ಸ್ವಾರ್ಥಕ್ಕಾಗಿ ಹೇಳುವ ಮಾತುಗಳು. ಇದು ಅವರಿಗೆ ಶೋಭೆ ಕೊಡುವ ಮಾತುಗಳಲ್ಲ ಎಂದರು.
ಸುಳ್ಳು ಹೇಳುವವರನ್ನು ತಿರಸ್ಕರಿಸಿ
ಬೆಲೆಯೇರಿಕೆಯಿಂದ ತತ್ತರಿಸಿದ್ದ ರಾಜ್ಯದ ಜನರಿಗೆ ಶಕ್ತಿ, ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿ ಮಾಡಿದ್ದೇವೆ. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ನಾವು ಸತ್ಯ ಹೇಳುತ್ತಿದ್ದೇವೆ, ಬಿಜೆಪಿ ಸುಳ್ಳು ಹೇಳುತ್ತಿದೆ. ಸುಳ್ಳು ಹೇಳುವವರನ್ನು ತಿರಸ್ಕಾರ ಮಾಡಬೇಕು ಎಂದು ಕರೆ ನೀಡಿದರು. ನುಡಿದಂತೆ ನಡೆದಿದ್ದೇವೆ. ಯಾವ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ. ಬಜೆಟ್‌ನಲ್ಲಿ 52,000 ಕೋಟಿ ರೂ.ಗಳನ್ನು ಮೀಸಲಿರಿಸಿದೆ. ನಮ್ಮ ಅಭ್ಯರ್ಥಿಯನ್ನು ಆಶೀರ್ವಾದ ಮಾಡಿ ಲೋಕಸಭೆಗೆ ಕಳಿಸಿಕೊಡಬೇಕೆಂದು ಹೇಳಿದರು.