ದ.ಕ, ಉಡುಪಿ ಜಿಲ್ಲೆಯಾದ್ಯಂತ ಅಯೋಧ್ಯೋತ್ಸವ

Advertisement

ಮಂಗಳೂರು: ಅಯೋಧ್ಯೆಯಲ್ಲಿ ಇಂದು ಶ್ರೀ ರಾಮ ಮಂದಿ ಉದ್ಘಾಟನೆ ಮತ್ತು ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮೋಲ್ಲಾಸ ಮನೆ ಮಾಡಿದೆ.
ಉಭಯ ಜಿಲ್ಲೆಯ ದೇವಸ್ಥಾನ, ಭಜನಾ ಮಂದಿರ, ವಿವಿಧ ಸಂಘ ಸಂಸ್ಥೆಗಳಲ್ಲಿ ಪ್ರಾಣ ಪ್ರತಿಷ್ಠೆಯನ್ನು ಕಣ್ತುಂಬಿಕೊಳ್ಳಲು ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿದೆ. ಕೆಲ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ರಾಮ ಭಜನೆ, ರಾಮ ನಾಮ ಸ್ಮರಣೆ, ರಾಮಾಯಣ ರಸಪ್ರಶ್ನೆ, ಶ್ರೀ ರಾಮ ದೀಪೋತ್ಸವ, ರಂಗ ಪೂಜೆ, ಸಾಮೂಹಿಕ ಪ್ರಾರ್ಥನೆ, ಶ್ರೀ ರಾಮ ದೇವರ ಪಟ್ಟಾಭಿಷೇಕ ರಾಮ ಕಥಾ ಗಾಯನ, ಹರಿಕಥಾ, ರಾಮತಾರಕ ಮಂತ್ರ, ಹವನ ಮೊದಲಾದವರುಗಳು ನಡೆಯುತ್ತಿದೆ. ಜಿಲ್ಲೆಯ ದೇವಸ್ಥಾನ, ಭಜನಾ ಮಂದಿರಗಳಲ್ಲಿ ಮಹಾ ಮಂಗಳಾರತಿ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲೆಯಾದ್ಯಂತ ಶ್ರೀ ರಾಮ ದೇವರ ಚಿತ್ರವುಳ್ಳ ಬಾವುಟ, ಕಟೌಟ್ ರಾರಾಜಿಸುತ್ತಿದೆ. ವಾಹನಗಳಲ್ಲೂ ಕೇಸರಿ ಬಾವುಟ ಹಾರುತ್ತಿದೆ. ಇನ್ನು ಹಲವೆಡೆ ಮಕ್ಕಳಿಗೆ ಶ್ರೀ ರಾಮ, ಹನುಮ, ಲಕ್ಷ್ಮಣ ಹಾಗೂ ಸೀತಾದೇವಿಯ ವೇಷ ಭೂಷಣ ಸ್ಪರ್ಧೆ, ಪ್ರದರ್ಶನಗಳನ್ನು ನಡೆಸಲಾಗುತ್ತಿದೆ.
೫೧ ಗಂಟೆಗಳ ಅಖಂಡ ರಾಮಾಯಣ..
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಲೋಕಾರ್ಪಣೆ ಹಿನ್ನೆಲೆಯಲ್ಲಿ ಮಂಗಳೂರು, ಉಡುಪಿ, ಪುತ್ತೂರು, ಕೊಡಗು, ಕಾಸರಗೋಡು ವ್ಯಾಪ್ತಿಯನ್ನು ಒಳಗೊಂಡ ಸಂಸ್ಕೃತ ಭಾರತಿಯ ಮಂಗಳೂರು
ವಿಭಾಗದಿಂದ ಸಂಘನಿಕೇತನದಲ್ಲಿ ೫೧ ಗಂಟೆಗಳ ಕಾಲ ‘ಅಖಂಡ ರಾಮಾಯಣ ಪಠಣ ನಡೆಯಿತು.
ಶುಕ್ರವಾರ ಮಧ್ಯಾಹ್ನ ಆರಂಭವಾದ ರಾಮಾಯಣ ಪಾರಾಯಣ ಜ.೨೧ರ ಸಂಜೆ ೪ರ ವರೆಗೆ ನಡೆಯಿತು. ವಾಲ್ಮೀಕಿ ರಾಮಾಯಣದ ೨೪,೦೦೦ ಸಂಸ್ಕೃತ ಶ್ಲೋಕಗಳನ್ನು ಗಾಯತ್ರಿ ಮಂತ್ರದ
ಬೀಜಾಕ್ಷರಾನುಸಾರವಾಗಿ ೨೪ ತಂಡಗಳನ್ನಾಗಿ ವಿಂಗಡಿಸಿ, ಸುಮಾರು ೫೧ ಗಂಟೆಗಳಿಗೂ ಅಧಿಕ ಕಾಲ ಅಖಂಡ ಪಾರಾಯಣ ನಡೆಯಿತು. ಪಾರಾಯಣದಲ್ಲಿ ಪ್ರತೀ ತಂಡದಲ್ಲಿ ಕನಿಷ್ಠ ೨೦ ಮಂದಿ
ಸುಮಾರು ೧,೦೦೦ ಶ್ಲೋಕಗಳನ್ನು ಪಠಿಸಿದರು.
೧೦ ಮಂದಿ ಪ್ರಮುಖರು ಭಾಗಿ..
ಅಯೋಧ್ಯೆಯಲ್ಲಿ ಶ್ರೀ ರಾಮ ಪ್ರತಿಷ್ಠಾಪನೆಯ ಬ್ರಹ್ಮಕಲಶೋತ್ಸವದ ನೇತೃತ್ವ ವಹಿಸಿರುವ ಉಡುಪಿ ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಈಗಾಗಲೇ ಅಯೋಧ್ಯೆಗೆ ತೆರಳಿದ್ದಾರೆ. ಉಳಿದಂತೆ ದ.ಕ.ಜಿಲ್ಲೆಯಿಂದ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಸೇರಿದಂತೆ ಸ್ವಾಮೀಜಿ ಹಾಗೂ ಪ್ರಮುಖರು ಸೇರಿ ಒಟ್ಟು ೧೦ ಮಂದಿ ಈಗಾಗಲೇ ಅಯೋಧ್ಯೆಯತ್ತ ಹೊರಟಿದ್ದಾರೆ.
ಮನಸೂರೆಗೊಂಡ ಶ್ರೀರಾಮ ಪಟ್ಟಾಭಿಷೇಕ ಯಕ್ಷಗಾನ..
ಅಯೋಧ್ಯಾಪತಿ ಶ್ರೀರಾಮಚಂದ್ರನ ಪ್ರಾಣಪ್ರತಿಷ್ಠೆ ಸಲುವಾಗಿ ಕರಾವಳಿಯಲ್ಲಿ ಯಕ್ಷಗಾನ ಮೇಳಗಳು ಶ್ರೀರಾಮನ ಕಥಾನಕ ಪ್ರದರ್ಶನಿಸುತ್ತಿವೆ. ಈ ಮೂಲಕ ಅಯೋಧ್ಯೆ ಮಂದಿರ ಲೋಕಾರ್ಪಣೆಯ ಸಡಗರಲ್ಲಿ ಭಾಗಿಯಾಗುತ್ತಿವೆ.
ತೆಂಗು ಹಾಗೂ ಬಡಗು ತಿಟ್ಟಿನ ಕೆಲವು ಯಕ್ಷಗಾನ ಮೇಳಗಳು ಈಗಾಗಲೇ ರಾಮನ ಕುರಿತ ಪ್ರಸಂಗ ಪ್ರದರ್ಶಿಸುತ್ತಿದ್ದರೆ, ಪ್ರಸಂಗ ಮುಕ್ತಾಯದಲ್ಲಿ ಶ್ರೀರಾಮ ಸ್ತುತಿಯ ಮೂಲಕ ಆರತಿ ಬೆಳಗಿ ಮಂಗಲ ಹಾಡುತ್ತಿದ್ದಾರೆ. ತೆಂಕಿ ತಿಟ್ಟಿನ ಪ್ರಸಿದ್ಧ ಶ್ರೀಧರ್ಮಸ್ಥಳ ಮೇಳ ಶನಿವಾರದಿಂದ ನಾಲ್ಕು ದಿನಗಳ ಕಾಲ ಶ್ರೀರಾಮನ ಕುರಿತ ಯಕ್ಷಗಾನ ಪ್ರದರ್ಶಿಸುತ್ತಿದೆ. ಮಾತ್ರವಲ್ಲ ಪ್ರಸಂಗದ ಕೊನೆಗೆ ಶ್ರೀರಾಮ ಪಟ್ಟಾಭಿಷೇಕವನ್ನು ವಿಶೇಷವಾಗಿ ಪ್ರದರ್ಶಿಸುತ್ತಿದೆ. ಶನಿವಾರ ಉಡುಪಿಯ ಗುಜ್ಜಾಡಿಯಲ್ಲಿ ನಡೆದ ‘ಕಾರುಣ್ಯಾಂಬುಧಿ ಶ್ರೀರಾಮ’ ಯಕ್ಷಗಾನದಲ್ಲಿ ಶ್ರೀರಾಮ ಪಟ್ಟಾಭಿಷೇಕ ವಿಶೇಷವಾಗಿ ಪ್ರದರ್ಶನಗೊಂಡು ಮನಸೂರೆಗೊಂಡಿದೆ.