ದೇಶದ ಪತ್ರಿಕಾ ಸ್ವಾತಂತ್ರ್ಯ ಸಂಪೂರ್ಣ ದಮನ

Advertisement

ಚಿತ್ರದುರ್ಗ: ಮೋದಿ ನೇತೃತ್ವದ ಎನ್‌ಡಿಎ ಅವಧಿಯಲ್ಲಿ ದೇಶದ ಪತ್ರಿಕಾ ಸ್ವಾತಂತ್ರ‍್ಯ ಸಂಪೂರ್ಣ ದಮನವಾಗಿದೆ. ವಿಶ್ವಗುರು ಎಂದುಕೊಳ್ಳುವ ಮೋದಿ ಹತ್ತು ವರ್ಷಗಳಲ್ಲಿ ಒಮ್ಮೆಯೂ ಪತ್ರಿಕಾಗೋಷ್ಠಿಯನ್ನೇ ನಡೆಸದೇ ಪ್ರಜಾಪ್ರಭುತ್ವ ತತ್ವಗಳನ್ನು ಗಾಳಿಗೆ ತೂರಿದ್ದಾರೆ ಎಂದು ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತರಾದ ಪಿ.ಸಾಯಿನಾಥ್ ಕಳವಳ ವ್ಯಕ್ತಪಡಿಸಿದರು.
ನಗರದ ಎಸ್‌ಆರ್‌ಎಸ್ ಸಮೂಹ ಸಂಸ್ಥೆಯ ಡಾ.ಬಿ.ವಿ.ವೈಕುಂಠರಾಜು ವೇದಿಕೆಯಲ್ಲಿ ಸೋಮವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಕೆಯುಡಬ್ಲ್ಯೂಜೆ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.
ಮೋದಿ ಮಾಧ್ಯಮ ರಂಗಕ್ಕೆ ಮಾಡಿದ ಒಂದೇ ಒಳ್ಳೆಯ ಕೆಲಸವೆಂದರೆ ಕೋವಿಡ್ ಸಂದರ್ಭದಲ್ಲಿ ಮಾಧ್ಯಮ ಕ್ಷೇತ್ರವನ್ನು ಅಗತ್ಯ ಸೇವೆಗಳ ವ್ಯಾಪ್ತಿಗೆ ತಂದಿರುವುದು. ಇದು ಒಳ್ಳೆಯ ಬೆಳವಣಿಗೆ. ಆದರೆ ಅಗತ್ಯ ಸೇವೆಗಳ ವ್ಯಾಪ್ತಿಗೆ ಪತ್ರಕರ್ತರು ಸೇರಿದರೂ ಸಾವಿರಾರು ಪತ್ರಕರ್ತರು ಕೆಲಸವನ್ನು ಕಳೆದುಕೊಂಡರು. ಹೀಗೆ ಮೋದಿ ಸರ್ಕಾರ ಬಂಡವಾಳಶಾಹಿಗಳ ಪರವಾಗಿಯೇ ತನ್ನ ನಿಲುವನ್ನು ಪ್ರದರ್ಶಿಸುತ್ತ ಹೋಗುತ್ತಿದೆ ಎಂದು ಟೀಕಿಸಿದರು.
ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸಬೇಕಾದ ಹೊಣೆ ಪತ್ರಕರ್ತರ ಮೇಲಿದೆ. ಫೆ.೧೨ರಂದು ಹರಿಯಾಣದಲ್ಲಿ ರೈತರ ಮೇಲೆ ಡ್ರೋಣ್ ಮೂಲಕ ಅಶ್ರುವಾಯು ಸಿಡಿಸಿದ್ದನ್ನೂ ಕೂಡ ಪತ್ರಿಕೆಗಳು ಖಂಡಿಸಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಕೆ.ರವಿ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಸಿ.ಲೋಕೇಶ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ, ಎಸ್‌ಆರ್‌ಎಸ್ ಸಮೂಹ ಸಂಸ್ಥೆ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಹಾಗೂ ಇತರರು ಭಾಗವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಸ್ವಾಗತಿಸಿದರು.
೨೬ ಪತ್ರಕರ್ತರಿಗೆ ಗೌರವ
“ಕೆಯುಡಬ್ಲ್ಯೂಜೆ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ೨೬ ಪತ್ರಕರ್ತರಿಗೆ ಗೌರವ ಸಲ್ಲಿಸಲಾಯಿತು. ಸಂಯುಕ್ತ ಕರ್ನಾಟಕ ಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕ ಮೋಹನ್ ಹೆಗಡೆ ಅವರಿಗೆ ಎಸ್.ವಿ. ಜಯಶೀಲರಾವ್ ಪ್ರಶಸ್ತಿಯನ್ನು ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತರಾದ ಪಿ. ಸಾಯಿನಾಥ್ ಅವರು ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಯಾದಗಿರಿ ಜಿಲ್ಲೆ ವಡಗೇರಾ ಹೋಬಳಿ ಸಂ.ಕ. ವರದಿಗಾರ ನಾಮದೇವ ವಾಟ್ಕರ್ ಅವರಿಗೆ ಎಸ್.ಎಸ್.ರಂಗಸ್ವಾಮಿ ಪ್ರಶಸ್ತಿ ಪ್ರದಾನ ಮಾಡಲಾಯಿತು.