ತಾತಾರ್ಜಿತ ಆಸ್ತಿ ಹುಷಾರ್….

Advertisement

ಪಿತ್ರಾರ್ಜಿತ ಆಸ್ತಿಯನ್ನು ಅವರು ಬಿಡುವುದಿಲ್ಲ ಎಂದು ಕರಿಗಡ್ಡ ಬಿಳಿಕೂದಲಿನ ಪತ್ರೊಳೆಲೆ ಸ್ಯಾಮಣ್ಣ ಅಂದಿದ್ದಾನೆ ಎಂದು ಎಲ್ಲೆಡೆ ಸುದ್ದಿಯಾಗಿದೆ. ಅಯ್ಯೋ ಇದೇನಪ್ಪ ಎಂಥಾಕಾಲ ಬಂತು. ಅವರು ನೋಡಿದರೆ ತಾತಾರ್ಜಿತ.. ಇವರು ನೋಡಿದರೆ ಪಿತ್ರಾರ್ಜಿತ ಆಸ್ತಿ ಕಸಿದುಕೊಳ್ಳುತ್ತಾರೆ ಎಂದು ಹೇಳುತ್ತಾರೆ. ಹೀಗೆ ಮಾಡಿದರೆ ನನ್ನಗತಿಯೇನು ಎಂದು ಮನಸ್ಸಿಗೆ ಹಚ್ಚಿಕೊಂಡಿರುವ ತಿಗಡೇಸಿ ರಾತ್ರಿ ಊಟ ಮಾಡುವುದನ್ನು ಬಿಟ್ಟಿದ್ದಾನೆ. ನಮ್ಮ ತಾತ ತಾರಾತಿಗಡಿ… ವಾರಕ್ಕೆ ಮೂರೇ ಊಟ ಮಾಡಿ ಹೊಟ್ಟೆಕಟ್ಟಿ ಬಟ್ಟೆಕಟ್ಟಿ ಹಣ ಉಳಿಸಿ ನಾಲ್ಕು ಕುರಿಗಳನ್ನು ತೆಗೆದುಕೊಂಡಿದ್ದ. ಅವು ಕಾಲಿಗೆ ಕಾಲು ಜೋಡಾಗಿ ಜಾಸ್ತಿ ಆದವು. ಅದರಿಂದ ನಮ್ಮ ಅಪ್ಪ ಬಾರಾ ತಿಗಡಿ ಚಮಾನದ ಆಚೆ ಒಂದು ಸಣ್ಣ ಗುಡಿಸಲು ಹಾಕಿಕೊಂಡಿದ್ದ. ಆವಾಗಾವಾಗ ಒಂದೊಂದು ಕುರಿ ಮಾರಿ ಅದರಿಂದ ಜೀವನ ನಡೆಸುತ್ತಿದ್ದ. ದಿನಾಲೂ ಬೆಳಗ್ಗೆ ಹೊಲ ಹೊಲ ತಿರುಗಿ ಅವುಗಳನ್ನು ಮೇಯಿಸಿಕೊಂಡು ಬರುತ್ತಿದ್ದ. ಹೀಗೆ ತಾತ.. ಅಪ್ಪ ಮಾಡಿದ ಆಸ್ತಿಗಳು ಅವು. ಈಗ ನೋಡಿದರೆ ಅವುಗಳನ್ನು ಕಸಿದುಕೊಳ್ಳುವ ಮಾತಾಡುತ್ತಾರೆ. ಮಾಡಿದ್ದು ನಮ್ಮ ತಾತ.. ನಮ್ಮ ಅಪ್ಪ. ಕಸಿದುಕೊಳ್ಳಲು ಇವರಾರು ಎಂದು ಸಿಕ್ಕ ಸಿಕ್ಕವರ ಮುಂದೆ ಡಿಸಕಸ್ ಮಾಡುತ್ತಿದ್ದ. ಆವಾಗಿನ ಸಂದರ್ಭದಲ್ಲಿ ಅಗದಿ ಸೋವಿದರದಲ್ಲಿ ಕುರಿ ತೆಗೆದುಕೊಂಡಿದ್ದ ನಮ್ಮಪ್ಪ. ಚೌಕಾಸಿ ಮಾಡುವುದರಲ್ಲಿ ಆತನದು ಎತ್ತಿದ ಕೈ. ಮಾರುವವರನ್ನು ಯಾಮಾರಿಸಿದ್ದ ಎಂದು ತಿಗಡೇಸಿ ಅಪ್ಪ ಹೇಳಿದ್ದ ಮಾತು ನೆನಪಿಗೆ ಬಂತು. ಆಗ ಯಾಮಾರಿ ಕುರಿಕೊಟ್ಟವನ ಮೊಮ್ಮಕ್ಕಳು ಈ ಐಡಿಯಾ ಮಾಡಿದಾರೋ ಏನೋ ಅವರದ್ದೇ ಇರಬೇಕು ಅಂದುಕೊಂಡ. ಅವರನ್ನು ಹೇಗೆ ಪತ್ತೆ ಮಾಡುವುದು? ಎಂದು ವಿಚಾರ ಮಾಡಿದ. ಮರುದಿನದಿಂದಲೇ ಲಾದುಂಚಿ.. ಇರಪಾಪುರ… ವರ್ನಖ್ಯಾಡೆ. ಹೊಸಗುಡ್ಡ.. ತೆಮ್ಮಿನಾಳ ಹೀಗೆ ಊರೂರು ತಿರುಗಿ ನಮ್ಮ ತಾತನಿಗೆ ಕುರಿ ಮಾರಿದವರ ಪತಾ ಗೊತ್ತ ಅಂತ ಕೇಳಿದ. ಅವರಾರೂ ಇಲ್ಲ.. ಇಲ್ಲ ಎಂದರು. ಕೊನೆಗೆ ಒಂದು ದಿನ ಶೇಷಮ್ಮನ ಹೋಟೆಲ್‌ನಲ್ಲಿ ಚಹ ಕುರಿಮರಿಗೌಡನಿಗೆ ಹೀಗೀಗೆ ತಿಗಡೇಸಿ ಕುರಿಮಾರಿದವರನ್ನು ಹುಡುಕುತ್ತಿದ್ದಾನೆ ಎಂಬ ವಿಷಯ ಗೊತ್ತಾಯಿತು. ತಲೆ ತಲಾಂತರದಿಂದ ಅವರ ಮನೆಯವರು ಕುರಿ ಮೇಯಿಸುತ್ತಿದ್ದರಿಂದ ಅವರಿಗೆ ಕುರಿ ಎಂಬ ಅಡ್ಡ ಹೆಸರು ಬಿದ್ದಿತ್ತು. ಕುರಿಯಲ್ಲಿ ನಮ್ಮಸ್ಟು ಎಕ್ಸಪರ್ಟ್ ಯಾರಿದ್ದಾರೆ? ತಿಗಡೇಸಿ ಯಾಕೆ ಕುರಿ ಮಾರಿದವರನ್ನು ಹುಡುಕುತ್ತಿದ್ದಾನೆ ಎಂದು ತಲೆ ಕೆಡೆಸಿಕೊಂಡ ಮರೆಪ್ಪ ತಿಗಡೇಸಿಯನ್ನು ಹುಡುಕಾಡಿದ. ಹಳ್ಳದ ದಂಡೆಯ ಮೇಲೆ ಕುಳಿತಿದ್ದ ತಿಗಡೇಸಿಯನ್ನು ಭೇಟಿಯಾಗಿ ಏನಿದೆಲ್ಲ ಅಂದಾಗ…ಆತ ಕೇಳಿದಾಗ ಆತ ಕಥೆ ಮಾಡಿ ಹೇಳಿದ. ಎಲ್ಲ ಕೇಳಿದ ಮರೆಪ್ಪ.. ಓ ಅದಾ… ಕುರಿ ಯಮನಪ್ಪನ ತಾತನ ಸೋದಳಿಯನ ಮೊಮ್ಮಗ ಸ್ಯಾಮಣ್ಣನ ತಂದೆಯೇ ನಿಮ್ಮ ತಾತನಿಗೆ ಕುರಿ ಮಾರಿದ್ದಾನೆ. ಆದರೆ ಅವರು ಈಗ ಈ ದೇಶದಲ್ಲಿ ಇಲ್ಲ. ನೀನು ತಲೆ ಕೆಡೆಸಿಕೊಳ್ಳಬೇಡ ಎಂದು ಹೇಳಿದರೂ ತಿಗಡೇಸಿಯಲ್ಲಿನ ಹೊಟ್ಟೆಯಲ್ಲಿನ ಭುಗುಲು ಹೋಗಲೇ ಇಲ್ಲ. ಅದೇ ಸಮಯದಲ್ಲಿ ಅಲ್ಲಿಗೆ ಬಂದ ಚಾಲಾಕಿ ಚಾಟಿನಿಂಗ ಈತನ ಕಥೆ ಕೇಳಿ… ಹೌದಾ ಎಂದು… ಚಿಂತೆ ಮಾಡಬೇಡ ಈ ಚಿನ್ಹೆಗೆ ಓಟು ಹಾಕು ಎಂದು ಆತನ ಹೆಗಲ ಮೇಲೆ ಕೈ ಹಾಕಿ ಮತಗಟ್ಟೆ ಕಡೆಗೆ ಕರೆದುಕೊಂಡು ಹೋದ.