ಜಿಮ್ಸ್ ಐಸಿಯುನಲ್ಲಿ ಹವಾನಿಯಂತ್ರಣ ಕೊರತೆ: ರೋಗಿಗಳ ಪರದಾಟ

ಜಿಮ್ಸ್ ಆಸ್ಪತ್ರೆಯ ನಾಲ್ಕನೇ ಮಹಡಿಯ ಐಸಿಯುನಲ್ಲಿ ಸೂಕ್ತ ಎಸಿ, ಫ್ಯಾನ್ ಇಲ್ಲದಿರುವುದರಿಂದ ರೋಗಿಯೊಬ್ಬ ಸ್ವಂತ ಫ್ಯಾನ್ ತಂದಿರುವುದು.
Advertisement

ಕಲಬುರಗಿ: ಜಿಮ್ಸ್ ಆಸ್ಪತ್ರೆಯ ನಾಲ್ಕನೇ ಮಹಡಿಯ `ಎಂಐಸಿಯು’ ಕೊಠಡಿಗಳಲ್ಲಿ ಸೂಕ್ತ ಹವಾನಿಯಂತ್ರಿತ ಅಥವಾ ಫ್ಯಾನ್ ವ್ಯವಸ್ಥೆ ಅಳವಡಿಸದಿರುವುದಕ್ಕೆ ರೋಗಿಗಳು ಪರದಾಡುವುದಲ್ಲದೆ, ಜೀವ ಕಳೆದುಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ಇದನ್ನರಿತ ರೋಗಿಯೊಬ್ಬರ ಕುಟುಂಬಸ್ಥರು ತಮ್ಮ ಮನೆಯಲ್ಲಿರುವ ಟೇಬಲ್ ಫ್ಯಾನ್ ಹಚ್ಚಿಕೊಂಡು ಜಿಮ್ಸ್ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಆದರೆ ದುರಾದೃಷ್ಟಕರ ಆ ರೋಗಿಯು ಕೊನೆಯುಸಿರೆಳೆದಿದ್ದಾನೆ.
ಆಳಂದ ತಾಲೂಕಿನ ದೇವಂತಗಿ ಗ್ರಾಮದ ವೀರೇಂದ್ರ ಚಿಂಚೋಳಿ(೪೫) ಎಂಬಾತ ಲೀವರ್ ಸಮಸ್ಯೆಯಿಂದ ಬಳಲಿ ಸಾವನಪ್ಪಿದ. ಕಳೆದ ದಿ. ೧೫ರಂದು ರೋಗಿ ಕೊನೆಯುಸಿರೆಳೆದಿದ್ದಾನೆ. ಜೀವನ್ಮರಣ ಹೋರಾಡುವ ರೋಗಿಗಳನ್ನು ಇಲ್ಲಿಗೆ ತಂದು ಹಾಕಿದರೂ, ಜೀವ ಉಳಿಯುವುದು ಗ್ಯಾರಂಟಿ ಇಲ್ಲದಂತಾಗಿದೆ. ಅಗತ್ಯ ಮೂಲಸೌಕರ್ಯ ಒದಗಿಸದೆ ನಿರ್ಲಕ್ಷ್ಯವಹಿಸಿರುವುದಕ್ಕೆ ರೋಗಿಗಳ ಕುಟುಂಬಸ್ಥರು ದೂರುತ್ತಿದ್ದಾರೆ. ೧೨ ಐಸಿಯು ಬೆಡ್ ಹೊಂದಿರುವ ಇಲ್ಲಿ, ಎರಡು ವಿಶೇಷ ಕೊಠಡಿಗಳಿದ್ದರೆ, ಉಳಿದೆಲ್ಲವು ಸಾಧಾರಣ ನಿಗಾವಹಿಸಲಾಗಿದೆ. ಇಲ್ಲಿ ಬಂದು ದಾಖಲಾದವರು ಬಹುತೇಕರು ಮರಳಿ ಗುಣಮುಖರಾಗಿ ಹೋದ ಉದಾಹರಣೆಗಳಿಲ್ಲ ಎನ್ನುತ್ತಾರೆ ಹಿಂದೂ ಜಾಗರಣ ಸಮಿತಿಯ ಮಹಾದೇವ ಕೋಟನೂರ ದೂರಿದ್ದಾರೆ. ಈ ನಡುವೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಸ್ವಂತ ಜಿಲ್ಲೆಯಲ್ಲಿ ಆಸ್ಪತ್ರೆಯ ಅವ್ಯವಸ್ಥೆ ಹೀಗಾದರೆ, ಬೇರೆ ಬೇರೆ ಜಿಲ್ಲೆಗಳ ಪರಿಸ್ಥಿತಿ ಏನಾಗಿರಬಹುದು ಎಂಬುದು ಊಹಿಸಲು ಸಾಧ್ಯವೇ? ಅಲ್ಲದೆ, ಈಗ ಬೇಸಿಗೆ ಆರಂಭವಾಗಿದ್ದರಿಂದ ಸಾರ್ವಜನಿಕ ಆಸ್ಪತ್ರೆಗಳಿಗೆ ಅಗತ್ಯ ಸೌಕರ್ಯ ಒದಗಿಸಬೇಕು. ಕೆಲವೊಂದು ಕಡೆ ನೀರಿನ ಸಮಸ್ಯೆ ಕೇಳಿ ಬರುತ್ತಿದೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಕಲಬುರಗಿ ಜಿಲ್ಲೆಯಲ್ಲಿ ಒಣ ಬಿಸಿಗಾಳಿ, ಉಷ್ಣಾಂಶ ಹೆಚ್ಚುತ್ತಿದ್ದರೂ ಸಹ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳದೆ ಸಾರ್ವಜನಿಕ ಆಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲಿ ಬರುವ ರೋಗಿಗಳುಪರಿಣಾಮಕಾರಿ ಚಿಕಿತ್ಸೆಯಿಂದ ವಂಚಿತರಾಗುವಂತಾಗಿದೆ.