ಗೂಗಲ್ ಮ್ಯಾಪ್ ನಂಬಿ ರಸ್ತೆಯಲ್ಲಿ ಸಿಲುಕಿಕೊಂಡ ಬಸ್

Advertisement

ಗೋಕರ್ಣ: ಸರಿಯಾದ ಮಾರ್ಗಸೂಚಿ ಫಲಕವಿಲ್ಲದೆ ಗೂಗಲ್ ಮ್ಯಾಪ್‌ನ ತಪ್ಪು ಮಾಹಿತಿ ಪಡೆದು ಬಂದ ಹೊರರಾಜ್ಯದ ಪ್ರವಾಸಿಗರ ಮಿನಿ ಬಸ್ ಪೊಲೀಸ್ ಸ್ಟೇಷನ್ ರಸ್ತೆಯಿಂದ ಇಳಿದು ಮುಖ್ಯ ರಸ್ತೆಗೆ ಹೋಗಲಾಗದೆ ಸಿಲುಕಿಕೊಂಡ ಘಟನೆ ರವಿವಾರ ಮುಂಜಾನೆ ನಡೆದಿದೆ. ಇದರಿಂದ ಹಲವು ಸಮಯ ವಾಹನ ದಟ್ಟಣೆ ಉಂಟಾಗಿ ಸಂಚಾರಕ್ಕೆ ತೊಡಕಾಯಿತು.
ಇದನ್ನು ಸರಿಪಡಿಸಲು ಪೊಲೀಸ್ ಠಾಣೆಗೆ ಫೋನ್ ಮಾಡಿದರೆ ಅಲ್ಲಿಯೂ ಪೊಲೀಸ್ ಸಿಬ್ಬಂದಿ ಬೇರೆಡೆ ಬಂದೋಬಸ್ತಿಗೆ ತೆರಳಿದ ಕಾರಣ ಪೊಲೀಸರು ಇಲ್ಲದೆ ಸ್ಥಳೀಯರ ಸಹಕಾರದಿಂದ ವಾಹನವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಲಾಯಿತು.
ಓಂ ಬೀಚ್ ರಸ್ತೆಯ ಬಂಗ್ಲೆಗುಡ್ಡ ಸರ್ಕಾರಿ ಶಾಲೆಯ ಹತ್ತಿರದಿಂದ ಪೊಲೀಸ್ ಸ್ಟೇಷನ್ ಮಾರ್ಗವಾಗಿ ಕವಳೆ ಮಠದ ಬಳಿ ಮುಖ್ಯ ರಸ್ತೆಗೆ ಕೊಡುವ ಈ ಮಾರ್ಗದಲ್ಲಿ ಇಳಿಜಾರಿನಲ್ಲಿ ಒಮ್ಮೆಲೇ ಮುಖ್ಯ ರಸ್ತೆಗೆ ದೊಡ್ಡ ವಾಹನ ತೆರಳಲು ಸಾಧ್ಯವಾಗುವುದಿಲ್ಲ ಆದರೆ ಹೊರ ಊರಿನಿಂದ ಬಂದವರಿಗೆ ಈ ಬಗ್ಗೆ ತಿಳಿಯದೆ ಆಗಮಿಸಿ ತೊಂದರೆಗೆ ಸಿಲುಕುತ್ತಿದ್ದಾರೆ. ದೊಡ್ಡ ವಾಹನ ಸಂಚರಿಸಲಾಗುವುದಿಲ್ಲ ಎಂದು ತಿಳಿಸುವ ಮಾಹಿತಿ ಫಲಕ ಈ ಜಾಗದಲ್ಲಿ ಅಳವಡಿಸಬೇಕಾಗಿತ್ತು. ಆದರೆ ಗ್ರಾಮ ಪಂಚಾಯತ್ ಮಾತ್ರ ತನಗೂ ಈ ವಿಚಾರಕ್ಕೂ ಸಂಬಂಧವಿಲ್ಲ ಎನ್ನುವಂತೆ ಕುಳಿತಿರುವುದಕ್ಕೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.