ಗುರಿ ಸಾಧಿಸಲು ಛಲ ಮುಖ್ಯ

Advertisement

ವಿದ್ಯಾರ್ಥಿ ಜೀವನ ಜೀವಿಯ ಜೀವಿತಾವಧಿಯ ಉತ್ಕೃಷ್ಟ ಸಮಯ. ಈ ಸಮಯವನ್ನು ವಿದ್ಯಾರ್ಥಿಗಳು ಎಷ್ಟು ಎಷ್ಟು ಸದುಪಯೋಗ ಪಡಿಸಿಕೊಳ್ಳುತ್ತಾರೋ ಅಷ್ಟು ಅಷ್ಟು ಅವರ ಜೀವನದ ಮುಂದಿನ ಹಾದಿ ಸುಗಮವಾಗುತ್ತಾ ಹೋಗುತ್ತದೆ.
ವಿದ್ಯಾರ್ಥಿ ಜೀವನದ ಪ್ರಮುಖ ಅಂಗ, ಜ್ಞಾನ ಸಂಪಾದನೆ, ಜ್ಞಾನ ಸಂಪಾದನೆಗೆ ಬೇಕಾದ ಮಾರ್ಗಗಳು ಹೇರಳವಾಗಿ ನಮ್ಮ ಮುಂದೆ ಇದ್ದರೂ ಮುಂದಿನ ದಾರಿಯ ಆಯ್ಕೆವೈಯಕ್ತಿಕ. ಹಾಗೆ ಮುಂದಿನ ದಾರಿಯನ್ನು ಆಯ್ಕೆ ಮಾಡುವಾಗ ನಿಶ್ಚಿತವಾದ ಗುರಿ ಇರಬೇಕು. ಆ ಗುರಿ ನಿಮ್ಮ ಸರ್ವತೋಮುಖ ಬೆಳವಣಿಗೆಗೆ ಹಾಗು ಸಮಾಜಕ್ಕೆ ಕೊಡುಗೆ ಕೊಡುವಂತಾಗಬೇಕು. ಒಂದು ಸಾರಿ ಗುರಿ ನಿಶ್ಚಯಿಸಿದ ಮೇಲೆ ಛಲದಿಂದ ಎಷ್ಟೇ ಕಷ್ಟ ಬಂದರೂ ಆ ಗುರಿಯನ್ನು ತಲುಪಬೇಕು.
ನಮಗೆ ಮಹಾಭಾರತದಲ್ಲಿ ಛಲದ ವಿಷಯ ಬಂದಾಗ ಮೊದಲು ಕಣ್ಣಿಗೆ ಕಾಣುವುದೇ ದುರ್ಯೋಧನ. ತನ್ನ ಗುರಿ ಮುಟ್ಟಲು ಸಾಧ್ಯವಾಗದೇ ಇದ್ದರೂ ಛಲಬಿಡದ ಮಹಾ ಪರಾಕ್ರಮಿ. ಆದರೆ ಅವನ ಗುರಿ ಸ್ವಾರ್ಥದಿಂದ ಹಾಗು ಮಾತ್ಸರ್ಯ ದಿಂದ ತುಂಬಿದ ದಾರಿಯಾಗಿತ್ತು ಅದಕ್ಕಾಗಿ ಅವನು ಎಷ್ಟೇ ಛಲದಿಂದ ಹೋರಾಡಿದರೂ ಅವನ ಹೋರಾಟ ವ್ಯರ್ಥವಾಯಿತು ಹಾಗು ಅದು ಅವನ ಅವಸಾನದಲ್ಲಿ ಸಮಾಪ್ತಿಯಾಯಿತು.
ಆದರೆ, ಭಾಗವತದಲ್ಲಿ ಧ್ರುವರಾಜರ ಕಥೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಸ್ಪೂರ್ತಿದಾಯಕ. ತಂದೆಯ ತೊಡೆಯ ಮೇಲೆ ಕೂಡಲು ಆಗದಿದ್ದಾಗ ತಾಯಿ ತೋರಿಸುವ ಮಾರ್ಗ ದೇವರನ್ನು ಸಾಕ್ಷಾತ್ಕರಿಸಿಕೊಳ್ಳುವುದು. ಇಲ್ಲಿ ಗುರಿ ತೋರಿಸುವ ತಾಯಿ/ಗುರು ಎಷ್ಟು ಮುಖ್ಯವಾಗುತ್ತಾರೋ ಹಾಗೆ ಆ ಗುರಿ ಮುಟ್ಟುವ ತನಕ ಆ ಸಣ್ಣ ವಯಸ್ಸಿನಲ್ಲೇ ಘೋರ ತಪಸ್ಸುಗೈದು ದೇವರನ್ನ ಸಾಕ್ಷಾತ್ಕರಿಸಿಕೊಂಡು ಗುರಿ ಮುಟ್ಟಿದ್ದ ಧ್ರುವರಾಜರ ಮನೋಸ್ಥೈರ್ಯ ನಮಗೆಲ್ಲಾ ಸ್ಫೂರ್ತಿದಾಯಕ.
ಈ ಎರಡೂ ಪುರಾಣದ ಪ್ರಸಂಗಗಳು ಛಲ, ಸಾಧನೆಗೆ ಪ್ರೇರಣೆ ನೀಡಿದರೂ, ಒಂದು ನಿರ್ದಿಷ್ಟವಾದ ಉತ್ತಮ ಗುರಿ ಹೊಂದಿದ ಬಾಲಕನಾದ ಧ್ರುವರಾಜರ ಕಥೆ ನಮಗೆಲ್ಲಾ ಪ್ರೇರಣೆಯಾಗಬೇಕು.
ನಮ್ಮ ಯಾವುದೇ ಆಸೆ, ಆಕ್ಷಾಂಶೆಗಳು ಹಲವಾರು ಇದ್ದರೂ ಸಾಧಿಸುವ ಗುರಿಯ ಆಯ್ಕೆ ಉನ್ನತವಾಗಿರಬೇಕು ಹಾಗು ಸಾಧಿಸಬೇಕೆಂಬ ಛಲ ಮೈಗೂಡಿಸಿಕೊಳ್ಳಬೇಕು.